ಕಾಂಪೌಂಡ್ ಕುಸಿದು 3ನೇ ತರಗತಿ ವಿದ್ಯಾರ್ಥಿನಿ ಬಲಿ!
– ಪದ್ಮಶ್ರೀ ಪುರಸ್ಕೃತ ಹಾಜಬ್ಬರ ಶಾಲೆಯಲ್ಲಿ ನಡೆಯಬಾರದ ದುರ್ಘಟನೆ
– ಮಳೆಗೆ ಕಾಂಪೌಂಡ್ ಶಿಥಿಲಗೊಂಡು ವಿದ್ಯಾರ್ಥಿನಿ ಸಾವು
NAMMUR EXPRESS NEWS
ಮಂಗಳೂರು: ಪದ್ಮಶ್ರೀ ಪುರಸ್ಕಾರ ಪಡೆದುಕೊಂಡಿರುವ ಅಕ್ಷರ ದಾಸೋಹಿ ದಕ್ಷಿಣ ಕನ್ನಡದ ಕೋಣಾಜೆ ಸಮೀಪದ ಹರೇಕಳ ಹಾಜಪ್ಪ ಅವರು ತಮ್ಮ ಕನಸಿನ ಶಾಲೆ ನಿರ್ಮಿಸಿ ಬಡ ಮಕ್ಕಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದಾರೆ. ಅಂಥಹ ಯಾರು ಮಾಡದ ಅಕ್ಷರ ಸೇವೆ ಮಾಡುತ್ತಿರುವ ಹಾಜಬ್ಬರ ಶಾಲೆಯಲ್ಲಿ ಸೋಮವಾರ ಸಂಜೆ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಈ ಶಾಲೆಯಲ್ಲಿ 3ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಮಳೆಯಿಂದಾಗಿ ಸಂಜೆಯ ವೇಳೆ ಶಾಲೆಯ ಕಾಂಪೌಂಡ್ ಕುಸಿದು ಬಿದ್ದು ನ್ಯೂಪಡ್ಪು ನಿವಾಸಿ ಸಿದ್ದೀಖ್ – ಜಮೀಲಾ ದಂಪತಿ ಪುತ್ರಿ ಶಾಝಿಯಾ ಬಾನು (7) ಎನ್ನುವ ಬಾಲಕಿ ಮೃತಪಟ್ಟಿದ್ದಾರೆ.
ಮಳೆಗೆ ಕಾಂಪೌಂಡ್ ಶಿಥಿಲಗೊಂಡು ವಿದ್ಯಾರ್ಥಿನಿ ಸಾವು
ಹರೇಕಳ ಹಾಜಬ್ಬರ ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಡಿಪು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಶಿಬಿರ ನಡೆಯುತ್ತಿತ್ತು. ಈ ಶಿಬಿರದಲ್ಲಿ ಶಾಲೆಯ ಸಮೀಪವಿರುವ ವಿದ್ಯಾರ್ಥಿಗಳಿಗೂ ಭಾಗವಹಿಸುವುದಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ, ಬೇಸಿಗೆ ರಜೆ ಇದ್ದರೂ ಬಾಲಕಿ ಶಾಝಿಯಾ ಶಾಲೆಯಲ್ಲಿ ನಡೆಯುತ್ತಿದ್ದ ಎನ್ಎಸ್ಎಸ್ ಶಿಬಿರದಲ್ಲಿ ಭಾಗವಹಿಸಿದ್ದಳು. ಇನ್ನೇನು ಸಂಜೆಯಾಗುತ್ತಿದ್ದಂತೆ ಮನೆಗೆ ಹೋಗಬೇಕು ಅನ್ನುವಷ್ಟರಲ್ಲಿ ಕಾಂಪೌಂಡ್ ಬಳಿ ಆಟವಾಡುತ್ತಿದ್ದ ಬಾಲಕಿ ಮೇಲೆ ತಡೆಗೋಡೆ ಏಕಾಏಕಿ ಕುಸಿದು ಬಿದ್ದಿದೆ. ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ, ಬಾಲಕಿ ಪ್ರಾಣಕಳೆದುಕೊಂಡಿದ್ದಳು. ಬೆಳಗ್ಗೆ ಸುರಿದ ಮಳೆಯಿಂದಾಗಿ ಕಾಂಪೌಂಡ್ ಶಿಥಿಲಗೊಂಡು ವಿದ್ಯಾರ್ಥಿನಿ ಮೇಲೆಯೇ ಕುಸಿದು ಬಿದ್ದಿರುವುದು ದುರಂತವೇ ಸರಿ. ಘಟನಾ ಸ್ಥಳಕ್ಕೆ ಹರೇಕಳ ಗ್ರಾ.ಪಂ ಅಧಿಕಾರಿಗಳು, ಕೊಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.