ಕರಾವಳಿಯಲ್ಲಿ ತಾಪಮಾನ ಹೆಚ್ಚಳ: ಆಡಳಿತ ಅಲರ್ಟ್!
– ಸರಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೌಲಭ್ಯಕ್ಕೆ ಪ್ಲಾನ್
– ಜಿಲ್ಲಾ ಮಟ್ಟದಲ್ಲಿ 6 ಬೆಡ್, ಪ್ರತಿ ತಾಲೂಕಿನಲ್ಲಿ 2 ಬೆಡ್ ,ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಒಂದು ಬೆಡ್ ಮೀಸಲು
NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ 6 ಬೆಡ್,ಪ್ರತಿ ತಾಲೂಕಿನಲ್ಲಿ ಎರಡು ಬೆಡ್ ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಒಂದು ಬೆಡ್ ಗಳನ್ನು ಮೀಸಲಿಡಲಾಗಿದೆ. ದ.ಕ ಜಿಲ್ಲಾ ಅರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್ .ಆರ್.ತಿಮ್ಮಯ್ಯ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸೋಮವಾರ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರ ಕರ್ತ ಸಂಘದ ವತಿಯಿಂದ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಹಮ್ಮಿಕೊಂಡ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವು ದಶಕಗಳ ತಾಪಮಾನವನ್ನು ಗಮನಿಸಿದರೆ 32 ಡಿಗ್ರಿ ಸೆಲ್ಸಿಯಸ್ 33 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿತ್ತು. ಈ ಬಾರಿ ತಾಪಮಾನ 36ರಿಂದ 40 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದೆ ಎಂದರು.
ಬಿಸಿಲಲ್ಲಿ ಓಡಾಡಬೇಡಿ.. ಅರೋಗ್ಯ ಎಚ್ಚರ!
ತಾಪಮಾನದಿಂದ ಬಿಸಿಲಿನಲ್ಲಿ ಹೆಚ್ಚು ಓಡಾಡುತ್ತಿರುವವರಿಗೆ ತಲೆ ನೋವು, ಸುಸ್ತು, ನಿಶ್ಯಕ್ತಿ,ಚರ್ಮ ತುರಿಕೆ, ಜ್ವರ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಕೆಲವೊಮ್ಮೆ ಬಿಸಿಲಿನಾಘಾತ ಸಂಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಕಷ್ಟು ಮುಂಜಾಗ್ರತೆಯ ಕ್ರಮ ಕೈಗೊಳ್ಳುವ ಅಗತ್ಯ ವಿದೆ ಎಂದು ಡಾ.ತಿಮ್ಮಯ್ಯ ತಿಳಿಸಿದ್ದಾರೆ. ಬಿಸಿಲಿನ ಜಳ ಹೆಚ್ಚಿರುವ ಸಂದರ್ಭದಲ್ಲಿ ಹೊರಗೆ ಓಡಾಡದೆ ಇರುವುದು ಸೂಕ್ತ. ಶುದ್ಧ ನೀರಿನ ಸೇವನೆ,ಮಜ್ಜಿಗೆ ಸೇವನೆ,,ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆಧರಿಸುವುದು ಬಿಸಿಲಿನ ನೇರ ಘಾತ ತಡೆಯಲು ಚಪ್ಪಲಿ ಧರಿಸುವುದು ಕೊಡೆ ಬಳಸುವುದು ಉತ್ತಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನಿರ್ಜಲೀಕರಣವಾಗದಂತೆ ಎಚ್ಚರ ವಹಿಸಬೇಕು ಎಂದು ಡಾ.ತಿಮ್ಮಯ್ಯ ಸಲಹೆ ನೀಡಿದರು.
ಡೆಂಗ್ಯೂ ಕೂಡ ಹೆಚ್ಚಾಯ್ತು..!
ದಕ್ಷಿಣ ಕನ್ನಡ ಜಿಲ್ಲಾ ರೋಗ ವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್ ಚಂದ್ರ ಕುಲಾಲ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.4 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿದೆ. ಮರಗಳ ನಾಶ ,ವಾಹನಗಳ ದಟ್ಟಣೆ, ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಾಪಮಾನದ ಏರಿಕೆಯಾಗುತ್ತಿದೆ. ತಾಪಮಾನ ಹೆಚ್ಚುತ್ತಿರುವ ಸಂದರ್ಭದಲ್ಲಿ ಸೊಳ್ಳೆಗಳು ಹೆಚ್ಚುತ್ತಿರುವ ಕಾರಣ ಡೆಂಗ್ಯೂ ಜ್ವರದ ಪ್ರಕರಣಗಳು ಹೆಚ್ಚುತ್ತಿವೆ ಇದುವರೆಗೆ 108 ಡೆಂಗ್ಯೂ ಪ್ರಕರಣಗಳು ಕಂಡು ಬಂದಿವೆ ಎಂದು ಹೇಳಿದ್ದಾರೆ.