ಟಾಪ್ ನ್ಯೂಸ್ ಮಲ್ನಾಡ್
– ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರಿದ್ದ ವಾಹನ ಪಲ್ಟಿ
– ಶಿವಮೊಗ್ಗ : ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ಹೊರಟಿದ್ದ ಯುವಕ ಅಪಘಾತದಲ್ಲಿ ಸಾವು
– ಭದ್ರಾವತಿ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಕಾರು ಡಿಕ್ಕಿ
– ಕೊಪ್ಪ: ಬಾಳೆ ಕಂಬದ ಮೇಲೆ ತೆಂಗಿನ ಕಾಯಿ ಒಡೆಯುವ ವೇಳೆ ಸಿಡಿದ ಗುಂಡು ಆರು ಜನರಿಗೆ ಗಾಯ
NAMMUR EXPRESS NEWS
ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರಿದ್ದ ಟಿಟಿ ವಾಹನ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಂಪಿಗೆಖಾನ್ ಬಳಿ ನಡೆದಿದೆ. ಬೆಂಗಳೂರಿನಿಂದ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಆಗಮಿಸಿದ್ದ ಪ್ರವಾಸಿಗರು, ಹೊರನಾಡಿನಿಂದ ಬೆಂಗಳೂರಿಗೆ ವಾಪಸ್ ತೆರಳುವಾಗ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಿಗೆಖಾನ್ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿಯಾಗಿದೆ. ಪರಿಣಾಮ ಟಿಟಿ ವಾಹನದಲ್ಲಿದ್ದ 6 ಜನರಿಗೆ ಗಂಭೀರ ಗಾಯವಾಗಿದ್ದು, ಕಳಸ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
– ಶಿವಮೊಗ್ಗ : ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ಹೊರಟಿದ್ದ ಯುವಕ ಅಪಘಾತದಲ್ಲಿ ಸಾವು
ಶಿವಮೊಗ್ಗ : ಕುಂಸಿ ಗ್ರಾಮದ ಕೆರೆ ಕೋಡಿ ಬಳಿ ಕಾರು ಪಲ್ಟಿಯಾಗಿ ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ನಿವಾಸಿ ಚಂದನ್ ಮೃತ ದುರ್ದೈವಿ. ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಕುಂಸಿ ಕೆರೆ ಕೋಡಿ ಬಳಿ ಕಾರು ಪಲ್ಟಿಯಾಗಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಮಡಿಕೇರಿ ಮೂಲದ ನಂದನ್(22), ಕೋಲಾರ ಮೂಲದ ಕೋದಂಡ(18), ಮಂಡ್ಯ ಮೂಲದ ಯೋಗೇಶ್ (24) ಹಾಗೂ ಹಾಸನ ಮೂಲದ ಭರತ್(20) ಗಾಯಗೊಂಡ ಯುವಕರು. ಬೆಂಗಳೂರಿನ ಯಲಹಂಕದಲ್ಲಿರುವ ಅಮೃತಹಳ್ಳಿ ವಿಬಿಎಸ್ ಅಯ್ಯಂಗಾರ್ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ 5 ಜನ ಯುವಕರು ಬೇಕರಿಗೆ ರಜೆ ಇದ್ದ ಕಾರಣ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ತೆರಳಲು ನಿರ್ಧರಿಸಿದ್ದರು. ಅದರಂತೆ ನಿನ್ನೆ ರಾತ್ರಿ ವೇಳೆಗೆ ಬೆಂಗಳೂರಿನಿಂದ ಹೊರಟ್ಟಿದ್ದರು. ಇಂದು ಬೆಳಿಗ್ಗೆ ಶಿವಮೊಗ್ಗದಿಂದ ಸಾಗರ ಮಾರ್ಗವಾಗಿ ಕುಂಸಿಯ ಕೆರೆ ಕೋಡಿ ಬಳಿ ತೆರಳುತ್ತಿದ್ದ ವೇಳೆ ಕಾರು ಪಲ್ಟಿಯಾಗಿ ಗದ್ದೆಗೆ ಬಿದ್ದಿದೆ. ಕಾರು ಚಾಲನೆ ಮಾಡುತ್ತಿದ್ದ ಚಂದನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕಾರಿನಲ್ಲಿದ್ದ ಇತರ ಯುವಕರು ಸಹ ಗಾಯಗೊಂಡಿದ್ದು, ಸ್ಥಳೀಯರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಭದ್ರಾವತಿ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಕಾರು ಡಿಕ್ಕಿ
ಭದ್ರಾವತಿ: ನಗರದ ಕೆಎಸ್ಆರ್ಟಿಸಿ ನಿಲ್ದಾಣ ಸಮೀಪದ ಹೊಸ ಸೇತುವೆ ಮೇಲೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ಪ್ರವಾಹ ಉಂಟಾಗಿ ತಡೆಗೋಡೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈವರೆಗೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಸೇತುವೆ ಮೇಲೆ ವಿದ್ಯುತ್ ದೀಪಗಳು ಇಲ್ಲದ ಕಾರಣ, ವಾಹನಗಳು ಹಾಗೂ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸೇತುವೆ ಮೇಲೆ ಅಪಘಾತಗಳು ಹೆಚ್ಚಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
– ಕೊಪ್ಪ: ಬಾಳೆ ಕಂಬದ ಮೇಲೆ ತೆಂಗಿನ ಕಾಯಿ ಒಡೆಯುವ ವೇಳೆ ಸಿಡಿದ ಗುಂಡು ಆರು ಜನರಿಗೆ ಗಾಯ
ಕೊಪ್ಪ : ಪಟ್ಟಣದಲ್ಲಿ ದಸರಾ ಅಂಗವಾಗಿ ಅಂಬು ಒಡೆಯುವ ವೇಳೆ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಆರು ಜನ ಗಾಯಗೊಂಡಿದ್ದಾರೆ. ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ದಸರಾ ಹಬ್ಬದ ಪ್ರಯುಕ್ತ ಅಂಬು ಒಡೆಯುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಾಳೆ ಕಂಬದ ಮೇಲೆ ತೆಂಗಿನ ಕಾಯಿ ಇರಿಸಿ ಬಂದೂಕಿನಿಂದ ಗುರಿ ಇಟ್ಟು ಗುಂಡು ಹಾರಿಸುವುದು ಸಂಪ್ರದಾಯ. ಈ ವೇಳೆ ಅವಘಡ ಸಂಭವಿಸಿದೆ. ಪಾಂಡುರಂಗ(45), ಅನುಷಾ(10), ಶ್ರೇಷ್ಟಾ(13), ಶ್ರೇಯಸ್ (18), ಸುಮಾ(11) ಮತ್ತು ಆಶಾ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವಸ್ಥಾನ ಸಮಿತಿ ಸದಸ್ಯರಾದ ಶ್ರೀನಿವಾಸಶೆಟ್ಟಿ ಮತ್ತು ರಮೇಶ್ ಶೆಟ್ಟಿ ಅವರಿಗೆ ಸೇರಿದ ಎರಡು ಬಂದೂಕಿನಿಂದ ಗುಂಡು ಹಾರಿಸಲು ಪ್ರಯತ್ನಿಸಲಾಗಿತ್ತು. ಒಂದು ಬಂದೂಕಿನಿಂದ ಒಮ್ಮೆ ಗುಂಡು ಸಿಡಿಯದಿದ್ದಾಗ ಸರಿಪಡಿಸಲು ಪ್ರಯತ್ನಿಸುತ್ತಿದ್ದ ವೇಳೆ ಏಕಾಏಕಿ ಗುಂಡು ಸಿಡಿಸಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಯನ ಕುಂಚೂರು, ಶ್ರೀನಿವಾಸಶೆಟ್ಟಿ ಮತ್ತು ರಮೇಶ್ಶಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.