ಮೈದಾನದಲ್ಲಿ ಹೂತಿಟ್ಟ 2.5 ಕೋಟಿ ಮೌಲ್ಯದ ಚಿನ್ನ ಪತ್ತೆ.!
– ಕುಡಿದ ಅಮಲಲ್ಲಿ ಬ್ಯಾಂಕ್ ದರೋಡೆ: ಹಣ, ಚಿನ್ನ ಹೂತಿಟ್ಟರು
– ಕರಾವಳಿ ಕೇರಳ ಗಡಿಯಲ್ಲಿ ನಡೆದಿದ್ದ ಪ್ರಕರಣ
NAMMUR EXPRESS NEWS
ಮಂಗಳೂರು: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಕಳ್ಳತನ ಪ್ರಕರಣವಾಗಿ ತಿಂಗಳಾಗುತ್ತ ಬಂದಿದ್ದು, ಪೊಲೀಸರು ತನಿಖೆಯಲ್ಲಿ ಪ್ರಗತಿಯನ್ನು ಸಾಧಿಸಿ ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ದರೋಡೆಕೋರರು ದರೋಡೆಗೈದ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣವೂ ಕೊನೆಗೂ ಪತ್ತೆಯಾಗಿದೆ. ಈ ಕಳ್ಳತನ ಪ್ರಕರಣದಲ್ಲಿ ಕಾಸರಗೋಡು ಕಡೆಯ ಮೂವರು ಕಳ್ಳರ ಜತೆಗೆ ಬಾಯಾರು ಗ್ರಾಮದ ಪೈವಳಿಕೆ ಗಾಳಿಯಡ್ಕದ ವ್ಯಕ್ತಿಯೊಬ್ಬ ಭಾಗಿಯಾಗಿದ್ದ. ಬಾಯಾರು ನಿವಾಸಿ ಊರಿನಲ್ಲಿ ಭಾರೀ ಸಾಮಾಗ್ರಿ ಖರೀದಿಗೆ ತಯಾರಾಗಿದ್ದ. ಈ ನಡುವೆ ಆತ ತನ್ನೂರಿನಿಂದ ಅಡ್ಯನಡ್ಕಕ್ಕೆ ಆಗಮಿಸಿ ಮದ್ಯ ಸೇವನೆ ಮಾಡಿ ನಶೆಯಲ್ಲಿ ಬ್ಯಾಂಕ್ಗೆ ನುಗ್ಗಿ ಹಣ ಕಳವು ಮಾಡಿರುವ ಬಗ್ಗೆ, ಯಾರ್ಯಾರು ಏನು ಮಾಡಿದರು ಎಂಬ ಬಗ್ಗೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಇದನ್ನು ಪೊಲೀಸರಿಗೆ ಸ್ಥಳೀಯರು ತಿಳಿಸಿದ ಹಿನ್ನೆಲೆಯಲ್ಲಿ ಈತ ಸಿಕ್ಕಿಬಿದಿದ್ದಾನೆ.
ಕೆಲವು ವರ್ಷಗಳಿಂದ ವೆಲ್ಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಈತ ಕಳ್ಳರ ಜತೆಗೆ ಸೇರಿಕೊಂಡಿದ್ದಾನೆ ಎಂಬುದು ಪೊಲೀಸ್ ತನಿಖೆಯಲ್ಲೂ ಬಹಿರಂಗಗೊಂಡಿತ್ತು. ಈ ತಂಡವೂ ಕಳ್ಳತನಗೈದ ನಗದು ಮತ್ತು ಚಿನ್ನಾಭರಣಗಳನ್ನು ಕೇರಳದ ಪೊಸಡಿ ಗುಂಪೆ ಗುಡ್ಡದ ತಪ್ಪಲಿನ ಸಜಂಕಿಲ ಸಮೀಪ ನಿರ್ಜನ ಪ್ರದೇಶದಲ್ಲಿರುವ ಆಟದ ಮೈದಾನವೊಂದರಲ್ಲಿ ಹೂತಿಟ್ಟಿದ್ದರೆನ್ನಲಾಗಿತ್ತು.
ಇದೀಗ ಸಜಂಕಿಲ ಎಂಬಲ್ಲಿ ಹೂತಿಟ್ಟಿದ್ದ ಏಳು ಕೆ.ಜಿ ಚಿನ್ನಾಭರಣ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಕೇರಳಕ್ಕೆ ಆಗಮಿಸಿದ ಕರ್ನಾಟಕ ಪೊಲೀಸರು ಮೈದಾನದಲ್ಲಿ ಕಳೆದೆರಡು ದಿನದಿಂದ ಶೋಧ ಕಾರ್ಯ ನಡೆಸುತ್ತಿದ್ದು, ಕೊನೆಗೂ ಕಳ್ಳರು ಮೈದಾನದಲ್ಲಿ ಹೂತಿಟ್ಟ ಚಿನ್ನ ಪತ್ತೆಯಾಗಿದೆ. ಕಳೆದ ತಿಂಗಳು 7ರಂದು ನಡೆದಿದ್ದ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ವಿಶೇಷ ಪೊಲೀಸ್ ತಂಡವು ಕಾಸರಗೋಡಿನ ನಾಲ್ವರನ್ನು ಬಾಯಾರಿನ ಒಬ್ಬ ಸೇರಿದಂತೆ ನಾಲ್ವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿತ್ತು. ಬ್ಯಾಂಕ್ ದರೋಡೆ ಮಾಡಿದ್ದ ಕಳ್ಳರು 16 ಲಕ್ಷ ಮೌಲ್ಯದ ನಗದು ಹಾಗೂ 2.5 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು ಎಂದು ಅಂದಾಜಿಸಲಾಗಿತ್ತು.