ಟಾಪ್ ನ್ಯೂಸ್ ಮಲ್ನಾಡ್
ಮಲೆನಾಡು ಮರ್ಚೆಂಟ್ಸ್ ಮನೋರಂಜನಾ ಕೇಂದ್ರದ ಮೇಲೆ ದಾಳಿ
• ಪೊಲೀಸರ ದಾಳಿ ಮಾಡಿ 19 ಜನರ ಬಂಧನ ..!
– ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹13.10 ಲಕ್ಷ ಹಣ ವಶಕ್ಕೆ
– ಅಕ್ರಮ ಮರಳು, ಕಲ್ಲು ಸಾಗಿಸುತಿದ್ದ ಮೂರು ಟಿಪ್ಪರ್ ಲಾರಿ ವಶಕ್ಕೆ..!
– ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳು, ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ವಹಿಸದ ಸ್ಥಳೀಯ ಪಂಚಾಯಿತಿ
– ಕಾಡು ಹಂದಿ ಹಾವಳಿ ಅಡಿಕೆ ಬೆಳೆ ನಾಶ
NAMMUR EXPRESS NEWS
ಶಿವಮೊಗ್ಗ: ನಗರದ ಮಲೆನಾಡು ಮರ್ಚೆಂಟ್ಸ್ ಮನೋರಂಜನಾ ಕೇಂದ್ರದ ಮೇಲೆ ಶಿವಮೊಗ್ಗ ಪೊಲೀಸ್ ದಾಳಿ ನಡೆಸಿದ್ದು ಅಂದರ್ ಬಾಹರ್ ಆಡುತ್ತಿದ್ದ 19 ಜನರನ್ನು ವಶಪಡಿಸಿಕೊಂಡಿದ್ದಾರೆ. ಅಂದರ್ ಬಾಹರ್ ಆಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿಯ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಮೊಗ್ಗ ಟೌನ್ ಬಿ.ಹೆಚ್ ರಸ್ತೆಯ ಮಲೆನಾಡು ಸಿರಿಯ ಮುಂಬಾಗ ಹರ್ಷ ಆರ್ಕಿಡ್ ನ 2ನೇ ಮಹಡಿಯಲ್ಲಿರುವ ಮಲೆನಾಡು ಮರ್ಚೆಂಟ್ಸ್ ಮನೋರಂಜನಾ ಕೇಂದ್ರದಲ್ಲಿ ಎಸ್ ಪಿ ಮಿಥುನ್ ಕುಮಾರ್ ಜಿ ಕೆ, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಅನಿಲ್ ಕುಮಾರ್ ಭೂಮಾರೆಡ್ಡಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರವರ ಮಾರ್ಗದರ್ಶದಲ್ಲಿ, ಬಾಬು ಅಂಜನಪ್ಪ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ ಮತ್ತು ಪ್ರಕಾಶ್ ಪೊಲೀಸ್ ಉಪಾಧೀಕ್ಷಕರು, ಡಿಎಆರ್ ಶಿವಮೊಗ್ಗ ರವರ ನೇತೃತ್ವದಲ್ಲಿ, ತಿಪ್ಪೇಸ್ವಾಮಿ ಪಿಐ ಸಿಇಎನ್ ಪೊಲೀಸ್ ಠಾಣೆ, ಶ್ರೀಶೈಲ ಪಟ್ಟಣ ಶೆಟ್ಟಿ ಪಿಎಸ್ಐ ಡಿಸಿಆರ್. ಬಿ ಶಿವಮೊಗ್ಗ ಮತ್ತು ಸಿಬ್ಬಂಧಿಗಳನ್ನೊಳಗೊಂಡ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ,
ಇಸ್ಪೀಟು ಜೂಜಾಟ ಆಡುತ್ತಿದ್ದ ಒಟ್ಟು 19 ಜನ ಆರೋಪಿತರನ್ನು ದಸ್ತಗಿರಿ ಮಾಡಿ, ಜೂಜಾಟದಲ್ಲಿ ಪಣವಾಗಿಟ್ಟಿದ್ದ ಒಟ್ಟು 1,25,850/- ರೂ ನಗದು ಹಣ, ಟೋಕನ್ ಗಳು ಮತ್ತು ಇಸ್ಪೀಟು ಎಲೆಗಳನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣಾ ಗುನ್ನೆ ಸಂಖ್ಯೆ 0147/2024 ಕಲಂ 79, 80 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿಯ ಮಾಜಿ ಕಾರ್ಪೊರೇಟರ್ ಮಾಲಿಕತ್ವದ ಇಸ್ಪೀಟ್ ಅಡ್ಡೆ ಇದಾಗಿದ್ದು ನಿರಂತರವಾಗಿ ಇಲ್ಲಿ ಇಸ್ಪೀಟ್ ಆಟ ನಡೆಯುತ್ತಿದ್ದು ಇಂದು ಖಚಿತ ಮಾಹಿತಿಯ ಮೇರೆಗೆ ಎಸ್ಪಿ ನೇತೃತ್ವದಲ್ಲಿ ದಾಳಿ ನಡೆದಿದೆ.
– ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹13.10 ಲಕ್ಷ ಹಣ ವಶಕ್ಕೆ
ಕಡೂರು : ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜಿಲ್ಲೆಯ ಗಡಿಭಾಗ ಸೇರಿದಂತೆ ಇತರೆ ಕಡೆಗಳಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ.ವಶಕ್ಕೆ ಪಡೆದಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ಕಡೂರು ಪಟ್ಟಣದ ಜೈನ್ ರಸ್ತೆಯಲ್ಲಿ ಕಾರು ನಿಲ್ಲಿಸಿ ಇಬ್ಬರು ವ್ಯಕ್ತಿಗಳನ್ನು ತಪಾಸಣೆ ಒಳಪಡಿಸಿದಾಗ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.
