ಬಾವಿಗೆ ಬಿದ್ದ ಅಪರೂಪದ ಕರಿ ಚಿರತೆ!
– ಮಂಗಳೂರು ಹೊರ ವಲಯದಲ್ಲಿ ಘಟನೆ
– ಮೂರು ತಾಸು ಕಾರ್ಯಾಚರಣೆ ಬಳಿಕ ರಕ್ಷಣೆ
– ನೋಡಲು ಜಮಾಯಿಸಿದ ಜನಸ್ತೋಮ
NAMMUR EXPRESS NEWS
ಮಂಗಳೂರು: ಬಹಳ ಅಪರೂಪವಾಗಿ ಕಾಣಸಿಗುವ ಕಪ್ಪು ಬಣ್ಣದ ಚಿರತೆಯೊಂದು ಇದೀಗ ಕರಾವಳಿ ಭಾಗದಲ್ಲಿ ಕಾಣಿಸಿದೆ.
ಮಂಗಳೂರಿನ ಎಡಪದವು ಸಮೀಪದ ಗೊಸ್ಪಾಲ್ ಸನಿಲದಲ್ಲಿ ಈ ಕರಿ ಚಿರತೆಯು ಬಾವಿಗೆ ಬಿದ್ದಿತ್ತು. ಕೂಡಲೇ ಅರಣ್ಯ ಇಲಾಖೆಯವರು ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಈ ಚಿರತೆಯನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ.
ಮಂಗಳೂರು ಹೊರ ವಲಯದಲ್ಲಿ ಅದರಲ್ಲಿಯೂ ಮೂಡಬಿದಿರೆ ಭಾಗದಲ್ಲಿ ಈ ರೀತಿ ಚಿರತೆಗಳು ಕಂಡುಬರುತ್ತವೆ. ಆದರೆ, ಕಪ್ಪು ಬಣ್ಣದ ಚಿರತೆಯನ್ನು ನೋಡಿದವರಿಲ್ಲ. ಆದರೆ ಸನಿಲ ನಿವಾಸಿ ಶಕುಂತಲಾ ಆಚಾರ್ಯ ಅವರ ಮನೆಯಂಗಳದ ಬಾವಿಯಲ್ಲಿ ಭಾನುವಾರ ಬೆಳಗ್ಗೆ ಕಪ್ಪು ಚಿರತೆ ಪತ್ತೆಯಾಗಿತ್ತು. ಬೆಳಗ್ಗೆ ಎಂದಿನಂತೆ ಎರಡು ಕೊಡ ನೀರನ್ನು ಮೇಲೆತ್ತಿದ್ದರು. ಮೂರನೇ ಬಾರಿಗೆ ನೀರು ಸೇದಲು ಹೋದಾಗ ಚಿರತೆ ಬಿದ್ದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಕೂಡಲೇ ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳೆಗಾರ್ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ಮಾಡಲಾಗಿತ್ತು.
ಚಿರತೆ ನೋಡಲು ಜನವೋ ಜನ!
ಬಾವಿಯು ತಗ್ಗು ಪ್ರದೇಶದಲ್ಲಿ ಇದ್ದ ಕಾರಣ ಚಿರತೆಯನ್ನು ಮೇಲಕ್ಕೆ ಎತ್ತುವುದು ಕೂಡ ಸವಾಲಾಗಿತ್ತು. ಇದನ್ನು ನೋಡುವುದಕ್ಕೆ ಸುಮಾರು ಒಂದು ಸಾವಿರ ಸ್ಥಳೀಯರು ಅಲ್ಲಿ ಜಮಾಯಿಸಿದ್ದು, ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಬೇಕಾಯಿತು. ಬೆಳಗ್ಗೆ 9 ಗಂಟೆಯಿಂದ ಕಾರ್ಯಾಚರಣೆ ನಡೆದಿದ್ದು, ಸುಮಾರು 11.30ರ ಹೊತ್ತಿಗೆ ಕರಿ ಚಿರತೆಯನ್ನು ಮೇಲತ್ತೆ ಎತ್ತಲಾಯಿತು. ಇನ್ನು ಅದೇ ಪರಿಸರದಲ್ಲಿ ನಿವಾಸಿಯೊಬ್ಬರ ಮನೆಯ ಕರುವನ್ನು ಕೊಟ್ಟಿಗೆಯಿಂದ ಎಳೆದೊಯ್ದು ಚಿರತೆಯೊಂದು ತಿಂದು ಹಾಕಿದೆ. ಆದರೆ, ಇದೇ ಕರಿ ಚಿರತೆಯೇ ದನದ ಕರುವನ್ನು ತಿಂದಿರಬಹುದು ಅಥವಾ ಬೇರೆ ಚಿರತೆ ಬಂದು ದಾಳಿ ಮಾಡಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಸೆರೆಯಾಗಿರುವ ಈ ಚಿರತೆಯು ಸುಮಾರು ಐದು ವರ್ಷ ವಯಸ್ಸು ಇರಬಹುದೆಂದು ಅರಣ್ಯ ಇಲಾಖೆಯವರು ಅಂದಾಜಿಸಿದ್ದಾರೆ. ಸದ್ಯ ಅದನ್ನು ಪಶುವೈದ್ಯರು ಪರಿಶೀಲನೆ ನಡೆಸಿದ್ದು, ಸೂಕ್ತ ಚಿಕಿತ್ಸೆ ನೀಡಿದ ಬಳಕ ವಾಪಾಸ್ ಕಾಡಿಗೆ ಬಿಡುವ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಆದರೆ, ಪಿಲಿಕುಳ ನಿಸರ್ಗಧಾಮದಲ್ಲಿ ಕಪ್ಪು ಚಿರತೆ ಸಂತತಿ ಇಲ್ಲ. ಹೀಗಾಗಿ, ಸೆರೆಯಾಗಿರುವ ಈ ಚಿರತೆಯನ್ನು ಪಿಲಿಕುಳಕ್ಕೆ ಬಿಡುವಂತೆ ಅನೇಕರು ಸಲಹೆ ಮಾಡಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಇನ್ನು ಕೂಡ ಆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ.