ಟಾಪ್ 5 ನ್ಯೂಸ್ ಮಲ್ನಾಡ್
– ಎಂಎಲ್ಸಿ ಡಾ. ಧನಂಜಯ ಸರ್ಜಿ ಹೆಸರಲ್ಲಿ ವಿಷಪೂರಿತ ಸಿಹಿತಿಂಡಿ ರವಾನೆ!
– ಭದ್ರಾವತಿ : ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯವಾಗಿ ಬೈದಾಡುತ್ತಿದ್ದ ಯುವಕ ಅರೆಸ್ಟ್
– ಕೊಪ್ಪ: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ: ಅಪಾಯದಿಂದ ಪಾರು
– ರಿಪ್ಪನ್ ಪೇಟೆ : ಅರಣ್ಯದಲ್ಲಿ ಅಕ್ರಮವಾಗಿ ಸಾಗವಾನಿ ಮರಗಳ ಕಡಿತ
– ಆಯನೂರು : ಬೈಕ್ ಕಾರು ಡಿಕ್ಕಿ: ಬೈಕ್ ಸವಾರನಿಗೆ ಗಂಭೀರ ಗಾಯ
NAMMUR EXPRESS NEWS
ಶಿವಮೊಗ್ಗ: ಹೊಸ ವರ್ಷಾಚರಣೆಯಂದು ಬಿಜೆಪಿ ಎಂಎಲ್ಸಿ ಡಾ.ಧನಂಜಯ್ ಸರ್ಜಿ ಅವರ ಹೆಸರಿನಲ್ಲಿ ವಿಷಪೂರಿತ ಸಿಹಿತಿಂಡಿಗಳ ಬಾಕ್ಸ್ಗಳನ್ನು ಮೂವರಿಗೆ ಕಳುಹಿಸಿದ ದುಷ್ಕರ್ಮಿಗಳ ವಿರುದ್ಧ ಸರ್ಜಿ ಅವರ ಆಪ್ತ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಹಿತಿಂಡಿಗಳ ಬಾಕ್ಸ್ ಸ್ವೀಕರಿಸಿದ ಮೂವರಲ್ಲಿ ನ್ಯಾಷನಲ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಎಸ್ ಎನ್ ನಾಗರಾಜ್ ಸಹ ಒಬ್ಬರಾಗಿದ್ದಾರೆ. ಜನವರಿ 1ರಂದು ಅಜ್ಞಾತ ವ್ಯಕ್ತಿಗಳು ಡಾ. ಸರ್ಜಿ ಅವರ ಹೆಸರನ್ನು ಬಳಸಿಕೊಂಡು, ಡಿಟಿಡಿಸಿ ಕೊರಿಯರ್ ಮೂಲಕ ಹೊಸ ವರ್ಷದ ಶುಭಾಶಯ ಪತ್ರದ ಜೊತೆಗೆ ಸಿಹಿತಿಂಡಿಗಳ ಬಾಕ್ಸ್ ಕಳುಹಿಸಿದ್ದಾರೆ. ಬಾಕ್ಸ್ ಸ್ವೀಕರಿಸಿದ ನಾಗರಾಜ್ ಅವರು ಸಿಹಿತಿಂಡಿಗಳನ್ನು ಸೇವಿಸಿದ್ದಾಗ ಅದು ತೀವ್ರ ಕಹಿಯಾಗಿತ್ತು. ಕೂಡಲೇ ನಾಗರಾಜ್ ಅವರು ಡಾ.ಸರ್ಜಿ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಸರ್ಜಿ ತಾನು ಯಾರಿಗೂ ಸಿಹಿತಿಂಡಿಗಳನ್ನು ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಗ ಇದು ಅವರ ಹೆಸರಿನಲ್ಲಿ ಬೇರೆ ಯಾರೋ ಕಳುಹಿಸಲಾದ ಸಿಹಿತಿಂಡಿಗಳಾಗಿದ್ದು, ವಿಷಕಾರಿ ಪದಾರ್ಥ ಕಲಬೆರಕೆ ಮಾಡಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಸಿಹಿತಿಂಡಿ ಕಳುಹಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಸರ್ಜಿ ಅವರ ಆಪ್ತ ಕಾರ್ಯದರ್ಶಿ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೆಚ್ಚಿನ ತನಿಖೆಗಾಗಿ ಪೊಲೀಸರು ಸಿಹಿತಿಂಡಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಇದೇ ರೀತಿಯ ಸಿಹಿತಿಂಡಿಯನ್ನು ಅರವಿಂದ್ ಮತ್ತು ಪವಿತ್ರಾ ಎಂಬ ಇಬ್ಬರು ವೈದ್ಯರಿಗೆ ಕಳುಹಿಸಲಾಗಿದೆ. ಭದ್ರಾವತಿಯಿಂದ ಕೊರಿಯರ್ ಕಳುಹಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
– ಭದ್ರಾವತಿ : ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯವಾಗಿ ಬೈದಾಡುತ್ತಿದ್ದ ಯುವಕ ಅರೆಸ್ಟ್
ಭದ್ರಾವತಿ : ಗಾಂಧಿ ಪಾರ್ಕ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯವಾಗಿ ಬೈದಾಡುತ್ತಿದ್ದ ಯುವಕನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆತ ಗಾಂಜಾ ಸೇವಿಸಿರುವುದು ದೃಢವಾದ ಹಿನ್ನೆಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪ್ರವೀಣ್ ಅಲಿಯಾಸ್ ಭೂತ ಎಂದು ಗುರುತಿಸಲಾಗಿದೆ. ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಕೊಪ್ಪ: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ
ಕೊಪ್ಪ: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಗಳಗಂಡಿ ಗ್ರಾಮದ ಬೆಳವಿನ ಕುಂಬ್ರಿ ಎಂಬಲ್ಲಿ ನಡೆದಿದೆ. ಬೆಂಗಳೂರು ಮೂಲದ ಯಾತ್ರಾರ್ತಿ ಗಳು ಶೃಂಗೇರಿ ಶಾರದಾಂಬೆ ದರ್ಶನ್ ಮುಗಿಸಿ ಹೊರನಾಡಿಗೆ ಪ್ರಯಾಣಿಸುವಾಗ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ ನಲ್ಲಿ ಇದ್ದ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.
– ರಿಪ್ಪನ್ ಪೇಟೆ : ಅರಣ್ಯದಲ್ಲಿ ಅಕ್ರಮವಾಗಿ ಸಾಗವಾನಿ ಮರಗಳ ಕಡಿತ
ರಿಪ್ಪನ್ಪೇಟೆ : ಅರಸಾಳು ವಲಯ ಅರಣ್ಯ ವ್ಯಾಪ್ತಿಯ ಅರಸಾಳು ಗ್ರಾಮದಲ್ಲಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗವಾನಿ ಮರಗಳನ್ನು ಕಡಿತಲೆ ಮಾಡಲಾಗಿದೆ. ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಮರಗಳನ್ನು ಕಡಿದಿರುವ ಮಾಹಿತಿ ಲಭ್ಯವಾದ ಹಿನ್ನೆಲೆ ಅರಣ್ಯಾಧಿಕಾರಿಗಳು ಮರ ಕಡಿದಿರುವ ಸ್ಥಳವನ್ನು ಪತ್ತೆಹಚ್ಚಿದ್ದಾರೆ. ಸ್ಥಳದಲ್ಲಿ ಬೃಹದಾಕಾರದ 5 ಸಾಗವಾನಿ ಮರಗಳನ್ನು ಕಡಿದಿರುವುದು ಕಂಡುಬಂದಿದೆ. ಬೇರೆಡೆಗೆ ಸಾಗಿಸಲು ಇರಿಸಿದ್ದ 16 ತುಂಡುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್ಎಫ್ಒ ಶರಣಪ್ಪ, ಡಿಆರ್ಎಫ್ಒ ಮಹೇಶ್ ನಾಯ್ಕ, ಅರಣ್ಯ ರಕ್ಷಕ ಕುಮಾರ್ ಮಾಂಗ್, ಅನಿಲ, ಸಿಬ್ಬಂದಿ ಪಾಲ್ಗೊಂಡಿದ್ದರು.
– ಆಯನೂರು : ಬೈಕ್ ಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯ.
ಆಯನೂರು : ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಬೈಕ್ಗೆ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಸಂಜಯ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೆ ಸಂಜಯ್ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದ್ಯಾವಿನಕೆರೆ ಕಡೆಯಿಂದ ವೇಗವಾಗಿ ಬಂದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.