ಟಾಪ್ 5 ನ್ಯೂಸ್ ಮಲ್ನಾಡ್
– ಶಿವಮೊಗ್ಗ : ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆರಿಗೆಯಾದ ಕೆಲ ಗಂಟೆಗಳಲ್ಲಿಯೇ ಮಹಿಳೆ ಸಾವು..!
– ಶಿರಾಳಕೊಪ್ಪ : ಬೈಕ್ ಕಳ್ಳತನ ಪ್ರಕರಣದಲ್ಲಿ ಓರ್ವನ ಬಂಧನ!
– ಶಿವಮೊಗ್ಗ : ಡಾ.ಸರ್ಜಿ ಹೆಸರಿನಲ್ಲಿ ಸಿಹಿ ಕಳುಹಿಸಿದ ಆರೋಪಿಗೆ ನ್ಯಾಯಾಂಗ ಬಂಧನ
– ಶಿಕಾರಿಪುರ: ಮನೆಯೊಂದರಲ್ಲಿ ಕಳವು ನಡೆಸಿದ್ದ ಆರೋಪಿಯ ಬಂಧನ
– ಸೊರಬ : ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಚಿನ್ನದ ಮಾಂಗಲ್ಯ ಸರವನ್ನು ಕಿತ್ತ ದುಷ್ಕರ್ಮಿಗಳು
NAMMUR EXPRESS NEWS
ಶಿವಮೊಗ್ಗ : ರಾಜ್ಯದ ವಿವಿಧೆಡೆ ಬಾಣಂತಿರ ಸಾವು ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ, ಶಿವಮೊಗ್ಗ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ, ಹೆರಿಗೆಯಾದ ಕೆಲ ಗಂಟೆಗಳಲ್ಲಿಯೇ ಮಹಿಳೆಯೋರ್ವರು ಮೃತಪಟ್ಟ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಶಂಶೀಪುರ ನಿವಾಸಿಯಾದ ಕವಿತಾ (24) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಜಿಲ್ಲೆಯ ಮೈದೊಳಲು ಮಲ್ಲಾಪುರ ಗ್ರಾಮದಲ್ಲಿದ್ದ ಕವಿತಾ ಅವರು, ಎರಡನೇ ಹೆರಿಗಾಗಿ ಜನವರಿ 1 ರಂದು ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ ಗೆ ದಾಖಲಾಗಿದ್ದರು. ಜ. 3 ರಂದು ಬೆಳಿಗ್ಗೆ ಸುಮಾರು 8. 25 ಕ್ಕೆ ಕವಿತಾ ಅವರಿಗೆ ಸಹಜ ಹೆರಿಗೆಯಾಗಿತ್ತು. 3. 5 ಕೆಜಿ ತೂಕದ ಮಗು ಜನಿಸಿತ್ತು. ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದರು. ತದನಂತರ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು’ ಎಂದು ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕರಾದ ಡಾ. ತಿಮ್ಮಪ್ಪ ಅವರು ತಿಳಿಸಿದ್ದಾರೆ. ಶನಿವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಹೆರಿಗೆಯಾದ ಎರಡು ಗಂಟೆ ನಂತರ, ದಿಢೀರ್ ಆಗಿ ಅವರಲ್ಲಿ ತೀವ್ರ ಸ್ವರೂಪದ ರಕ್ತಸ್ರಾವ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣವೇ ಅವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಅವರಿಗೆ ಹೃದಯಾಘಾತವಾಗಿತ್ತು. ಸಾಕಷ್ಟು ವೈದ್ಯೋಪಚಾರದ ನಡುವೆಯೂ ಅವರು ಬದುಕುಳಿಯಲಿಲ್ಲ’ ಎಂದು ಮಾಹಿತಿ ನೀಡಿದ್ದಾರೆ. ಕವಿತಾ ಅವರು ಹೆರಿಗೆಗೆ ದಾಖಲಾದ ವೇಳೆ ಹಾಗೂ ಹೆರಿಗೆ ಪೂರ್ವದ ತಪಾಸಣೆ ವೇಳೆಯಲ್ಲಿ ಅವರ ಬಿಪಿ, ಪಲ್ಸ್, ರಕ್ತಕ್ಕೆ ಸಂಬಂಧಿಸಿದ ಹಿಮೋಗ್ಲೊಬಿನ್, ಪ್ಲೆಟೇಟ್, ಅಲ್ಟ್ರಾಸೌಂಡ್ ಸೇರಿದಂತೆ ಮತ್ತೀತರ ಪರೀಕ್ಷೆಗಳು ನಾರ್ಮಲ್ ಆಗಿತ್ತು. ಆರೋಗ್ಯವಾಗಿಯೇ ಇದ್ದರು. ಆದರೆ ದಿಢೀರ್ ಕಾಣಿಸಿಕೊಂಡ ತೀವ್ರ ಸ್ವರೂಪದ ರಕ್ತಸ್ರಾವ ಸಮಸ್ಯೆ, ತದನಂತರ ಉಂಟಾದ ಹೃದಯಾಘಾತದಿಂದ ಮೃತಪಡುವಂತಾಗಿದೆ’ ಎಂದು ಹೇಳಿದ್ದಾರೆ.
– ಶಿರಾಳಕೊಪ್ಪ : ಬೈಕ್ ಕಳ್ಳತನ ಪ್ರಕರಣದಲ್ಲಿ ಓರ್ವನ ಬಂಧನ!
ಶಿರಾಳಕೊಪ್ಪ : ಬೈಕ್ ಕಳವು ಮಾಡಿದ್ದ ಆರೋಪದ ಮೇರೆಗೆ ಓರ್ವನನ್ನು ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಠಾಣೆ ಪೊಲೀಸರು ಬಂಧಿಸಿ, ಕಳವು ಮಾಡಿದ್ದ ಎರಡು ಬೈಕ್ ಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಸೊರಬ ತಾಲೂಕಿನ ಹುಣಸವಳ್ಳಿ ಗ್ರಾಮದ ನಿವಾಸಿ ವೀರಭದ್ರಪ್ಪ (40) ಬಂಧಿತ ಆರೊಪಿ ಎಂದು ಗುರುತಿಸಲಾಗಿದೆ. 4-1-2025 ರಂದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಆರೋಪಿ ಬಂಧನದಿಂದ ಶಿರಾಳಕೊಪ್ಪ ಹಾಗೂ ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ತಲಾ ಒಂದೊಂದು ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದೆ. 60 ಸಾವಿರ ರೂ. ಮೌಲ್ಯದ ಸ್ಟಾರ್ ಸಿಟಿ ಬೈಕ್ ಹಾಗೂ 35 ಸಾವಿರ ರೂ. ಮೌಲ್ಯದ ಫ್ಯಾಷನ್ ಪ್ರೋ ಬೈಕ್ ನ್ನು ಆರೋಪಿಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿಕಾರಿಪುರ ಡಿವೈಎಸ್ಪಿ ಕೇಶವ ಕೆ ಇ ಮೇಲ್ವಿಚಾರಣೆಯಲ್ಲಿ ಶಿಕಾರಿಪುರ ನಗರ ವೃತ್ತದ ಇನ್ಸ್’ಪೆಕ್ಟರ್ ರುದ್ರೇಶ್ ಮಾರ್ಗದರ್ಶನದಲ್ಲಿ ಸಬ್ ಇನ್ಸ್’ಪೆಕ್ಟರ್ ಪುಷ್ಪ ನೇತೃತ್ವದಲ್ಲಿ ಹೆಚ್ ಸಿ ಗಳಾದ ಸಂತೊಷ್ ಕುಮಾರ್, ಪಿಸಿಗಳಾದ ಸಲ್ಮಾನ್ ಖಾನ್, ಕಾರ್ತಿಕ್, ಕಾಂತೇಶ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
– ಶಿವಮೊಗ್ಗ : ಡಾ.ಸರ್ಜಿ ಹೆಸರಿನಲ್ಲಿ ಸಿಹಿ ಕಳುಹಿಸಿದ ಆರೋಪಿಗೆ ನ್ಯಾಯಾಂಗ ಬಂಧನ
ಶಿವಮೊಗ್ಗ : ಎಂಎಲ್ ಸಿ ಡಾ.ಧನಂಜಯ ಸರ್ಜಿ ಅವರ ಹೆಸರಿನಲ್ಲಿ ಕಹಿ ಸಿಹಿ ಹಂಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಕೋಟೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪ್ರಕರಣದ ಕುರಿತಂತೆ ಮಾಹಿತಿ ನೀಡಿದ ಎಸ್ಪಿ ಮಿಥುನ್ ಕುಮಾರ್ ಸೌಹಾರ್ದ್ ಪಟೇಲ್ ಎಂಬ ಭದ್ರಾವತಿ ಯುವಕನನ್ನ ಕೋಟೆ ಪೊಲೀಸರು ನ್ಯಾಯಾಂಗ ಬಂಧಕ್ಕೆ ಕಳುಹಿಸಿರುವುದಾಗಿ ತಿಳಿಸಿದರು. ಶಿವಮೊಗ್ಗದ ಕಾನೂನು ಕಾಲೇಜಿನಲ್ಲಿ ಓದುವಾಗ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ ಸೌಹಾರ್ಧ ಪಟೇಲ್ ಗೆ ಎನ್ ಇ ಎಸ್ ಸಂಸ್ಥೆಯ ಸೆಕ್ರೆಟರಿ ನಾಗರಾಜ್ ಹಾಗೂ ಕೆಲವರು ಸೇರಿ ಬುದ್ಧಿವಾದ ಹೇಳಿದ್ದರು. ಪಟೇಲ್ ಅವರ ತಂದೆ ತಾಯಿ ಹತ್ತಿರ ವಿಷಯ ಮಾತನಾಡಿ ಆ ಹುಡುಗಿ ತಂಟೆಗೆ ಹೋಗದಂತೆ ನೋಡಿಕೊಂಡಿದ್ದರು. ಆ ನಂತರ ಹುಡುಗಿ ಬೇರೆ ಒಬ್ಬರ ಜೊತೆ ಮದುವೆಯಾದಾಗ ಈತನಿಗೆ ಇವರ ಮೇಲೆ ದ್ವೇಷ ಶುರುವಾಗಿತ್ತು ಕಾರ್ಯಕ್ರಮವೊಂದರಲ್ಲಿ ಡಾ.ಸರ್ಜಿ ಮತ್ತು ನಾಗರಾಜ್ ಅವರನ್ನ ನೋಡಿದ ಪಟೇಲ್ ಗೆ ಅವರ ಭಾಷಣದ ಬಗ್ಗೆನೂ ದ್ವೇಷ ತುಂಬಿಸಿಕೊಂಡಿದ್ದ. ಇವರ ವಿರುದ್ಧ ರೈವಲ್ವರಿ ಹಿನ್ನಲೆಯಲ್ಲಿ ಮಾತ್ರೆಗಳನ್ನ ಖರೀದಿಸಿ ನಾಗರಾಜ್ ಮತ್ತು ಇತರೆ ಇಬ್ಬರು ವೈದ್ಯರಿಗೆ ಸಿಹಿಯ ಮೇಲೆ ಮಾತ್ರೆಗಳನ್ನ ಉದುರಿಸಿ ಕಳುಹಿಸಿದ್ದ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಜಿ ಅವರ ಫ್ಯಾನ್ ಫಾಲೋ ಸಹ ಈ ಪಟೇಲ್ ಆಗಿದ್ದ.
– ಶಿಕಾರಿಪುರ: ಮನೆಯೊಂದರಲ್ಲಿ ಕಳವು ನಡೆಸಿದ್ದ ಆರೋಪಿಯ ಬಂಧನ
ಶಿಕಾರಿಪುರ : ಮನೆಯೊಂದರಲ್ಲಿ ಕಳವು ನಡೆಸಿದ್ದ ಆರೋಪಿಯನ್ನು ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಘಟನೆ ನಡೆದಿದೆ. ಶಿಕಾರಿಪುರ ತಾಲೂಕು ಚುರ್ಚುಗುಂಡಿ ಗ್ರಾಮ ಸಾಲೂರು ಬೀದಿ ನಿವಾಸಿ ನಿವಾಸಿ ಶಿವರಾಜ್ ಪಿ ಎಸ್ ಯಾನೆ ಶಿವು (28) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. 3-1-2025 ರಂದು ಈತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 6,30,000 ರೂ. ಮೌಲ್ಯದ 90.4 ಗ್ರಾಂ ತೂಕದ ಬಂಗಾರದ ಆಭರಣ ಮತ್ತು 6,000 ರೂ. ಮೌಲ್ಯದ 60 ಗ್ರಾಂ ತೂಕದ ಬೆಳ್ಳಿಯ ಆಭರಣ ಹಾಗು ಕೃತ್ಯಕ್ಕೆ ಬಳಸಿದ 80,000 ರೂ. ಮೌಲ್ಯದ ಹಿರೋ ಹೆಚ್.ಎಫ್.ಡಿಲೆಕ್ಸ್ ಬೈಕ್ ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ ಅಂದಾಜು 7,16,000 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಜ. 4 ರಂದು ಬಿಡುಗಡೆ ಮಾಡಿದೆ. ಡಿವೈಎಸ್ಪಿ ಕೇಶವ ಕೆ ಇ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಆರ್ ಆರ್ ಪಾಟೀಲ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಶೋಭಾರಾಣಿ, ಅಕ್ಬರ್ ಮುಲ್ಲಾ, ಸಿಬ್ಬಂದಿಗಳಾದ ಹೆಚ್.ಸಿ. ಗಳಾದ ನಾಗರಾಜ್, ರಾಘವೇಂದ್ರ, ಪಿಸಿಗಳಾದ ಪ್ರಶಾಂತ್, ಹಜರತ್ ಅಲಿ, ಜಾಫರ್, ಶೇಖರ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
– ಸೊರಬ : ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಚಿನ್ನದ ಮಾಂಗಲ್ಯ ಸರವನ್ನು ಕಿತ್ತ ದುಷ್ಕರ್ಮಿಗಳು
ಸೊರಬ : ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಅಂದಾಜು 25 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತು ದುಷ್ಕರ್ಮಿಗಳಿಬ್ಬರು ಬೈಕ್ನಲ್ಲಿ ಪರಾರಿಯಾದ ಘಟನೆ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೊರಬ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಕಾನುಕೇರಿ ಬಡಾವಣೆ ನಿವಾಸಿ ಲಕ್ಷ್ಮೀಬಾಯಿ ಸರ ಕಳೆದುಕೊಂಡವರು. ಸೊರಬ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಮರುಳುತ್ತಿದ್ದ ವೇಳೆ ಮಹಿಳೆಯನ್ನು ದಾರಿಯಲ್ಲಿ ತಡೆದ ಇಬ್ಬರು ಅಪರಿಚಿತ ವ್ಯಕ್ತಿಗಳು, ಈ ಕೃತ್ಯ ಎಸಗಿದ್ದಾರೆ. ಪ್ರಕರಣ ಸೊರಬ ಠಾಣೆಯಲ್ಲಿ ದಾಖಲಾಗಿದೆ.