ಟಾಪ್ ನ್ಯೂಸ್ ಮಲ್ನಾಡ್
– ಮೃತ ಆನೆ ದೇಹವನ್ನು ನೋಡಲು ಬಂದ ಆನೆಗಳು!
– ಚಿಕ್ಕಮಗಳೂರು ಹೆಬ್ಬೆ ಅರಣ್ಯದಲ್ಲಿ ನಡೆದ ಘಟನೆ ಈಗ ವೈರಲ್
– ತೀರ್ಥಹಳ್ಳಿ: ಅಪಘಾತದಲ್ಲಿ ತಂದೆ ಸಾವು : ಮಗ ಗಂಭೀರ
– ಶಿವಮೊಗ್ಗ : ಉದ್ಯೋಗ ಕೊಡಿಸುವುದಾಗಿ ಹೇಳಿ 58 ಲಕ್ಷ ವಂಚನೆ
– ಹೊಸನಗರ : ಮನೆಗೆ ಆಕಸ್ಮಿಕ ಬೆಂಕಿ ತಗುಲಿ ರೂ.4.5 ನಷ್ಟ
– ಶಿವಮೊಗ್ಗ: ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಶುರು
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌರಿಹಕ್ಕಲು ಬಳಿ ಸಂಭವಿಸಿದ ಅಪಘಾತದಲ್ಲಿ ಓರ್ವರು ಸಾವನ್ನಪ್ಪಿದ್ದಾರೆ. ಬೈಕ್ಗೆ ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ಇಲ್ಲಿನ ನಂಟೂರು ಗ್ರಾಮದ ನಿವಾಸಿ ರಘುರಾಮ್ (35) ಮೃತಪಟ್ಟವರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಘುರಾಮ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನೂ ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ರಘುರಾಮ್ ಅವರ ಪುತ್ರ ಸಹಗಂಭೀರವಾಗಿ ಗಾಯಗೊಂಡಿದ್ದು,ಅವರಿಗೆ ಚಿಕಿತ್ಸೆ ಮುಂದುವರಿದಿದೆ.
– ಚಿಕ್ಕಮಗಳೂರು: ಮೃತ ಆನೆ ದೇಹವನ್ನು ನೋಡಲು ಬಂದ ಆನೆಗಳು!
ಚಿಕ್ಕಮಗಳೂರು: ಮನುಷ್ಯರಂತೆ ಮೂಖ ಪ್ರಾಣಿಗಳಲ್ಲೂ ಭಾವನೆಗಳಿವೆ. ಅವು ಕಷ್ಟ, ಸುಖ, ದುಃಖಗಳಲ್ಲಿ ಒಂದಾಗುತ್ತವೆ. ತಮ್ಮ ಮೂಕ ಭಾಷೆಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತವೆ ಎನ್ನುವುದನ್ನು ಕೇಳಿದ್ದೇವೆ. ಕೆಲವೊಂದು ಸಂದರ್ಭಗಳಲ್ಲಿ ನೋಡಿದ್ದೇವೆ. ಕಾಡಾನೆಯೊಂದು ಮರಣ ಹೊಂದಿದ್ದು, ಮರಣ ಹೊಂದಿದ ಆನೆಯ ಕಳೇಬರವನ್ನು ನೋಡಲು ದೂರದಿಂದ ಆನೆಗಳ ಹಿಂಡೂ ಬಂದಿವೆ. ಇಂತಹದೊಂದು ಘಟನೆ ನಡೆದಿರುವುದು ಭದ್ರ ಅಭಯಾರಣ್ಯ ವ್ಯಾಪ್ತಿಯಲ್ಲಿನ ಹೆಬ್ಬೆ ವಲಯದಲ್ಲಿ. ಕಾಡಾನೆಗಳು ಮೃತಪಟ್ಟ ಆನೆಯ ಕಳೇಬರ ಸಮೀಪ ಕೆಲಕಾಲ ಇದ್ದು ನಂತರ ತೆರಳಿರುವ ದೃಶ್ಯದ ಪೋಟೋಗಳು ಅರಣ್ಯ ಇಲಾಖೆ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮಾರಾದಲ್ಲಿ ಸೆರೆಯಾಗಿದೆ. ತಮ್ಮ ಜತೆಯಲ್ಲಿ ಬೆಳೆದ ಕಾಡಾನೆಯೊಂದು ಮೃತಪಟ್ಟಿದ್ದು, ದೂರದಲ್ಲಿ ಎಲ್ಲೋ ಇದ್ದ ಕಾಡಾನೆಗಳ ಹಿಂಡು ಅಲ್ಲಿಗೆ ಆಗಮಿಸಿ ನಮನ ಸಲ್ಲಿಸಿರುವುದು ಅಚ್ಚರಿ ಎನಿಸಿವೆ. ಕ್ಯಾಮಾರಾದಲ್ಲಿ ಸೆರೆಯಾಗಿರುವ ಪೋಟೋಗಳು ಮನಕಲಕುವಂತಿವೆ.
– ಶಿವಮೊಗ್ಗ : ಉದ್ಯೋಗ ಕೊಡಿಸುವುದಾಗಿ ಹೇಳಿ 58 ಲಕ್ಷ ವಂಚನೆ
ಶಿವಮೊಗ್ಗ : ಉದ್ಯೋಗ ಸಂಬಂಧಿ ವಾಟ್ಸಪ್ ಗ್ರೂಪ್ ಸೇರಿದ್ದ ಯುವಕರಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಆನ್ಲೈನ್ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, 58 ಲಕ್ಷ ರೂ. ವಂಚಿಸಲಾಗಿದೆ. ನಾಲ್ಕು ಬಾರಿ ವಿವಿಧ ಕಾರಣ ಹೇಳಿ ಹಣ ಪಡೆದು ಮೋಸ ಮಾಡಲಾಗಿದೆ. ಆನ್ಲೈನ್ ಕೆಲಸಕ್ಕೆ ಹಣ ಕೊಡಬೇಕು: ಶಿವಮೊಗ್ಗದ ಯುವಕರ ಗುಂಪೊಂದು ಆನ್ಲೈನ್ನಲ್ಲಿ ಟೆಕ್ನಿಕಲ್ ಸ್ಕಿಲ್ ತರಬೇತಿ ನೀಡುತ್ತಿದ್ದಾಗ ಉದ್ಯೋಗ ಸಂಬಂಧಿ ವಾಟ್ಸಪ್ ಗ್ರೂಪ್ ಸೇರಿದ್ದರು. ಈ ಪೈಕಿ ಒಬ್ಬಾತನಿಗೆ ಶ್ರೀನಿಧಿ ಎಂಬಾತ ಕರೆ ಮಾಡಿ ಗ್ರೂಪ್ ಬಗ್ಗೆ ಚರ್ಚೆ ನಡೆಸಿ, ಪ್ರತಿಷ್ಠಿತ ಕಂಪನಿಗಳಲ್ಲಿ ಆನ್ಲೈನ್ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದ. ತಮ್ಮ ಬಳಿ ತರಬೇತಿ ಪಡೆಯುತ್ತಿರುವ ಯುವಕರಿಗೂ ಉದ್ಯೋಗವಕಾಶವಿದೆ. ಆದರೆ ಅಭ್ಯರ್ಥಿಗಳು ಹಣ ನೀಡಬೇಕು ಎಂದು ಸೂಚಿಸಿದ್ದ. ಆಫರ್ ಲೆಟರ್ ಬಂದರೂ ಕೆಲಸವಿಲ್ಲ, ಅದರಂತೆ ಮೊದಲ ಬಾರಿ ಫೋನ್ ಪೇ ಮೂಲಕ 6.69 ಲಕ್ಷ ರೂ. ಪಾವತಿಸಲಾಗಿತ್ತು. ನಕಲಿ ಕಂಪನಿಯೊಂದರ ಲೆಟರ್ಹೆಡ್ನಲ್ಲಿ ಆಫರ್ ಲೆಟರ್ ನೀಡಿ, ಲ್ಯಾಪ್ಟಾಪ್ ಒದಗಿಸಲಾಗಿತ್ತು. ಆದರೆ ಉದ್ಯೋಗ ನೀಡಿರಲಿಲ್ಲ. ಕರೆ ಮಾಡಿದಾಗ ಕಂಪನಿಯ ಮಾಲೀಕ ಎಂದು ಮತ್ತೊಬ್ಬ ವ್ಯಕ್ತಿಯ ಮೊಬೈಲ್ ನಂಬರ್ ನೀಡಲಾಗಿತ್ತು. ಆತ 20.13 ಲಕ್ಷ ರೂ. ಹಣ ಪಡೆದು ಕೆಲಸ ಕೊಡದೆ ವಂಚಿಸಿದ್ದ. ಹಂತ ಹಂತವಾಗಿ ಹೋಯ್ತು ಲಕ್ಷ ಲಕ್ಷ, 2022 ರಿಂದ 2024ರವರೆಗೆ ಹಂತ ಹಂತವಾಗಿ ಒಟ್ಟು 58 ಲಕ್ಷ ರೂ. ಹಣ ಪಡೆದು ಕೆಲಸ ಕೊಡಿಸದೆ ವಂಚಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉದ್ಯೋಗದ ಆಮಿಷವೊಡ್ಡಿ ನಾನಾ ಬಗೆಯಲ್ಲಿ ಅಭ್ಯರ್ಥಿಗಳನ್ನು ವಂಚಿಸಲಾಗುತ್ತಿದೆ. ಪಾರ್ಟ್ ಟೈಮ್ ಉದ್ಯೋಗ, ಮೊಬೈಲ್ನಲ್ಲೇ ಕೆಲಸ, ಪ್ರತಿಷ್ಠಿತ ಕಂಪನಿಗಳಲ್ಲಿ ಆನ್ಲೈನ್ ಜಾಬ್ ಎಂಬ ನೆಪವೊಡ್ಡಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂ. ಪಡೆದು ಮೋಸ ಮಾಡಲಾಗುತ್ತಿದೆ. ಉದ್ಯೋಗಾಕಾಂಕ್ಷಿಗಳು ಈ ಕುರಿತು ಎಚ್ಚರ ವಹಿಸಬೇಕಿದೆ.
– ಹೊಸನಗರ : ಮನೆಗೆ ಆಕಸ್ಮಿಕ ಬೆಂಕಿ ತಗುಲಿ ರೂ.4.5 ನಷ್ಟ
ಹೊಸನಗರ : ಆಕಸ್ಮಿಕ ಬೆಂಕಿಗೆ ತುತ್ತಾಗಿ ವಾಸದ ಮನೆ ಭಾಗಶಃ ಸುಟ್ಟು ಹೋದ ಘಟನೆ ತಾಲೂಕಿನ ಬೈಸೆ ಗ್ರಾಮದ ಹೂಕೊಪ್ಪಲು ಎಂಬಲ್ಲಿ ನಡೆದಿದೆ. ವಿಶಾಲಾಕ್ಷಿಯವರಿಗೆ ಸೇರಿದ ಮನೆಗೆ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿಗೆ 95 ಸಾವಿರ ಹಣ, ಬಟ್ಟೆ 30 ಗ್ರಾಂ ತೂಕದ ಬಂಗಾರ, ಅಡಿಕೆ ಸೇರಿದಂತೆ ಒಟ್ಟು ರೂ. 4.5 ಲಕ್ಷ ನಷ್ಟ ಉಂಟಾಗಿದೆ. ಮನೆಯವರು ಹತ್ತಿರದ ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮನೆ ಯಿಂದ ಹೊಗೆ ಹೊರಗೆ ಹೋಗುತ್ತಿದ್ದುದನ್ನು ಗಮನಿಸಿ ಅವರು ಓಡೋಡಿ ಬಂದಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಿಂದ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶಾಲಾಕ್ಷಿ ಎಂಬುವವರು 5 ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಮೂವರು ಚಿಕ್ಕ ಮಕ್ಕಳನ್ನು ಹೊಂದಿದ್ದಾರೆ. ಕಷ್ಟಪಟ್ಟು ಬದುಕುತ್ತಿದ್ದ ಅವರಿಗೆ ಈ ದುರಂತ ಅಸಹಾಯಕನ್ನಾಗಿ ಮಾಡಿದೆ.
– ಶಿವಮೊಗ್ಗ: ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಶುರು
ಶಿವಮೊಗ್ಗ : ತಾಲೂಕಿನ ವಿವಿಧೆಡೆ ಕಾಣಿಸಿಕೊಂಡು ಬೆಳೆ ಹಾನಿ ಮಾಡಿ, ಆತಂಕ ಸೃಷ್ಟಿಸಿರುವ ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಸಕ್ರೆಬೈಲು ಬಿಡಾರದ ಮೂರು ಆನೆಗಳು ಪುರದಾಳು ಗ್ರಾಮಕ್ಕೆ ಆಗಮಿಸಿ ಬೀಡು ಬಿಟ್ಟಿವೆ. ಆನೆ ಬಿಡಾರದ ಆಲೆ, ಬಹದ್ದೂರು ಮತ್ತು ಸೋಮಣ್ಣ ಆನೆಗಳನ್ನು ಪುರದಾಳು ಗ್ರಾಮಕ್ಕೆ ಕರೆತರಲಾಗಿದೆ. ಕಾಡಾನೆಗಳ ಸೆರೆಗೆ ಈಗಾಗಲೇ ಶೆಟ್ಟಿಹಳ್ಳಿ ಅಭಯಾರಣ್ಯದಿಂದ ಕಾರ್ಯಾಚರಣೆ ಶುರುವಾಗಿದೆ. ಶಿವಮೊಗ್ಗ ತಾಲೂಕಿನ ಪುರದಾಳು, ಮಲೇಶಂಕರ, ಆಲದೇವರ ಹೊಸೂರು, ಸಿರಿಗೆರೆ ಭಾಗದಲ್ಲಿ ಕಾಡಾನೆಗಳು ದಾಳಿ ನಡೆಸಿ ಬೆಳೆ ಹಾನಿ ಮಾಡಿದ್ದವು. ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದು ರಾತ್ರಿ ಪಟಾಕಿ ಸಿಡಿಸಿ ತೋಟ, ಹೊಲಗಳಿಗೆ ನುಗ್ಗದಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿತ್ತು. ಆದರೆ ಆನೆಗಳು ಮಧ್ಯರಾತ್ರಿ ಭತ್ತದ ಗದ್ದೆ, ಅಡಕೆ ಹಾಗೂ ಬಾಳೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿ, ಬೆಳೆ ನಾಶ ಪಡಿಸುತ್ತಿದ್ದವು. ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ರೈತರು ರೋಸಿ ಹೋಗಿದ್ದರು. ಕಾಡಾನೆ ಹಾವಳಿ ಖಂಡಿಸಿ ಡಿಸಿ ಕಚೇರಿ, ಸಿರಿಗೆರೆ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪಗೆ ಮನವಿ ಸಲ್ಲಿಸಿ ಕಾಡಾನೆ ಸೆರೆ ಹಿಡಿಯುವಂತೆ ಜನರು ಆಗ್ರಹಿಸಿದ್ದರು. ಈಗ ಕಾರ್ಯಾಚರಣೆ ಆರಂಭವಾಗಿದೆ.