– ಮೂರು ದಿನ ಶಿವಮೊಗ್ಗ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಕ್ಯಾಂಪ್!
– ಹೊಸನಗರ : ಆಕಸ್ಮಿಕ ಬೆಂಕಿ ತಗುಲಿ ಹುಲ್ಲಿನ ಬಣವೆ ಸುಟ್ಟು ಭಸ್ಮ!
– ಚಿಕ್ಕಮಗಳೂರು: ಬಸ್ ನಲ್ಲಿ ನಿದ್ರೆಗೆ ಜಾರಿದ ಪಾಲಕರು ಮಿಸ್ ಆದ ಮಗು !
– ಚಿಕ್ಕಮಗಳೂರು: ಪಕ್ಷ ಬದಲಾದ ಮಾತ್ರಕ್ಕೆ ಧರ್ಮ ಬದಲಾಗುವುದಿಲ್ಲ!
ಶಿವಮೊಗ್ಗ, : ಜಿಲ್ಲಾ ಪಂಚಾಯಿತಿಯು ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಡಿ. 27 ರಿಂದ ಡಿ. 29 ರವರೆಗೆ ಬೆಳಗ್ಗೆ 9.00 ರಿಂದ ಸಂಜೆ 5.00 ರವರೆಗೆ ಕ್ಯಾಂಪ್ಗಳನ್ನು ಆಯೋಜಿಸಿದೆ. ಈ ಕ್ಯಾಂಪ್ನಲ್ಲಿ ಸ್ಥಳೀಯ ಬಾಪೂಜಿ ಸೇವಾ ಕೇಂದ್ರದ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತರು, ಇ.ಡಿ.ಸಿ.ಎಸ್. ತಂಡ ಹಾಗೂ ಇಂಡಿಯ ಪೋಸ್ಟ್ ಪೇಮಂಟ್ ಬ್ಯಾಂಕ್ ಪ್ರತಿನಿಧಿಗಳು ಮತ್ತು ಇತರೆ ಬ್ಯಾಂಕ್ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ, ಹೊಸ ಖಾತೆ ತೆರೆಯುವುದು, ಇ-ಕೆವೈಸಿ ಅಪ್ಡೆಟ್ ಮಾಡುವುದು, ಗೃಹಲಕ್ಷ್ಮೀ ಅರ್ಜಿ ಸ್ಥಿತಿ ಪರಿಶೀಲಿಸುವುದು ಹಾಗೂ ಇದಕ್ಕೆ ಸಂಬಂಧಿಸಿದ ಇತರೆ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಕಚೇರಿಗೆ ಹಾಗೂ ಕ್ಷೇತ್ರ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಸಂಪರ್ಕಿಸುವಂತೆ ಜಿಲ್ಲಾ ಪಂಚಾಯತಿ ಸಿಇಓ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೊಸನಗರ : ತಾಲೂಕಿನ ಮಾರುತಿಪುರ ಗ್ರಾಪಂ ವ್ಯಾಪ್ತಿಯ ಸೋರೆಕೊಪ್ಪ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಕೊಟ್ಟಿಗೆ ಮನೆಯಲ್ಲಿದ್ದ 600 ಕ್ಕೂ ಹೆಚ್ಚು ಹುಲ್ಲು ಹೊರೆಗಳು ಸುಟ್ಟು ಹೋಗಿವೆ. ಸೋರೆಕೊಪ್ಪ ನೆಲಗಳಲೆ ಗ್ರಾಮದ ಕೃಷಿಕ ಸಂತೋಷ್ ಎಂಬುವವರಿಗೆ ಸೇರಿದ ಕೊಟ್ಟಿಗೆ ಮನೆಯಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಬಳಿಕ ಕೆಲವೇ ಕ್ಷಣಗಳಲ್ಲಿ ಬೆಂಕಿ ಕೆನ್ನಾಲಿಗೆ 600 ಕ್ಕೂ ಹೆಚ್ಚು ಹುಲ್ಲು ಹೊರೆಗಳು