– ಅಕ್ರಮ ಮರಳು, ಕಲ್ಲು ಸಾಗಿಸುತಿದ್ದ ಮೂರು ಟಿಪ್ಪರ್ ಲಾರಿ ವಶಕ್ಕೆ..!
ರಿಪ್ಪನ್ಪೇಟೆ : ಪಟ್ಟಣದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿ,ಹಾಗೂ ಕಲ್ಲು ಸಾಗಿಸುತಿದ್ದ ಟಿಪ್ಪರ್ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಪಿಎಸ್ಐ ನಿಂಗರಾಜ್ ಕೆ ವೈ ನೇತ್ರತ್ವದಲ್ಲಿ ಸೋಮವಾರ ರಾತ್ರಿ ಹರತಾಳು ರಸ್ತೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ 2 ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದಿದ್ದು, ಗವಟೂರು ಬಳಿಯಲ್ಲಿ ಅಕ್ರಮ ಕಲ್ಲು ಸಾಗಿಸುತಿದ್ದ ಒಂದು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಉಮೇಶ್,ಶಿವಕುಮಾರ್, ಸಂತೋಷ್ ಕೊರವರ, ಹಾಗೂ ಮಧುಸೂಧನ್ ಇದ್ದರು.
– ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳು, ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ವಹಿಸದ ಸ್ಥಳೀಯ ಪಂಚಾಯಿತಿ
ಶೃಂಗೇರಿ: ಸೊಳ್ಳೆಗಳು ವಿಪರೀತವಾಗಿ ಹೆಚ್ಚಾಗಿರುವ ಕಾರಣ ಶೃಂಗೇರಿಯಲ್ಲಿ ಡೆಂಗ್ಯೂ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿದೆ, ಶೃಂಗೇರಿ ಪಟ್ಟಣ ವ್ಯಾಪ್ತಿಯಲ್ಲಿ ಸಾಕಷ್ಟು ಜನರು ಡೆಂಗ್ಯೂ ನಿಂದ ಬಳಲುತ್ತಿದ್ದು, ಅದರಲ್ಲಿ ಕೆಲವರಿಗೆ ತೀವ್ರ ಅನಾರೋಗ್ಯ ಸಮಸ್ಯೆ ಉಂಟಾಗಿ ಮಣಿಪಾಲ, ಮಂಗಳೂರು ದಾಖಲಾಗಿದ್ದಾರೆ. ಶೃಂಗೇರಿ ಪಟ್ಟಣ ವ್ಯಾಪ್ತಿಯಲ್ಲಿ ಸೊಳ್ಳೆಗಳ ಸಂಖ್ಯೆ ವಿಪರೀತವಾಗಿ ಹೆಚ್ಚಾಗಿದ್ದು ಅವುಗಳ ನಿಯಂತ್ರಣಕ್ಕೆ ಪಂಚಾಯಿತಿ ವಿಫಲವಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಹಾಗೆಯೇ ಕಟ್ಟೆಬಾಗಿಲು ಸಮೀಪ ಮತ್ತು ಇತರೆಡೆ ಡ್ರೈನೇಜ್ ಸಮಸ್ಯೆ ಇದ್ದು ಅದನ್ನು ಸಹ ಸರಿಪಡಿಸುತ್ತಿಲ್ಲ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡುವುದು ಸೇರಿದಂತೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ, ಇನ್ನಾದರೂ ಸ್ಥಳೀಯ ಆಡಳಿತ ಸಂಸ್ಥೆಗಳು ಈ ಬಗ್ಗೆ ಕ್ರಮವಹಿಸಬೇಕು
– ಕಾಡು ಹಂದಿ ಹಾವಳಿ ಅಡಿಕೆ ಬೆಳೆ ನಾಶ
ಕೊಟ್ಟಿಗೆಹಾರ: ಬಾಳೂರು ಹೋಬಳಿಯ ಮರ್ಕಲ್ನಲ್ಲಿ ಕಾಡು ಹಂದಿಗಳ ಹಾವಳಿ ಹೆಚ್ಚಿದ್ದು, ಅಡಿಕೆ ಸಸಿ ಮತ್ತು ಬಾಳೆ ಗಿಡಗಳನ್ನು ನಾಶಪಡಿಸಿದೆ. ಮರ್ಕಲ್ ಸೋಮೇಶ್ ಹಾಗೂ ಅರುಣ್ ಎಂಬುವರ 50ಕ್ಕೂ ಹೆಚ್ಚು ಅಡಿಕೆ ಸಸಿಗಳು ಕಾಡುಹಂದಿ ದಾಳಿಗೆ ನಾಶವಾಗಿವೆ. ಮೂರು ವರ್ಷಗಳಿಂದ ಮಕ್ಕಳಂತೆ ಬೆಳೆಸಿರುವ ಅಡಿಕೆ ಗಿಡಗಳು ಕಾಡು ಹಂದಿ ಹಾವಳಿಯಿಂದ ನಾಶವಾಗಿವೆ. ಚುನಾವಣಾ ನೀತಿ ಸಂಹಿತೆ ಕಾರಣ, ಬೆಳೆ ರಕ್ಷಣೆ ಕೊಟ್ಟಿರುವ ಬಂದೂಕು ಠಾಣೆಯಲ್ಲಿ ಇರಿಸಿದ್ದು, ಬಂದೂಕು ಇಲ್ಲದ ಕಾರಣ ಕಾಡು ಹಂದಿಗಳಿಂದ ಬೆಳೆಗಳ ರಕ್ಷಣೆ ಅಸಾಧ್ಯವಾಗಿದೆ’ ಎಂದರು.