ಮಂಗಳೂರಲ್ಲಿ 28 ಕೋಟಿ ಮೊತ್ತದ ರಕ್ತ ಚಂದನ ಹರಾಜು!
– ವಿದೇಶಗಳಿಗೆ ಸಾಗಣೆ ಮಾಡುತ್ತಿದ್ದ ವೇಳೆ ದಾಳಿ
– ಆನ್ಲೈನ್ ಬಿಡ್ಡಿಂಗ್ ಮೂಲಕ 2,094 ದಿಮ್ಮಿಗಳ ಹರಾಜು
NAMMUR EXPRESS NEWS
ಮಂಗಳೂರಿನಲ್ಲಿ ವಶಕ್ಕೆ ಪಡೆದಿದ್ದ ರಕ್ತಚಂದನ ಬರೋಬ್ಬರಿ 28 ಕೋಟಿಗೆ ಹರಾಜು ಮಂಗಳೂರು ಬಂದರಿನ ಕಸ್ಟಮ್ಸ್ ಅಧಿಕಾರಿಗಳು 2008ರಿಂದ 2023ರ ವರೆಗೆ ನಾಲ್ಕು ಪ್ರತ್ಯೇಕ ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ರಕ್ತಚಂದನವನ್ನು ಆನ್ಲೈನ್ನಲ್ಲಿ ಬರೋಬ್ಬರಿ 28 ಕೋಟಿಗೆ ಹರಾಜು ಮಾಡಲಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯ ಅರಣ್ಯ ಇಲಾಖೆ ಆನ್ಲೈನ್ ಮೂಲಕ ಹರಾಜು ಹಾಕಿದೆ. ಅದರಂತೆ ಒಟ್ಟು 2,094 ದಿಮ್ಮಿಗಳನ್ನು ಒಳಗೊಂಡ 56.2 ಮೆಟ್ರಿಕ್ ಟನ್ ರಕ್ತಚಂದನವಿತ್ತು. ಎ ಕೆಟಗರಿ 3 ಲಾಟ್, ಬಿ ಕೆಟಗರಿ 6 ಲಾಟ್, ಸಿ ಕೆಟಗರಿ 6 ಲಾಟ್, ಡಿ ಕೆಟಗರಿ 3 ಲಾಟ್ ಗಳಾಗಿ ವಿಂಗಡಣೆ ಮಾಡಿ ಹರಾಜು ಹಾಕಲಾಗಿದೆ. ಆನ್ಲೈನ್ನಲ್ಲಿ 3 ಪ್ರತಿಷ್ಠಿತ ಏಜೆನ್ಸಿಗಳು ಬರೋಬ್ಬರಿ ₹ 28 ಕೋಟಿಗೆ ಬಿಡ್ ಮಾಡಿವೆ.
ಮಂಗಳೂರಿನ ಪಣಂಬೂರು ಬಂದರಿನ ಕಸ್ಟಮ್ಸ್ ಅಧಿಕಾರಿಗಳು 2008 ರಿಂದ 2023 ರವರೆಗೆ 4 ಪ್ರತ್ಯೇಕ ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ ರಕ್ತ ಚಂದನ ಇದಾಗಿತ್ತು. ಮಂಗಳೂರು ಬಂದರಿನಿಂದ ಅಕ್ರಮವಾಗಿ ವಿದೇಶಕ್ಕೆ ಕಳ್ಳಸಾಗಾಟ ಮಾಡುತ್ತಿದ್ದ ರಕ್ತಚಂದನ ಮಾಲು ಇದಾಗಿತ್ತು. ಚೀನಾ, ದುಬೈ, ಜಪಾನ್ ಸೇರಿದಂತೆ ಇತರ ದೇಶಗಳಲ್ಲಿ ರಕ್ತಚಂದನಕ್ಕೆ ಬಹು ಬೇಡಿಕೆ ಇದೆ. 2012 ಆಗಸ್ಟ್ 24ರಂದು ನವಮಂಗಳೂರು ಬಂದರು ಮೂಲಕ ಈ ಮಾಲು ದುಬೈಗೆ ಕಳ್ಳಸಾಗಾಟವಾಗುವುದಿತ್ತು.
ಕಂಟೈನರ್ನಲ್ಲಿ ತುಂಬಿಸಿಡಲಾಗಿದ್ದ 5,810 ಕೆ.ಜಿ. ತೂಕದ ರಕ್ತಚಂದನ ವಶಕ್ಕೆ ಪಡೆದಿದ್ದರು. 2014 ಆಗಸ್ಟ್ 21ರಂದು ವಿದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 16.99 ಟನ್ ರಕ್ತಚಂದನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇನ್ನು, 2020ರ ಜನವರಿ 10ರಂದು ಥಾಯ್ಲೆಂಡ್ಗೆ ಸಾಗಿಸಲು ಯತ್ನಿಸುತ್ತಿದ್ದ ₹2.20 ಕೋಟಿ ಮೌಲ್ಯದ ರಕ್ತಚಂದನವನ್ನೂ ವಶ ಪಡಿಸಿಕೊಳ್ಳಲಾಗಿತ್ತು. 2022ರ ಜೂನ್ 3ರಂದು ಆಂಧ್ರಪ್ರದೇಶದ ತಿರುಪತಿಯಿಂದ ಮಂಗಳೂರು ಮೂಲಕ ಸಿಂಗಾಪುರಕ್ಕೆ ಸಾಗಿಸಲು ಯತ್ನಿಸುತ್ತಿದ್ದ₹ 4.14 ಕೋಟಿ ಮೌಲ್ಯದ ರಕ್ತಚಂದನ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳ ವಶವಾಗಿತ್ತು. ಒಟ್ಟು ನಾಲ್ಕು ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ರಕ್ತಚಂದನವನ್ನು ಹರಾಜು ಮಾಡಿದ್ದಾರೆ.