ಕರಾವಳಿ ಗಡಿಯಲ್ಲಿ ಸಿಕ್ತು ಮೂಟೆ ಮೂಟೆ ಹಣ!
– ಕಾಸರಗೋಡಿನ ಮನೆಯಲ್ಲಿ ಬಚ್ಚಿಟ್ಟಿದ 7.2 ಕೋಟಿ ಹಣ
– 2000 ಮುಖಬೆಲೆಯ ಕೋಟಿ ಕೋಟಿ ನೋಟು ಗೋಣಿಚೀಲದಲ್ಲಿ ಪತ್ತೆ
– ಆರೋಪಿಗಳು ನಾಪತ್ತೆ; ಖೋಟಾ ನೋಟು ಜಾಲದ ಶಂಕೆ
NAMMUR EXPRESS NEWS
ಮಂಗಳೂರು: ಕಾಸರಗೋಡಿನ ಬಾಯಾರಿನಲ್ಲಿ ಇತ್ತೀಚೆಗೆ ಬ್ಯಾಂಕ್ನಿಂದ ದರೋಡೆ ಮಾಡಿದ್ದ 7ಕೆಜಿ ಚಿನ್ನಾಭರಣ ಹೂತಿಟ್ಟಿದ್ದ ಪ್ರಕರಣದ ಬೆನ್ನಲ್ಲೇ ಇದೀಗ ಇದೇ ಜಿಲ್ಲೆಯಲ್ಲಿ ಬೃಹತ್ ಮೊತ್ತದ ಹಣ ಬಚ್ಚಿಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈಗಾಗಲೇ ಚಲಾವಣೆಗೆ ನಿಷೇಧ ಹೇರಿರುವ 2000ರೂ. ಮುಖಬೆಲೆಯ ಬರೋಬ್ಬರಿ 7.2 ಕೋಟಿ ಮೊತ್ತದ ನಗದು ಕಾಸರಗೋಡಿನ ಹೊಸದುರ್ಗ ಸಮೀಪದ ಅಂಬಲತ್ತರ ಗುರುಪುರದ ಬಾಡಿಗೆ ಮನೆಯೊಂದರಲ್ಲಿ ಪತ್ತೆಯಾಗಿದೆ.
ಭಾರೀ ಮೊತ್ತದ ನೋಟು ಬಚ್ಚಿಟ್ಟಿರುವ ಮಾಹಿತಿ ಪಡೆದುಕೊಂಡಿದ್ದ ಅಂಬಲತ್ತರ ಠಾಣೆ ಪೊಲೀಸರು ಬುಧವಾರ ರಾತ್ರಿ ಮನೆಯ ಮೇಲೆ ದಾಳಿ ನಡೆಸಿದ್ದು, ದಾಳಿ ವೇಳೆ ಅಸಲಿ ಹಾಗೂ ನಕಲಿ ನೋಟುಗಳು ಸೇರಿದಂತೆ ಒಟ್ಟು 7.2 ಕೋಟಿ ರೂ.ನಷ್ಟು ನಗದು ಸಿಕ್ಕಿದೆ.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದೆ.ಕೇಂದ್ರ ಸರಕಾರ ರದ್ದು ಗೊಳಿಸಿದ ಎರಡು ಸಾವಿರ ಮುಖ ಬೆಲೆಯ ನೋಟು ಗಳು ಲಭಿಸಿವೆ. ವಶಪಡಿಸಿಕೊಂಡಿರುವ ನೋಟಿನಲ್ಲಿ ಖೋಟಾ ನೋಟುಗಳು ಕೂಡ ಇರುವುದು ಪೋಲಿಸರಿಗೆ ಖೋಟಾ ನೋಟು ಜಾಲದ ಬಗ್ಗೆಯೂ ಅನುಮಾನ ಮೂಡಿದೆ. ಇನ್ನು ಇಷ್ಟೊಂದು ದೊಡ್ಡ ಮೊತ್ತದ ನೋಟು ಪತ್ತೆಯಾಗಿರುವ ಈ ಮನೆಯು ಪಾರಂಪಳ್ಳಯ ಬಾಬುರಾಜ್ ಎಂಬವರಿಗೆ ಸೇರಿದೆ. ಅದನ್ನು ಅವರು ಪಾಣತ್ತೂರು ನಿವಾಸಿಯಾಗಿದ್ದು, ಈಗ ಕಲ್ಲೊಟ್ನಲ್ಲಿ ವಾಸವಿರುವ ಅಬ್ದುಲ್ ರಝಾಕ್ ಅವರಿಗೆ ಬಾಡಿಗೆ ಕೊಟ್ಟಿದ್ದಾರೆ. ರಝಾಕ್ ಎಂಬಾತ ಏಳು ವರ್ಷಗಳಿಂದ ಬೇಕಲ ಹದ್ದಾದ್ ನಗರದಲ್ಲಿ ವಾಸಿಸುತ್ತಿರುವ ಪುತ್ತೂರು ಮೂಲದ ಸುಲೈಮಾನ್ ಎಂಬಾತನ ಜತೆಗೆ ವ್ಯವಹಾರ ನಡೆಸುತ್ತಿದ್ದಾರೆ. ರಝಾಕ್, ಸುಲೈಮಾನ್ ವ್ಯವಹಾರಗಳಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದು, ಅವರಿಬ್ಬರ ಅಸಲಿ ವ್ಯವಹಾರ ಏನು ಎನ್ನುವುದು ಪೊಲೀಸರ ತನಿಖೆಯಿಂದ ಬಯಲಾಗಬೇಕಾಗಿದೆ.
ಸದ್ಯ ಸುಲೈಮಾನ್ ಹಾಗೂ ಅಬ್ದುಲ್ ರಝಾಕ್ ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆಯನ್ನು ಕೂಡ ಚುರುಕುಗೊಳಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಸುಲೈಮಾನ್ ಬೇಕಲದ ಬಳಿ ಟೆನ್ನಿಸ್ ಕೋರ್ಟ್ ನಿರ್ಮಿಸಿದ್ದು, ಬಡವರಿಗಾಗಿ ಆರ್ಥಿಕ ನೆರವನ್ನು ಕೂಡ ನೀಡುತ್ತಿದ್ದಾರೆ.
ಇನ್ನೊಂದೆಡೆ, ಇಷ್ಟೊಂದು ದೊಡ್ಡ ಮೊತ್ತದ ನೋಟು ಸಿಕ್ಕಿರುವ ಈ ಮನೆಯನ್ನು ಬಾಬುರಾಜ್ ಎಂಬವರು ಬಾಡಿಗೆ ಕೊಟ್ಟಿದ್ದು, ಸದ್ಯ ಅವರು ಗಲ್ಫ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪೋಲೀಸರು ನೋಟು ಲೆಕ್ಕ ಮಾಡುವ ಮೆಷಿನ್ ಬಳಸಿಕೊಂಡು ಎಣಿಕೆ ಕಾರ್ಯವನ್ನು ಮಾಡಲಾಗುತ್ತಿದೆ. ಈ ಹಣವನ್ನು 100ರ ಕಂತು ಮಾಡಿ ಗೋಣಿ ಚೀಲದಲ್ಲಿ ಹಣವನ್ನು ತುಂಬಿಸಿಡಲಾಗಿತ್ತು. ಸದ್ಯ ಪ್ರಕರಣದ ತನಿಖೆ ಮುಂದುವರಿದಿರುವ ಕಾರಣ, ಈ ಕೋಟ್ಯಂತರ ಹಣದ ಮೂಲ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.