ಟಾಪ್ ನ್ಯೂಸ್ ಮಲ್ನಾಡ್
– ಚಿಕ್ಕಮಗಳೂರು: 250 ಅಡಿ ಕೆಳಗೆ ಬಿದ್ದ ಕಾರು!
– ತೀರ್ಥಹಳ್ಳಿ: ಖಾಸಗಿ ಲಾಡ್ಜಲ್ಲಿ ನೇಣಿಗೆ ಶರಣಾದ ವ್ಯಕ್ತಿ!
– ಹೊಸನಗರ : ಸರ್ವೆ ಅರ್ಜಿ, ನೋಟೀಸ್ ಗಳಿಗೆ ನಕಲಿ ಸಹಿ ಮಾಡಿ ವಂಚನೆ
– ಹೊಸನಗರ: ಮನೆ ಹಿಂಬದಿ ಬಾಗಿಲು ಮುರಿದು ಕಳವು
NAMMUR EXPRESS NEWS
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ 250 ಅಡಿ ಪ್ರಪಾತಕ್ಕೆ ಪ್ರವಾಸಿಗರ ಕಾರೊಂದು ಉರುಳಿ ಬಿದ್ದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಸಮೀಪದ ಕವಿಕಲ್ ಗಂಡಿ ಬಳಿ ನಡೆದಿದೆ.
ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಸುಮಾರು 250 ಅಡಿ ಪ್ರಪಾತಕ್ಕೆ ಕಾರು ಉರುಳಿದೆ.
250 ಅಡಿ ಎತ್ತರದಿಂದ ಬೀಳುವಾಗ ಮರ, ರೆಂಬೆ-ಕೊಂಬೆಗಳಿಗೆ ಸಿಲುಕಿದೆ. ಹೀಗಾಗಿ ಕಾರು ಬೀಳುವ ವೇಗ ಕಡಿಮೆಯಾಗಿದೆ. ತೆಲಂಗಾಣ ಮೂಲದ ಪ್ರವಾಸಿಗರ ಕಾರು ಇದಾಗಿದ್ದು, ಕಾರಿನಲ್ಲಿದ್ದ ಐವರಿಗೂ ಗಂಭೀರ ಗಾಯವಾಗಿದೆ. ತಕ್ಷಣವೇ ಪೊಲೀಸರು ಹಾಗೂ ಸ್ಥಳೀಯರು ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
– ತೀರ್ಥಹಳ್ಳಿ: ಖಾಸಗಿ ಲಾಡ್ಜಲ್ಲಿ ನೇಣಿಗೆ ಶರಣಾದ ವ್ಯಕ್ತಿ!
ತೀರ್ಥಹಳ್ಳಿ : ವ್ಯವಹಾರದಲ್ಲಿ ನಷ್ಟ ಸಂಭವಿಸಿದ ಕಾರಣದಿಂದ ಮನನೊಂದು ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ತೀರ್ಥಹಳ್ಳಿಯ ಖಾಸಗಿ ಹೋಟೆಲ್ ವೊಂದರಲ್ಲಿ ನಡೆದಿದೆ. ಪಟ್ಟಣದ ಬಾಳೆಬೈಲಿನಲ್ಲಿರುವ ಖಾಸಗಿ ಹೋಟೆಲ್ (ಲಾಡ್ಜ್) ವೊಂದರಲ್ಲಿ ಎರಡು ದಿನದಿಂದ ರೂಮ್ ಬಾಡಿಗೆ ಪಡೆದಿದ್ದ ಉಡುಪಿ ಮೂಲದ ಪ್ರಸನ್ನ ಶೆಟ್ಟಿ ( 45) ಎಂಬ ವ್ಯಕ್ತಿ ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಕಾರಣ ರೂಮಿನಲ್ಲೇ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಬುಧವಾರ ಮಧ್ಯಾಹ್ನದಿಂದ ರೂಮ್ ನಿಂದ ಹೊರ ಬಾರದ ಕಾರಣ ಅನುಮಾನದಿಂದ ಬೆಳಗ್ಗೆ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಹೊಸನಗರ : ಸರ್ವೆ ಅರ್ಜಿ, ನೋಟೀಸ್ ಗಳಿಗೆ ನಕಲಿ ಸಹಿ ಮಾಡಿ ವಂಚನೆ
ಹೊಸನಗರ : ಜಮೀನು ಮಾಲೀಕರ ನಕಲಿ ಸಹಿ ಬಳಸಿ ಪೋಡಿ ದುರಸ್ತಿ ಮಾಡಿರುವ ಆರೋಪದಲ್ಲಿ ಹೊಸನಗರ ತಾಲೂಕ್ ಕಛೇರಿಯ ಭೂ ಮಾಪಕ ಸೇರಿದಂತೆ ನಾಲ್ವರ ಮೇಲೆ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಳೂರು ಗ್ರಾಮದ ಸರ್ವೆ ನಂ 99/3 ರಲ್ಲಿ 4.13 ಎಕರೆ ಜಮೀನು ದೂರುದಾರ ಹಾಲುಗುಡ್ಡೆ ಗ್ರಾಮ ಸತ್ಯನಾರಾಯಣ ಹಾಗೂ ಸಹೋದರಿಯ ಜಂಟಿ ಖಾತೆಯಲ್ಲಿರುತ್ತದೆ. ಆದರೆ ಗೋಮೇದ ಬಿನ್ ಯಲ್ಲಪ್ಪ ಎಂಬಾತ ತಾಲೂಕು ಭೂಮಾಪಕ ಚಂದ್ರಶೇಖರ್ ಕುಮ್ಮಕ್ಕು ಹಾಗೂ ಪ್ರಚೋದನೆಯಿಂದ ಜಮೀನು ಮಾಲೀಕರ ಗಮನಕ್ಕೆ ತರದೇ ಸರ್ವೆ ಅರ್ಜಿ, ನೋಟೀಸ್ ಹಾಗೂ ಮಹಜರ್ ಗೆ ನಕಲಿ ಸಹಿ ಹಾಕಿ ಪೋರ್ಜರಿ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಮೇದಾ ಬಿನ್ ಯಲ್ಲಪ್ಪ, ಉಮೇಶ್ ಬಿನ್ ಯಲ್ಲಪ, ಯಲ್ಲಪ್ಪ ಬಿನ್ ಮಾರ್ಗಣ್ಣ ಹಾಗೂ ಚಂದ್ರಶೇಖರ್ ಭೂಮಾಪಕರು ತಾಲೂಕ್ ಕಛೇರಿ ಇವರ ಮೇಲೆ 323,504,420,465 ಕಲಂ ಅಡಿಯಲ್ಲಿ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸಂತ್ರಸ್ಥ ವ್ಯಕ್ತಿಯು ಭೂಮಾಪಕ ಚ೦ದ್ರಶೇಖರ್ ಬಳಿ ವಿಚಾರಿಸಲು ಹೋದಾಗ ಸದರಿ ದೂ ದಾಖಲೆ ಮತ್ತು ಸರ್ವೆ ಸೈಟ್ ಅನ್ನು ನಾನೇ ಶಾಮೀಲಾಗಿ ಮಾಡಿಕೊಟ್ಟಿರುತ್ತೇನೆ. ನಿಮ್ಮ ಸಹಿಗಳು ನಮಗೆ ಅಗತ್ಯವಿಲ್ಲ, ನಿಮ್ಮ ಸಹಿಗಳನ್ನು ಗೋಮೇದ ಹಾಗೂ ಯಲ್ಲಪ್ಪ ಬಳಿ ಹಾಕಿಸಿಕೊಂಡಿರುತ್ತೇನೆ, ನೀನು ಏನು ಮಾಡಿಕೊಳ್ಳುತ್ತೀಯೋ ಮಾಡಿಕೊ, ಇನ್ನೊಮ್ಮೆ ಕೇಳಲು ಬಂದರೆ ಕೈಕಾಲು ಮುರಿಸುತ್ತೇನೆ ಮತ್ತು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎಂದು ದೂರು ದಾಖಲಿಸಿ ಒಳಹಾಕಿಸುತ್ತೇನೆಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
– ಹೊಸನಗರ: ಮನೆ ಹಿಂಬದಿ ಬಾಗಿಲು ಮುರಿದು ಕಳವು
ಹೊಸನಗರ : ಮನೆಯಲ್ಲಿ ಯಾರೂ ಇಲ್ಲದಾಗ ಹಿಂಬದಿಯ ಬಾಗಿಲು ಮುರಿದು ಚಿನ್ನಾಭರಣ ಕಳವು ಮಾಡಲಾಗಿದೆ. ಹೊಸನಗರ ತಾಲ್ಲೂಕಿನ ವರಕೋಡು ಗ್ರಾಮದ ಮನೆಯೊಂದರಲ್ಲಿ ಘಟನೆ ಸಂಭವಿಸಿದೆ. ಮಂಡಕ್ಕಿ ವ್ಯಾಪಾರಿ ಹನುಮಂತ ಕಾಮತ್ ಅವರು ವ್ಯಾಪಾರಕ್ಕೆ ಹೋಗಿದ್ದಾಗ ಮನೆಯ ಹಿಂಬದಿಯ ಬಾಗಿಲು ಮುರಿದ ಕಳ್ಳರು ಒಳ ನುಗ್ಗಿದ್ದಾರೆ. ಬೀರುವಿನಲ್ಲಿದ್ದ 56 ಸಾವಿರ ರೂ. ಮೌಲ್ಯದ ಎರಡು ಬಂಗಾರದ ಉಂಗುರ ಮತ್ತು 20 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.