ಕರಾವಳಿ ಟಾಪ್ ನ್ಯೂಸ್
ಬೆಂಗಳೂರು -ಮಂಗಳೂರು ರೈಲು ಇನ್ನು 15 ದಿನ ಇಲ್ಲ!
– ಭಾರೀ ಗುಡ್ಡ ಕುಸಿತ: ಕುಸಿದ ರೈಲು ಮಾರ್ಗ
– ಮೂಡುಬಿದಿರೆ: ಗ್ಯಾಸ್ ಗೀಸರ್ ಸೋರಿಕೆ: ಸಾವು
– ಕಾರ್ಕಳ: ಟಿಪ್ಪರ್-ಬೈಕ್ ಢಿಕ್ಕಿ ಯುವಕ ದುರ್ಮರಣ
– ಮಂಗಳೂರು: ವಾಹನ ವೇಗವಾಗಿ ಚಲಿಸಿದ್ರೆ ಕೇಸ್!
NAMMUR EXPRESS ನ್ಯೂಸ್
ಮಂಗಳೂರು: ಭಾರೀ ಭೂಕುಸಿತ ಸಂಭವಿಸಿರುವ ಶಿರಾಡಿ ಘಾಟ್ನ ಎಡಕುಮೇರಿ ಮತ್ತು ಕಡಗರಳ್ಳಿ ನಡುವಿನ ರೈಲ್ವೆ ಹಳಿ ದುರಸ್ತಿ ಕಾಮಗಾರಿಯು ಯುದ್ಧೋಪಾದಿಯಲ್ಲಿ ಪ್ರಗತಿಯಲ್ಲಿದೆ. ಶುಕ್ರವಾರ ಸಂಜೆ ಮತ್ತೆ ಭಾರೀ ಭೂಕುಸಿತ ಸಂಭವಿಸಿದೆ. ಹಲವು ರೈಲುಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ರೈಲು ಹಳಿಗಳ ಪುನಶ್ಚೇತನಕ್ಕೆ ರೈಲು ಮಾರ್ಗವನ್ನು ಸಹಜ ಸ್ಥಿತಿಗೆ ತರುವುದಕ್ಕೆ ಇನ್ನೂ 15 ದಿನ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ರೈಲು ಹಳಿ ಮರುಸ್ಥಾಪನೆಗೆ ಇನ್ನೂ 15 ದಿನ ಬೇಕಾಗಬಹುದು.ಪ್ರಯಾಣಿಕರ ಅನುಕೂಲಕ್ಕಾಗಿ ಜುಲೈ 30 ಮತ್ತು 31 ರಂದು ಬೆಂಗಳೂರಿಗೆ ಎರಡು ವಿಶೇಷ ರೈಲುಗಳು ಸಂಚರಿಸಲಿವೆ. ದಕ್ಷಿಣ ರೈಲ್ವೆಯು ಜುಲೈ 30 ರಂದು ಮಡಗಾಂವ್-ಬೆಂಗಳೂರು ಏಕಮುಖ ವಿಶೇಷ ರೈಲನ್ನು ಒದಗಿಸಿದ್ದು ಅದು ಮಂಗಳೂರು ಜಂಕ್ಷನ್ ಮೂಲಕ ಹೋಗಲಿದೆ. ಈ ರೈಲು ಜುಲೈ 30 ರಂದು ಸಂಜೆ 4.30 ಕ್ಕೆ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್, ಮಂಗಳೂರು ಜಂಕ್ಷನ್, ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ತ್ರಿಶೂರು, ಪಾಲಕ್ಕಾಡ್ ಜಂಕ್ಷನ್ ಮೂಲಕ ಚಲಿಸುತ್ತದೆ. , ಕೊಯಮತ್ತೂರು ಜಂಕ್ಷನ್, ಕೃಷ್ಣರಾಜಪುರಂ ಮತ್ತು ಮರುದಿನ ಮಧ್ಯಾಹ್ನ 3.30 ಕ್ಕೆ ಬೆಂಗಳೂರು ತಲುಪುತ್ತದೆ.
