– ಕಾಲು ಜಾರಿ ನದಿಗೆ ಬಿದ್ದು ಯುವಕ ಸಾವು!
– ಮೆಗ್ಗಾನ್ ವಾರ್ಡ್ ನಿಂದ ರೋಗಿ ಒಬ್ಬ ನಾಪತ್ತೆ!
– ಪ್ರತಿಷ್ಠಿತ ದೇವಸ್ಥಾನದಲ್ಲಿ ಕಳ್ಳತನ…!!!
NAMMUR EXPRESS NEWS
ಚಿಕ್ಕಮಗಳೂರು: ನದಿಗೆ ಕಾಲು ಜಾರಿ ಬಿದ್ದು ಯುವಕ ಒಬ್ಬ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ನೆಲ್ಲಿಬೀಡು ಗ್ರಾಮದಲ್ಲಿ ನಡೆದಿದೆ. ನೆಲ್ಲಿಬೀಡು ಗ್ರಾಮದ ರವಿ ಎಂಬವರ ಪುತ್ರ ಪೃಥ್ವಿರಾಜ್ (17) ಮೃತಪಟ್ಟ ಯುವಕ. ಶುಕ್ರವಾರ ಮಧ್ಯಾಹ್ನ ವೇಳೆ ಮನೆಯ ಸಮೀಪದಲ್ಲೇ ಹರಿಯುವ ಭದ್ರಾ ನದಿ ದಡದಲ್ಲಿರುವ ಕಾಡಿನಿಂದ ಸೌದೆ ತರಲು ಕಾಡಿಗೆ ಹೋಗಿದ್ದ. ನದಿ ದಡದಲ್ಲಿ ನಡೆದು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಭದ್ರಾ ನದಿಗೆ ಬಿದ್ದಿದ್ದಾನೆ. ಈಜಲು ಬಾರದ ಪೃಥ್ವಿರಾಜ್ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮನೆಗೆ ವಾಪಾಸ್ ಬಾರದ ಕಾರಣ ಅನುಮಾನಗೊಂಡ ಕುಟುಂಬಸ್ಥರು ಮನೆ ಸಮೀಪದ ಕಾಡು, ನದಿ ತೀರದಲ್ಲಿ ಹುಡುಕಾಡಿದಾಗ ಪೃಥ್ವಿರಾಜ್ ಭದ್ರಾ ನದಿಗೆ ಕಾಲು ಜಾರಿ ಬಿದ್ದಿರುವುದು ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಹಾಗೂ ಕುದುರೆಮುಖ ಪೊಲೀಸರು ಯುವಕನಿಗಾಗಿ ನದಿಯಲ್ಲಿ ಶೋಧ ನಡೆಸಿದ ವೇಳೆ ಯುವಕನ ಮೃತ ದೇಹ ನದಿಯಲ್ಲಿ ಪತ್ತೆಯಾಗಿದೆ. ಕಳಸ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದ್ದು, ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೆಗ್ಗಾನ್ ವಾರ್ಡ್ ನಿಂದ ರೋಗಿ ಒಬ್ಬ ನಾಪತ್ತೆ
ಶಿವಮೊಗ್ಗ: ಭದ್ರಾವತಿಯ ಹರೀಶ ಎಂಬುವರಿಗೆ ಅನಾರೋಗ್ಯ ಹಿನ್ನಲೆಯಲ್ಲಿ ಭದ್ರಾವತಿ ಜಿಹೆಚ್ ಬಿ ಆಸ್ಪತ್ರೆಯಿಂದ ಕರೆದುಕೊಂಡು ಬಂದು ದಿನಾಂಕ 09-01-2024 ರಂದು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೋಸ್ಕರ ಅಡ್ಮಿಟ್ ಮಾಡಲಾಗಿತ್ತು. ಇವರಿಗೆ ಜಾಂಡೀಸ್ ಖಾಯಿಲೆ ಇರುವುದರಿಂದ ಚಿಕಿತ್ಸೆ ಕೊಡಿಸುತ್ತಿದ್ದು, ಹರೀಶ್ ಜ.17 ರಂದು ಸುಮಾರು 04.30 ಪಿಎಂ ಗಂಟೆಗೆ 122 ವಾರ್ಡ್ ನಿಂದ ಎದ್ದು ಹೋಗಿದ್ದಾರೆ. ಜಾಂಡೀಸ್ ರೋಗಿ ಇದುವರೆಗೂ ವಾಪಾಸ್ಸಾಗಿಲ್ಲ. ಕುಟುಂಬದವರೆಲ್ಲಾ ಹುಡುಕಾಡಿದರೂ ಸಹ ಸಿಗಲಿಲ್ಲ, ಈ ಬಗ್ಗೆ ಯುವಕನ ಚಿಕ್ಕಮ್ಮ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರತಿಷ್ಠಿತ ದೇವಸ್ಥಾನದಲ್ಲಿ ಕಳ್ಳತನ…!!!
ಸಾಗರ : ತಾಲೂಕಿನ ಆನಂದಪುರ ಸಮೀಪದ ಮಧ್ಯ ಕಣ್ಣೂರಿನ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದ ಘಟನೆ ನಡೆದಿದೆ. ಶುಕ್ರವಾರ ರಾತ್ರಿ 12 ರಿಂದ 1 ಗಂಟೆಯ ವೇಳೆಗೆ ನಡೆದಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ನೂತನವಾಗಿ ನಿರ್ಮಾಣಗೊಂಡಿದ್ದ ದೇವಸ್ಥಾನದ ಕಾಣಿಕೆಹುಂಡಿಯನ್ನು ಕದ್ದೊಯ್ಯಲಾಗಿದೆ. ಕಳೆದ ಒಂದು ವರ್ಷದಿಂದ ಕಾಣಿಕೆಯನ್ನು ಎಣಿಸಿರಲಿಲ್ಲ ಸುಮಾರು 20000 ದಿಂದ 25000 ರೂಪಾಯಿ ಕಾಣಿಕೆ ಹುಂಡಿಯಲ್ಲಿ ಇರಬಹುದೆಂದು ದೇವಸ್ಥಾನದವರು ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ ಪಕ್ಕದ ಮನೆಯವರು ದೇವಸ್ಥಾನದ ಬೀಗ ತೆರೆದು ಭಕ್ತಿಗೀತೆಗಳನ್ನು ಹಾಕಲು ಹೋದಾಗ ದೇವಸ್ಥಾನದ ಬೀಗ ಒಡೆದಿರುವ ದೃಶ್ಯ ಕಂಡು ಬಂದಿದೆ, ನಂತರ ಒಳ ಹೋಗಿ ನೋಡಿದಾಗ ಕಾಣಿಕೆ ಡಬ್ಬ ಕಳ್ಳತನವಾಗಿದ್ದು ಕಂಡುಬಂದಿದೆ.