- ತೀರ್ಥಹಳ್ಳಿ ರಾಜಕೀಯದಲ್ಲಿ ಹೊಸ ಅಧ್ಯಾಯ ಸೃಷ್ಟಿ
- 1000ಕ್ಕೂ ಹೆಚ್ಚು ಜನರು ಭಾಗಿ: ಜೆಡಿಎಸ್ ಬ್ಯಾನರ್ ಇಲ್ಲ!
ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಒಂದನೇ ದಿನ ಪೂರೈಸಿದ್ದು, ಸಾವಿರಾರು ಜನರು ಪಕ್ಷಬೇಧ ಮರೆತು ಭಾಗಿಯಾಗಲಿದ್ದಾರೆ. ಜೆಡಿಎಸ್ ನಾಯಕರು, ಕಾರ್ಯಕರ್ತರು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಮಂಜುನಾಥ ಗೌಡ ಅಭಿಮಾನಿಗಳು, ಸಹಕಾರಿ ನಾಯಕರು, ರೈತ ನಾಯಕರು, ಹೋರಾಟಗಾರರು ಮೊದಲ ದಿನ ಭಾಗಿಯಾಗಿದ್ದಾರೆ. 22 ಕಿ.ಮೀ ಪಾದಯಾತ್ರೆ ಮೊದಲ ದಿನಕ್ಕೆ ಅಂತ್ಯಗೊಂಡಿತು.
ಬಿದರಗೋಡಿನ ಶ್ರೀರಾಮ ಮಂದಿರದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ. ಮಂಜುನಾಥಗೌಡರಿಗೆ ನಾಯಕರಾದ ಮಂದು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ ಸಾಥ್ ನೀಡಿದ್ದಾರೆ. ಪಾದಯಾತ್ರೆ ಸಭೆ ಉದ್ಘಾಟಿಸಿ ಮಾತನಾಡಿದ ಗೋಪಾಲಕೃಷ್ಣ ಬೇಳೂರು, ಯಡಿಯೂರಪ್ಪ ಮತ್ತು ಮೋದಿ ಕೈ ತೋರಿಸಿದರೆ ಸಾಲದು. ರೈತರ ಪರ ನಿಲ್ಲಬೇಕು. ನಾವು ಯಾವುದೇ ಹೋರಾಟಕ್ಕೆ ಸಿದ್ಧ ಎಂದರು. ಮಧು ಬಂಗಾರಪ್ಪ ಮಾತನಾಡಿ, ರೈತರ ಪರ ಈ ಹೋರಾಟ ರಾಜ್ಯ, ದೇಶದ ಗಮನ ಸೆಳೆಯಬೇಕು ಎಂದರು. ಮಂಜುನಾಥ ಗೌಡ ಮಾತನಾಡಿ ಈ ಹೋರಾಟದಿಂದ ಎಲ್ಲಾ ಕಡೆ ಜನರನ್ನು ಒಗ್ಗೂಡಿಸಲಾಗುವುದು. ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಇಡೀ ಪಾದಯಾತ್ರೆಯಲ್ಲಿ ಜೆಡಿಎಸ್ ಬ್ಯಾನರ್ ಬಳಸದೆ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಹೆಸರು ಬಳಸಲಾಗಿದೆ. ಜತೆಗೆ ಹಸಿರು ಶಾಲು ಬಳಸಲಾಗಿತ್ತು. ಆದರೆ ಎಲ್ಲೂ ಜೆಡಿಎಸ್ ಹೆಸರನ್ನು ಹೆಚ್ಚು ಬಳಸಿದ್ದು ಕಂಡಿಲ್ಲ!.
ತೀರ್ಥಹಳ್ಳಿ ಮತ್ತು ಹೊಸ ನಗರ ತಾಲೂಕಿನ ಜೆಡಿಎಸ್ ನಾಯಕರಾದ ಸುಂದರೇಶ್, ರಾಘವೇಂದ್ರ ಶೆಟ್ಟಿ, ವಿದ್ಯಾಧರ ಗುರುಶಕ್ತಿ, ಕಿರಣ್ ಕಟ್ಟೆಹಕ್ಕಲು, ಸುಬ್ರಮಣ್ಯ ಮಾಸ್ತಿಕಟ್ಟೆ, ಹಾಲಗದ್ದೆ ಉಮೇಶ್, ಸಹಕಾರಿ ನಾಯಕರಾದ ವಿಜಯ ದೇವ್, ದುಗ್ಗಪ್ಪ ಗೌಡ, ಅಜಿತ್ ವಿಜಯದೇವ್, ಸುಷ್ಮಾ ಸಂಜಯ್, ಶಶಾಂಕ್ ಸೇರಿದಂತೆ ಹಲವರಿದ್ದರು.
ಕಾಂಗ್ರೆಸ್ ನಾಯಕರು ಹಾಜರ್!: ತೀರ್ಥಹಳ್ಳಿ ಕಾಂಗ್ರೆಸ್ ನಾಯಕರಾದ ಬಾಳೇಹಳ್ಳಿ ಪ್ರಭಾಕರ್, ಹಾರೊಗೊಳಿಗೆ ಪದ್ಮನಾಭ, ಕೆಳಕೆರೆ ದಿವಾಕರ್, ಹೊಸಹಳ್ಳಿ ಸುಧಾಕರ್, ಕೇಳೂರು ಮಿತ್ರ, ಕಂಪನಕೊಡಿಗೆ ಸುರೇಶ, ಈಚನಬೈಲ್ ಶಶಿಧರ್, ಶಂಕರಮನೆ ಅರುಣ್, ಮಹಾಬಲೇಶ್ ಹಸಿರುಮನೆ ಸೇರಿದಂತೆ ಬಹುತೇಕ ನಾಯಕರು ಪಕ್ಷಾತೀತವಾಗಿ ಭಾಗವಹಿಸಿದ್ದರು.
ಪ್ರಗತೀಪರರ ಸಾಥ್: ಹೋರಾಟಗಾರರಾದ ಕಲ್ಕುಳಿ ವಿಠಲ ಹೆಗ್ಡೆ, ಶ್ರೀಧರ್ ಕಲ್ಲಹಳ್ಳ, ಕೆ.ಎಲ್.ಅಶೋಕ, ಕೋಣಂದೂರು ಅಶೋಕ್ ಸೇರಿ ಬಹುತೇಕ ರೈತ ಮುಖಂಡರು ಹಾಜರಿದ್ದರು.
ಉದ್ಯಮಿಗಳ ಬೆಂಬಲ: ಮಲೆನಾಡಿನ ರೈತರ ಪರ ಹೋರಾಟವಾದ ಈ ಪಾದಯಾತ್ರೆಗೆ ಅನೇಕ ಉದ್ಯಮಿಗಳು ಬೆಂಬಲ ನೀಡಿ ಭಾಗವಹಿಸಿದ್ದರು. ತೀರ್ಥಹಳ್ಳಿ ಮೂಲದ ಬೆಂಗಳೂರು ಉದ್ಯಮಿ ಸತೀಶ್ ಹಗಲತ್ತಿ, ಸಾಗರದ ಪ್ರಶಾಂತ್ ಸೇರಿದಂತೆ ಹಲವರು ಹಾಜರಿದ್ದರು.