ದಕ್ಷಿಣ ಕನ್ನಡದಲ್ಲಿ ಈಗ ಕೆಟ್ಟ ರಾಜಕೀಯ!
– ಬಂಟರ ಬ್ರಿಗೇಡ್ ಹೆಸರಿನಲ್ಲಿ ಬಿಲ್ಲವ ಸಮಾಜವನ್ನು ಅವಹೇಳನ ಮಾಡುವ ಕರಪತ್ರ ವೈರಲ್!
– ಕಾಂಗ್ರೆಸ್ ಕೃತ್ಯವೆಂದು ಚುನಾವಣಾ ಆಯೋಗಕ್ಕೆ ಬಿಜೆಪಿಯಿಂದ ದೂರು
NAMMUR EXPRESS NEWS
ಮಂಗಳೂರು: ಲೋಕಸಭೆ ಚುನಾವಣೆ ಮತದಾನಕ್ಕೆ ಇನ್ನು ಕೇವಲ ಒಂದು ದಿನವಷ್ಟೇ ಬಾಕಿಯಿರಬೇಕಾದರೆ, ಜಾತಿಗಳ ನಡುವೆ ಒಡಕು ಮೂಡಿಸುವ ಹುನ್ನಾರವೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬಂಟರ ಬ್ರಿಗೇಡ್ ಎಂಬ ಹೆಸರಿನಲ್ಲಿ ಬಿಲ್ಲವ ಸಮಾಜದವರನ್ನು ನಿಂದಿಸುವ ಕರಪತ್ರವೊಂದು ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಂಟ ಬ್ರಿಗೇಡ್ ದಕ್ಷಿಣ ಕನ್ನಡ ಎಂಬ ಹೆಸರಿನಲ್ಲಿ ಈ ಕರಪತ್ರವನ್ನು ಮುದ್ರಿಸಲಾಗಿದ್ದು, ಅದರಲ್ಲಿ ಬಿಲ್ಲವ ಸಮಾಜದವರನ್ನು ನಿಂದಿಸುವ ಬಹಳ ಅಪೇಕ್ಷಾರ್ಹವಾದ ಪದಗಳನ್ನು ಬಳಸಲಾಗಿದೆ. ಅಷ್ಟೇಅಲ್ಲ, ಈ ಪತ್ರದಲ್ಲಿ ಬಿಲ್ಲವ ಸಮಾಜದವರ ಬಗ್ಗೆ ಬಹಳ ಕೀಳುಮಟ್ಟದ ಪದಗಳನ್ನು ಬಳಸಲಾಗಿದೆ. ಬಿಜೆಪಿಯಿಂದ ಚುನಾವಣಾ ಆಯೋಗಕ್ಕೆ ದೂರು ಬಂಟರ ಬ್ರಿಗೇಡ್ ಹೆಸರಿನಲ್ಲಿ ಹರಿದಾಡುತ್ತಿರುವ ಈ ಪತ್ರವನ್ನು ನಕಲಿ ಎಂದಿರುವ ಬಿಜೆಪಿ ಆ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಕೆ ಮಾಡಿದೆ.
ಏನಿದು ಕರ ಪತ್ರ!
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರ ಬಗ್ಗೆ ಬಂಟರ ಬ್ರಿಗೇಡ್ ಹೆಸರಲ್ಲಿ ಕರಪತ್ರ ಮುದ್ರಿಸಿ, ಆಕ್ಷೇಪಾರ್ಹ ವಿಚಾರಗಳನ್ನು ಬರೆದು ಜಾತಿ, ಜಾತಿಗಳ ನಡುವೆ ದ್ವೇಷ ಹಬ್ಬಿಸುವ ಯತ್ನ ನಡೆದಿದ್ದು ಬಿಜೆಪಿ ಕಾನೂನು ಪ್ರಕೋಷ್ಠದಿಂದ ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಕರಪತ್ರದಲ್ಲಿ ಬ್ರಿಜೇಶ್ ಚೌಟರ ಭಾವಚಿತ್ರ ಬಳಸಿ ಆಕ್ಷೇಪಾರ್ಹ ವಿಚಾರಗಳನ್ನು ಮುದ್ರಿಸಿ, ದ್ವೇಷ ಹಬ್ಬಿಸುವ ಯತ್ನ ನಡೆದಿದೆ. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯೇ ಈ ಕೃತ್ಯವನ್ನು ಮಾಡಿದ್ದಾರೆ. ಈ ರೀತಿಯ ಕರಪತ್ರವನ್ನು ಮುದ್ರಿಸಿ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಜಾತಿಗಳ ನಡುವೆ ದ್ವೇಷ ಬಿತ್ತಿ ಅದರ ದುರ್ಲಾಭವನ್ನು ಕಾಂಗ್ರೆಸ್ ಅಭ್ಯರ್ಥಿ ಪಡೆಯುತ್ತಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾನೂನು ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ದೇವಿಪ್ರಸಾದ್ ಸಾಮಾನಿ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.
ಬಂಟ ಬ್ರಿಗೇಡ್ ಅಸ್ತಿತ್ವದಲ್ಲೇ ಇಲ್ಲ!
ಬಂಟ ಬ್ರಿಗೇಡ್ ಎನ್ನುವ ಯಾವುದೇ ಸಂಸ್ಥೆ ಅಸ್ತಿತ್ವದಲ್ಲಿಲ್ಲ. ಅಂತಹ ಸಂಸ್ಥೆ ಹೆಸರಲ್ಲಿ ಯಾವುದೇ ಕಾರ್ಯ ಚಟುವಟಿಕೆ ನಡೆಸುವುದು ಕಂಡುಬಂದಿಲ್ಲ. ಚುನಾವಣೆಗೆ ಎರಡು ದಿನ ಇರುವಾಗ ಮತದಾರರಿಗೆ ಪ್ರಭಾವ ಬೀರುವ ಉದ್ದೇಶದಿಂದ ಈ ರೀತಿಯ ಕೃತ್ಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇಂತಹ ವಿಚಾರಗಳನ್ನು ಪಸರಿಸಿ ಚುನಾವಣೆಯಲ್ಲಿ ಲಾಭ ಮಾಡಲು ಯತ್ನಿಸುತ್ತಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಅಧಿಕಾರಿಯಲ್ಲಿ ಒತ್ತಾಯಿಸಿದ್ದಾರೆ.