ಟಾಪ್ ನ್ಯೂಸ್ ಮಲ್ನಾಡ್
ಹಬ್ಬದ ವೇಳೆ ಏನೇನ್ ಆಯ್ತು!
– ಸೊರಬ: ಬೈಕ್ ಮತ್ತು ಕಾರಿನ ಡಿಕ್ಕಿ: ಓರ್ವ ಸಾವು
– ಹೊಸನಗರ : ಕಾಡು ಹಂದಿ ಬೇಟೆಗಾರರ ಬಂಧನ
– ಹುಂಚ : ಕಲ್ಲು ಕ್ವಾರೆಯಲ್ಲಿ ನಿಗೂಢ ಸಾವು
– ಶಿವಮೊಗ್ಗ: ಮುಂದುವರೆದ ಕಾಡಾನೆಗಳ ಹಾವಳಿ
NAMMUR EXPRESS NEWS
ಸೊರಬ: ಬೈಕ್ ಮತ್ತು ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಕೋಡೂರು ಮೂಲದ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಸಮೀಪದ ಜೋಳದಗುಡ್ಡೆಯ ವರದಾನದಿ ಸೇತುವೆ ಬಳಿ ನಡೆದಿದೆ. ಈ ಅಪಘಾತದಲ್ಲಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಬುಲ್ಲೋಜರ್ ಗುಡ್ಡ ಗ್ರಾಮದ ನಿವಾಸಿ ಸುದರ್ಶನ ಬಂದಿಗೇರ್ (22) ಮೃತಪಟ್ಟ ಯುವಕನಾಗಿದ್ದಾನೆ. ಸುದರ್ಶನ ತನ್ನ ಅತ್ತೆ ಬೆಳ್ಳಮ್ಮ ಪುಟ್ಟಪ್ಪ (65) ಜೊತೆಯಲ್ಲಿ ಬೈಕ್ ನಲ್ಲಿ ಹೊಸನಗರದಿಂದ ಚಂದ್ರಗುತ್ತಿ ಸಮೀಪದ ಭದ್ರಾಪುರ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾರುತಿ 800 ಕಾರು ಡಿಕ್ಕಿಯಾಗಿ ಬೈಕ್ ಸವಾರ ಸುದರ್ಶನ್ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ,ಅಪಘಾತದಲ್ಲಿ ತೀವ್ರ ಗಾಯಗೊಂಡ ಬೆಳ್ಳಮ್ಮ ಪುಟ್ಟಪ್ಪ ರವರಿಗೆ ಸೊರಬದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
– ಹೊಸನಗರ : 40 ಕೆಜಿ ಮಾಂಸ ಸಮೇತ ಕಾಡು ಹಂದಿ ಬೇಟೆಗಾರರ ಬಂಧನ
ಹೊಸನಗರ : ತಾಲೂಕಿನ ಹರತಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಣಸವಳ್ಳಿ ಗ್ರಾಮದಲ್ಲಿ ನಡೆದಿದೆ. ಕಾಡುಹಂದಿಯನ್ನು ಬೇಟೆಯಾಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಮೂವರ ವಿರುದ್ಧ ಪ್ರಕರಣ ದಾಖಲಿಸಿ ಓರ್ವನನ್ನು ಬಂಧಿಸಿದ್ದಾರೆ. ಕೆ ಹುಣಸವಳ್ಳಿ ಗ್ರಾಮದ ಡಾಕಪ್ಪ ಬಿನ್ ಮಂಜಪ್ಪ, ಕಾರ್ತಿಕ್ ಬಿನ್ ಡಾಕಪ್ಪ ಹಾಗೂ ಗಣೇಶ ಬಿನ್ ಈಶ್ವರನಾಯ್ಕ ಎಂಬುವವರು ಕಾಡು ಹಂದಿಯನ್ನು ಬೇಟೆಯಾಡಿ ಮಾಂಸ ತಯಾರಿಸುತ್ತಿದ್ದಾರೆಂದು ಖಚಿತ ಮಾಹಿತಿ ಮೇರೆಗೆ ಎಸಿಎಫ್ ಮೋಹನ್ ಕುಮಾರ್ ನೇತೃತ್ವದ ಅಲಗೇರಿಮಂಡ್ರಿ ವ್ಯಾಪ್ತಿಯ ಡಿ.ಆರ್.ಎಫ್.ಓ ನವೀನ್ ಕುಮಾರ್ ತಂಡ ಅಂದಾಜು 40 ಕೆ.ಜಿ ಮಾಂಸ ಸಮೇತ ಆರೋಪಿ ಗಣೇಶ್ ಬಿನ್ ಈಶ್ವರ್ ನಾಯ್ಕ ನ್ನು ಬಂಧಿಸಿದ್ದು ಇನ್ನಿಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಎಸಿಎಫ್ ಮೋಹನ್ ಕುಮಾರ್, ಆರ್ಎಫ್ಒ ಅನಿಲ್ ಕುಮಾರ್, ಡಿ.ಆರ್.ಎಫ್.ಓ ನವೀನ್ ಕುಮಾರ್, ಅರಣ್ಯ ರಕ್ಷಕರಾದ ರಾಜು ಎನ್, ಪುಟ್ಟಸ್ವಾಮಿ, ಭರತ್ ಹಾಗೂ ಇನ್ನಿತರ ಸಿಬ್ಬಂದಿಗಳಿದ್ದರು.
– ಹುಂಚ : ಕಲ್ಲು ಕ್ವಾರೆಯಲ್ಲಿ ಜಾರ್ಖಂಡ್ ಮೂಲದ ವ್ಯಕ್ತಿಯ ನಿಗೂಢ ಸಾವು
ಹುಂಚ : ಜಾರ್ಖಂಡ್ ಮೂಲದ ಕಾರ್ಮಿಕನೊಬ್ಬ ನಿಗೂಡವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಪಂ ವ್ಯಾಪ್ತಿಯ ಹೊಂಡಲಗದ್ದೆ ಗ್ರಾಮದಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಉದಯ್ (26) ಎಂಬ ಕಾರ್ಮಿಕ ಹೊಂಡಲಗದ್ದೆಯ ಕ್ಯಾರೆಯೊಂದರಲ್ಲಿ ಕೆಲಸ ಮಾಡುತಿದ್ದು ನಿಗೂಡವಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ಉತ್ತರ ಭಾರತದ ಹಲವು ಕಾರ್ಮಿಕರು ಈ ಕಲ್ಲು ಕ್ವಾರೆಯಲ್ಲಿ ಕೆಲಸ ನಿರ್ವಹಿಸುತಿದ್ದು ಜಾರ್ಖಂಡ್ ಮೂಲದ ಉದಯ್ ನಿಗೂಡವಾಗಿ ಸಾವನ್ನಪ್ಪಿದ್ದಾನೆ. ವಿಪರೀತ ಸಿಡಿಲು ಸಹಿತ ಮಳೆಯಾಗಿದ್ದು ಉದಯ್ ಸಿಡಿಲು ಬಡಿದು ಸಾವನ್ನಪ್ಪಿರಬಹುದು ಅಥವಾ ಗಣಿ ಬ್ಲಾಸ್ಟ್ ನಿಂದ ಸತ್ತಿರಬಹುದು ಎಂಬ ಊಹಾಪೋಹಗಳು ಸ್ಥಳೀಯರಲ್ಲಿ ಹುಟ್ಟಿಕೊಂಡಿತ್ತು. ಈ ಉಹಾಪೋಹಗಳಿಗೆ ಪೂರಕವೆಂಬಂತೆ ಕಲ್ಲು ಕ್ವಾರೆಯ ಮಾಲೀಕರು ಹಾಗೂ ಸಂಬಂಧಿಸಿದವರು ಘಟನೆಯ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಮುಟ್ಟಿಸದೇ ಆತುರ ಆತುರದಲ್ಲಿ ಕೋಣಂದೂರು ಆಸ್ಪತ್ರೆಗೆ ಮೃತದೇಹವನ್ನು ಕರೆದೊಯ್ದು ಸ್ವಾಭಾವಿಕ ಸಾವು ಎಂಬ ರಿಪೋರ್ಟ್ ರೆಡಿ ಮಾಡಿಸಿ ರಾತ್ರೋರಾತ್ರಿ ಮೃತದೇಹವನ್ನು ಜಾರ್ಖಂಡ್ ಗೆ ಕಳುಹಿಸಿಕೊಟ್ಟಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ರಿಪ್ಪನ್ಪೇಟೆ ಪಿಎಸ್ಐ ಪ್ರವೀಣ್ ಎಸ್ ಪಿ ಸಂಬಂಧಿಸಿದವನ್ನು ವಿಚಾರಣೆಗೆ ಒಳಪಡಿಸಿ ಘಟನೆಯ ಸತ್ಯಾಸತ್ಯತೆ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ. ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಜಾರ್ಖಂಡ್ ಗೆ ಕರೆದೊಯ್ದಿದ್ದ ಉದಯ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಾಪಾಸ್ಸು ಕರೆತರಲಾಗುತ್ತಿದೆ ಎನ್ನಲಾಗುತ್ತಿದೆ.