ಸುಟ್ಟು ಭಸ್ಮವಾಗಿದೆ. ತಕ್ಷಣ ಸ್ಥಳೀಯರ ಪ್ರಯತ್ನದಿಂದ ಬೆಂಕಿ ನಂದಿಸಲಾಯಿತಾದರೂ ಹುಲ್ಲು ಹೊರೆಗಳು ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಮಗಳೂರು : ದಾರಿತಪ್ಪಿ ತಪ್ಪಿಸಿಕೊಂಡು ಹೋಗುತ್ತಿದ್ದ ಮಗುವಿನ ರಕ್ಷಣೆ ಮಾಡಿದ ಘಟನೆ ತರೀಕೆರೆ ತಾಲೂಕಿನಲ್ಲಿ ನಡೆದಿದೆ. ಬಸ್ಸಿನಲ್ಲಿ ಅಜ್ಜನ ಜೊತೆ 3 ವರ್ಷದ ಮಗು ಶ್ರೇಯಸ್ ಪ್ರಯಾಣ ಮಾಡುತ್ತಿತ್ತು. ಅಜ್ಜ ನಿದ್ರಿಗೆ ಜಾರಿದ್ದ ಸಂದರ್ಭದಲ್ಲಿ ಬಸ್ ನಿಂದ ಇಳಿದು, ತರೀಕೆರೆ ಮಾರ್ಗವಾಗಿ ಹೊರಟಿದ್ದ ಬಸ್ ನ್ನು ಹತ್ತಿದೆ. ಬಸ್ ಹತ್ತಿದ ಮಗು ಅಳುತ್ತಿದ್ದದ್ದನ್ನು ಗಮನಿಸಿದ ಸ್ಥಳೀಯರು, ಪೋಲಿಸ್ ಠಾಣೆಗೆ ಒಪ್ಪಿಸಿದ್ದರು. ಈ ಬಗ್ಗೆ ಇಮ್ರಾನ್ ಎನ್ನುವವರು ಸಾಮಾಜಿಕ ಜಾಲತಾಣಗಳಲ್ಲಿ ಮಗುವಿನ ಫೋಟೋ ಹರಿಬಿಟ್ಟಿದ್ದರು, ಬಳಿಕ ಮಗು ಪೋಷಕರ ಮಡಿಲು ಸೇರಿದೆ. ಮಗುವಿನ ಪೋಷಕರು ತರೀಕೆರೆ ತಾಲೂಕಿನ ತಣಿಗೇಬೈಲು ಗ್ರಾಮದ ನಿವಾಸಿಗಳಾಗಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.
ಚಿಕ್ಕಮಗಳೂರು: ಪಕ್ಷಗಳು ಬದಲಾದ ಮಾತ್ರಕ್ಕೆ ಸಂಬಂಧಗಳು ಬದಲಾಗುವುದಿಲ್ಲ. ಅಲ್ಲದೇ ದತ್ತ ಭಕ್ತರಿಗೆ ಜಾತಿ -ಪಕ್ಷ ಭೇದ ಇಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ದತ್ತಜಯಂತಿ ಅಂಗವಾಗಿ ಸೋಮವಾರ ಜಿಲ್ಲೆಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಭಾಗವಹಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. ಪಕ್ಷ ಬದಲಾದ ಮಾತ್ರಕ್ಕೆ ಹುಟ್ಟಿದ ಧರ್ಮ ಬದಲಾಗುವುದಿಲ್ಲ. ದತ್ತ ಜಯಂತಿಯಲ್ಲಿ ಭಾಗಿಯಾದ ಮಾತ್ರಕ್ಕೆ ನಮ್ಮ ಜಾತ್ಯತೀತತೆಗೆ ಭಂಗ ಬರುತ್ತದೆ ಎಂದು ತಿಳಿದಿದ್ದಾರೆ. ಇದರಿಂದಾಗಿಯೇ ಕೆಲವರು ತಮ್ಮ ಧರ್ಮವನ್ನು ಬಿಟ್ಟು ಇತರೆ ಧರ್ಮವನ್ನು ಆಚರಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ಟೋಪಿ ಹಾಕಿಕೊಂಡು ನಮಾಜ್ ಮಾಡುತ್ತಾರೆ ಆದರೆ ದತ್ತ ಜಯಂತಿಗೆ ಬರುವುದಿಲ್ಲ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.