ಅದೇ ರೀತಿ ಜುಲೈ 31 ರಂದು ಕಾರವಾರದಿಂದ ಯಶವಂತಪುರಕ್ಕೆ ಏಕಮುಖ ರೈಲು ಸಂಚರಿಸಲಿದ್ದು, ಸಂಜೆ 5.30ಕ್ಕೆ ಕಾರವಾರದಿಂದ ಪ್ರಯಾಣ ಆರಂಭಿಸಿ ಕುಮಟಾ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಮಂಗಳೂರು ಜಂಕ್ಷನ್, ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್ ಮೂಲಕ ಸಂಚರಿಸಲಿದೆ. ತ್ರಿಶೂರ್, ಪಾಲಕ್ಕಾಡ್ ಜಂಕ್ಷನ್, ಕೊಯಮತ್ತೂರು ಜಂಕ್ಷನ್, ಕೃಷ್ಣರಾಜಪುರಂ ಮತ್ತು ಮರುದಿನ ಮಧ್ಯಾಹ್ನ 2.15 ಕ್ಕೆ ಬೆಂಗಳೂರು ತಲುಪುತ್ತದೆ.
ಗ್ಯಾಸ್ ಗೀಸರ್ ವಿಷಾನಿಲ ಸೋರಿಕೆ: ಯುವಕ ಸಾವು
ಮೂಡುಬಿದಿರೆ: ಸ್ನಾನಕ್ಕೆಂದು ಬಾತ್ ರೂಮ್ ಒಳಗೆ ತೆರಳಿದ್ದ ಯುವಕ ಗ್ಯಾಸ್ ಗೀಸರ್ ವಿಷಾನಿಲ ಸೋರಿಕೆಯಾಗಿ ಉಸಿರುಗಟ್ಟಿ ಮೃತಪಟ್ಟ ಘಟನೆ ರವಿವಾರ ರಾತ್ರಿ ಕೋಟೆಬಾಗಿಲಿನಲ್ಲಿ ಸಂಭವಿಸಿದೆ. ಕೋಟೆಬಾಗಿಲಿನ ಫ್ಲ್ಯಾಟ್ ಒಂದರಲ್ಲಿ ವಾಸವಾಗಿರುವ ದಿ. ಅನ್ಸಾರ್ ಎಂಬವರ ಪುತ್ರ ಶಾರಿಕ್ (18) ಮೃತಪಟ್ಟ ಯುವಕ. ಶಾರಿಕ್ ಸ್ನಾನಕ್ಕೆಂದು ಬಾತ್ ರೂಮ್ ಗೆ ತೆರಳಿದ್ದರು. ತುಂಬಾ ಹೊತ್ತಾದರೂ ಶಾರಿಕ್ ಹೊರಬಾರದ ಕಾರಣ ಅವರ ಬಾತ್ ರೂಮ್ ಬಾಗಿಲು ಒಡೆದು ನೋಡಿದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ. ಸಂಪೂರ್ಣ ಮುಚ್ಚಿದ್ದ ಬಾತ್ ರೂಮ್ ನಲ್ಲಿ ಗ್ಯಾಸ್ ಗೀಸರ್ ಬಳಸಿದ್ದರಿಂದ ವಿಷಾನಿಲ ಬಿಡುಗಡೆ ಆಗಿದೆ. ಇದನ್ನು ಆಕಸ್ಮಿಕವಾಗಿ ಸೇವಿಸಿದ್ದರಿಂದ ಶಾರಿಕ್ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಶಾರಿಕ್ ದ್ವಿತೀಯ ಪಿಯುಸಿ ಮುಗಿಸಿದ್ದು, ಮೂಡುಬಿದಿರೆಯ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೇಶಾತಿ ಪಡೆದಿದ್ದರು ಎಂದು ತಿಳಿದುಬಂದಿದೆ.
ಕಾರ್ಕಳ: ಟಿಪ್ಪರ್-ಬೈಕ್ ಢಿಕ್ಕಿ ಯುವಕ ಸಾವು
ಕಾರ್ಕಳ : ಟಿಪ್ಪರ್ ಮತ್ತು ಬೈಕ್ ಢಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಾರ್ಕಳ ಪುಕ್ಕೇರಿ ಬಳಿಯ ಫುಡ್ ಬಾಸ್ಕೆಟ್ ಮುಂಭಾಗದಲ್ಲಿ ನಡೆದಿದೆ. ಮೃತ ಯುವಕನನ್ನು ಬೈಪಾಸ್ ನಿವಾಸಿ, ಕಾರ್ ಮೆಕ್ಯಾನಿಕ್ ನಿಝಾಮ್ (21) ಎಂದು ತಿಳಿದುಬಂದಿದೆ. ಸಾಣೂರಿನಿಂದ ಕೆಲಸಕ್ಕೆಂದು ಬೆಳಗ್ಗೆ 10:30ರ ಸುಮಾರಿಗೆ ಕಾರ್ಕಳ ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಪುರಿಯ ಬಳಿ ಮುಂದಿನಿಂದ ಹೋಗುತ್ತಿದ್ದ ರಿಕ್ಷಾವನ್ನು ಓವರ್ ಟೇಕ್ ಮಾಡುವಾಗ ಎದುರಿನಿಂದ ಅತಿವೇಗದಿಂದ ಬಂದ ಟಿಪ್ಪರ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ವಾಹನ ವೇಗವಾಗಿ ಚಲಿಸಿದ್ರೆ ಕೇಸ್!
ಮಂಗಳೂರ : ವಾಹನಗಳ ವೇಗ ಪತ್ತೆ ಮಾಡುವುದಕ್ಕಾಗಿ ಪೊಲೀಸರು ಮೊಬೈಲ್ ಸ್ಪೀಡ್ ಡಿಟೆಕ್ಷನ್ ರಾಡಾರ್ ಗನ್’ಗಳ ಬಳಕೆ ಆರಂಭಿಸಿದ್ದು, ಸೋಮವಾರ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಅಪಘಾತಗಳನ್ನು ತಡೆಯಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊರಡಿಸಿರುವ ವಾಹನಗಳ ವೇಗಮಿತಿ ಅಧಿಸೂಚನೆಯಂತೆ ದ.ಕ. ಜಿಲ್ಲಾ ಪೊಲೀಸರು 5 ಮೊಬೈಲ್ ಸ್ಪೀಡ್ ಡಿಟೆಕ್ಷನ್ ಗನ್’ಗಳೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ವಾಹನಗಳ ವೇಗ ಪತ್ತೆ ಮಾಡಲು ಪೊಲೀಸರಿಗೆ ಒದಗಿಸಲಾಗಿರುವ ರಾಡಾರ್ ಗನ್ ಕನಿಷ್ಠ 100 ಮೀಟರ್ ಅಂತರದಲ್ಲಿ ವಾಹನಗಳ ವೇಗವನ್ನು ಪತ್ತೆ ಹಚ್ಚುತ್ತದೆ. ಈಗಾಗಲೇ 10ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಕಮಿಷನರೆಟ್ ವ್ಯಾಪ್ತಿಗೆ ಇಂತಹ 3 ಗನ್ಗಳನ್ನು ಒದಗಿಸಲಾಗಿದೆ. ಸೋಮವಾರ ಬಂಟ್ವಾಳ ಸಂಚಾರ ಪೊಲೀಸರು ರಾ.ಹೆ.75ರ ತುಂಬೆ ರಾಮಲ್ಕಟ್ಟೆ ಭಾಗದಲ್ಲಿ ಸ್ಪೀಡ್ ಡಿಟೆಕ್ಷನ್ ರಾಡಾರ್ ಗನ್ ಕೆಮರಾ ಬಳಸುವ ಮೂಲಕ ವಾಹನಗಳ ವೇಗವನ್ನು ಪತ್ತೆ ಹಚ್ಚಿ ದಂಡ ವಸೂಲಿ ಮಾಡಿದರು.