– ಶಿವಮೊಗ್ಗ : ಕಾಡಾನೆಗಳ ಹಾವಳಿ, ಸಾವಿರಾರು ಅಡಿಕೆ ಮರ ನಷ್ಟ
ಶಿವಮೊಗ್ಗ: ಆಯನೂರು ಹೋಬಳಿಗಳಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದೆ. ಡಿಎಫ್ ಒ ಕಚೇರಿ ಎದುರು ಪುರುದಾಳಿನ ರೈತರು ಮೂರು ದಿನಗಳ ಹಿಂದೆ ಡಿಎಫ್ ಒ ಕಚೇರಿ ಎದುರು ಪ್ರತಿಭಟಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದರು. ಈಗ ಗುಡ್ಡದ ಅರಕೆರೆ ರೈತರು ಪ್ರತಿಭಟನೆಯ ಎಚ್ಚರಿಕೆ ನೀಡಿದರೆ ಸಿರಿಗೆರೆ ರೈತರು ಆತ್ಮಹತ್ಯೆಯ ದಾರಿ ಹಿಡಿಯುವುದಾಗಿ ಎಚ್ಚರಿಸಿದ್ದಾರೆ. ಕಾಡಾನೆಗಳ ಹಾವಳಿಯಿಂದ ಆಯನೂರು ಹೋಬಳಿ ಸಿರಿಗೆರೆ, ಪುರುದಾಳು, ಆಲದೇವರ ಹೊಸೂರು ಸರ್ವೆ ನಂಬರ್ 27/117, ಗುಡ್ಡದ ಅರಕೆರೆಯ ಅಡಿಕೆ ಮತ್ತು ಬಾಖೆಗಿಡಗಳನ್ನ ಹಾಳು ಮಾಡಿದ್ದು, ರೈತರು ಗೋಳಾಡುವಂತೆ ಮಾಡಿದೆ. ಗುಡ್ಡದ ಅರಕೆರೆಯಲ್ಲಿ 1200 ಬಾಳೆಗಿಡ, 200 ಅಡಿಕೆ ಗಿಡಗಳನ್ನ ಹಾಳು ಮಾಡಿರುವುದಾಗಿ ರೈತರು ಆರೋಪಿಸಿದ್ದಾರೆ. ಈಗ ಮೂರು ನಾಕು ದಿನಗಳ ಹಿಂದಷ್ಟೇ ನಾಲ್ಕೈದು ಆನೆಗಳು ಸಿರಿಗೆರೆಯಲ್ಲಿ ಮುಸುಕಿನ ಜೋಳ, ಭತ್ತದ ಗದ್ದೆಗಳಿಗೆ ನುಗ್ಗಿ ಫಸಲು ತುಳಿದು ತಿಂದು ಅಪಾರ ನಷ್ವವನ್ನುಂಟು ಮಾಡಿತ್ತು. ರೈತರು ಜೀವ ಬಿಗಿಹಿಡಿದು ಕೊಂಡು ನಡುರಾತ್ರಿಯಲ್ಲಿ ತಮ್ಮ ಹೊಲಗಳಲ್ಲಿ ಕಾವಲು ಕಾಯುವಂತಾಗಿದೆ. ಈ ಆನೆಗಳು ರಾತ್ರಿ ವೇಳೆ ದಾಳಿ ನಡೆಸುತ್ತಿವೆ. ಗುಡ್ಡದ ಹರಕೆರೆಯಲ್ಲಿ ಮೊನ್ನೆ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯ ವರೆಗೆ 6 ಆನೆಗಳು ರೈತರ ತೋಟಗಳಿಗೆ ದಾಳಿ ನಡೆಸಿ ಬೆಳೆ ಹಾನಿ ಉಂಟು ಮಾಡಿದರೆ ಆಲದಹೊಸೂರಿನಲ್ಲಿ ಬೆಳಗಿನ ಜಾವ ದಾಳಿ ಇಟ್ಟು ಬೆಳೆ ಹಾನಿಪಡಿಸಿದೆ ಎಂದು ರೈತರು ದೂರಿದ್ದಾರೆ. ಆನೆಗಳು ರೈತರ ಜೀವಕ್ಕೆ ಹಾನಿ ಮಾಡಿದರೆ ಯಾರು ಗತಿ?ಅವರ ಸಂಕಷ್ಟವನ್ನ. ಅರಣ್ಯ ಇಲಾಖೆ ತುರ್ತಾಗಿ ಪರಿಹರಿಸಬೇಕು. ಇಲ್ಲದಿದ್ದರೆ ಆತ್ಮಹತ್ಯೆ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದು ರೈತರು ಮೊರೆಯಿಟ್ಟಿದ್ದಾರೆ.