ದ.ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಚೌಟ ನಾಮಪತ್ರ: ಕೇಸರಿ ರಂಗು!
– ಮಂಗಳೂರಿನಲ್ಲಿ ರಣಕಹಳೆ ಮೊಳಗಿಸಿದ ಕೇಸರಿ ಪಡೆ
– ಬಿಜೆಪಿ ಜತೆ ಜೆಡಿಎಸ್ ಕಾರ್ಯಕರ್ತರ ಸಮಾಗಮ
NAMMUR EXPRESS NEWS
ಮಂಗಳೂರು: ಬಿಜೆಪಿಯ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರ ನಾಮಪತ್ರ ಸಲ್ಲಿಕೆಯು ಕೇಸರಿ ಪಡೆಯ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ದಕ್ಷಿಣ ಕನ್ನಡದಲ್ಲಿಯೂ ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆಯ ದಿನವಾಗಿತ್ತು. ಹೀಗಿರುವಾಗ, ಕೊನೆಯ ದಿನವೇ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು ಕೂಡ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸುವುದಕ್ಕೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದರು. ಈ ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಂಟ್ಸ್ ಹಾಸ್ಟೇಲ್ ಬಳಿಯಿರುವ ಬಿಜೆಪಿ ಚುನಾವಣಾ ಕಚೇರಿಯಿಂದ ಪಾದಯಾತ್ರೆಯಲ್ಲಿ ಟೌನ್ಹಾಲ್ವರೆಗೆ ತೆರಳಿ ಅಲ್ಲಿ ಬಹಿರಂಗ ಸಭೆಯನ್ನು ಮಾಡಿ ಆ ನಂತರದಲ್ಲಿ ನಾಮಪತ್ರವನ್ನು ಸಲ್ಲಿಕೆ ಮಾಡಲಾಯಿತು.
ಆದರೆ, ಇಂದಿನ ನಾಮಪತ್ರ ಸಲ್ಲಿಕೆಗೆ ಕ್ಷೇತ್ರದ ವಿವಿಧ ಮೂಲೆಯಿಂದ ದೊಡ್ಡ ಸಂಖ್ಯೆಯಲ್ಲೇ ಪಕ್ಷದ ಕಾರ್ಯಕರ್ತರು ನಗರಕ್ಕೆ ಹರಿದು ಬಂದಿದ್ದರು. ಆ ಮೂಲಕ ನಗರದೆಲ್ಲೆಡೆಯೂ ಇಂದು ಬಿಜೆಪಿ ಬಾವುಟ ಹಾಗೂ ಕೇಸರಿ ಶಾಲು ರಾರಾಜಿಸುತ್ತಿತ್ತು. ಬಂಟ್ಸ್ ಹಾಸ್ಟೇಲ್ನಲ್ಲಿ ಆರಂಭಗೊಂಡ ಪಾದೆಯಾತ್ರೆಯು ಟೌನ್ಹಾಲ್ ತಲುಪುವಷ್ಟರಲ್ಲಿ ಸಾವಿರಾರು ಮಂದಿ ಭಾಗಿಯಾಗುವ ಮೂಲಕ ಬಿಜೆಪಿಯ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡದಲ್ಲಿ ಚೌಟ ಅವರು ತಮ್ಮ ಉಮೇದುವಾರಿಕೆ ದಿನವೇ ಕೇಸರಿಯ ರಣ ಕಹಳೆಯನ್ನು ಮೊಳಗಿಸಿರುವುದು ಗಮನಾರ್ಹ.
ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲು, ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಪಕ್ಷದ ಪ್ರಮುಖ ನಾಯಕರಾದ ಸಿಟಿ ರವಿ, ಸುನಿಲ್ ಕುಮಾರ್, ದಕ್ಷಿಣ ಕನ್ನಡದ ಆರು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ ಹಲವು ಮುಖಂಡರು, ನಾಯಕರು ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮತಯಾಚನೆಯನ್ನೂ ಮಾಡಿದ್ದರು.
ಕೇಸರಿ ಶಾಲುಗಳ ನಡುವೆ ಹಸಿರು ಶಾಲು !
ಈ ಬಾರಿ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ದಕ್ಷಿಣ ಕನ್ನಡದಲ್ಲಿಯೂ ನಾಮಪತ್ರ ಸಲ್ಲಿಸುವ ವೇಳೆ ಜೆಡಿಎಸ್ನ ಕಾರ್ಯಕರ್ತರು, ಮುಖಂಡರು ಕೂಡ ತೆನೆಹೊತ್ತ ಮಹಿಳೆಯ ಹಸಿರು ಶಾಲು ಹಾಕಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಅದರಂತೆ, ಕೇಸರಿ ಶಾಲುಗಳ ನಡುವೆ ಅಲ್ಲಲ್ಲಿ ಹಸಿರು ಶಾಲು ಕೂಡ ರಾರಾಜಿಸುತ್ತಿರುವುದು ಕಂಡುಬಂತು.