- ಮಲೆನಾಡು, ಕರಾವಳಿ, ಉ.ಕರ್ನಾಟಕದಲ್ಲಿ ಮಳೆ
ಬೆಂಗಳೂರು: ಕರ್ನಾಟಕದ ವಿವಿಧೆಡೆ ಅಕ್ಟೋಬರ್ 31ರಿಂದ ನವೆಂಬರ್ 2ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು,ಕೊಡಗು, ಶಿವಮೊಗ್ಗದಲ್ಲಿ ಅಕ್ಟೋಬರ್ 31ರಂದು ಮಳೆಯಾಗಲಿದೆ. ರಾಜ್ಯದಲ್ಲಿ ತಿಂಗಳಾಂತ್ಯಕ್ಕೆ ಮತ್ತೆ ಮಳೆ ಮರಳಲಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ತಮಿಳುನಾಡು ಹಾಗೂ ಕೇರಳದತ್ತ ಸಾಗಲಿದೆ. ಇದರಿಂದಾಗಿ ಈ ಎರಡೂ ರಾಜ್ಯಗಳ ಗಡಿಗಳಿಗೆ ಹೊಂದಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶುಕ್ರವಾರ ಹಾಗೂ ಶನಿವಾರ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ,ಗ್ರಾಮಾಂತರ ಜಿಲ್ಲೆಗಳ ಕೆಲವೆಡೆ ಮಳೆಯಾಗಲಿದೆ ಅ.30ರಿಂದ ನಿರೀಕ್ಷಿಸಲಾಗಿರುವ ಮಳೆಯು ಕರಾವಳಿ ಹಾಗೂ ಮಲೆನಾಡು ಒಳಗೊಂಡಿರುವ ದಕ್ಷಿಣ ಒಳನಾಡಿಗೆ ಸೀಮಿತವಾಗಲಿದೆ. ಆದರೆ, ಹಿಂದಿನಷ್ಟು ಬಿರುಸು ಮಳೆ ಬಾರದಿದ್ದರೂ, ಸಾಧಾರಣ ಪ್ರಮಾಣದ ಮಳೆಯಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಿಗೆ ಮಳೆ ಕಾಟ ಇರದು. ಆ ಜಿಲ್ಲೆಗಳ ಸೀಮಿತ ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಮಳೆ ಮಾತ್ರ ಆಗಲಿದ್ದು, ಒಣ ಹವೆ ಮುಂದುವರಿಯಲಿದೆ. ನವೆಂಬರ್ 1 ರಿಂದ 2ರವರೆಗೆ ಕರ್ನಾಟಕದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ.