ಬಂಡಾಯ, ಪಕ್ಷೇತರರ ಸ್ಪರ್ಧೆ ಕುತೂಹಲ!
– ಕರಾವಳಿಯಲ್ಲಿ ಕುತೂಹಲ ಮೂಡಿಸಿರುವ ವಿಧಾನ ಪರಿಷತ್ನ ನೈರುತ್ಯ ಪದವೀಧರ-ಶಿಕ್ಷಕರ ಕ್ಷೇತ್ರ
– ಏನಿದೆ ರಾಜಕೀಯ? ಯಾರ ಯಾರ ಸ್ಪರ್ಧೆ..?
NAMMUR EXPRESS NEWS
ಉಡುಪಿ/ಮಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಈ ಬಾರಿ ಕರಾವಳಿ ಭಾಗವನ್ನು ಪ್ರತಿನಿಧಿಸುವ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರವು ಹೆಚ್ಚು ಗಮನಸೆಳೆಯುತ್ತಿವೆ. ಏಕೆಂದರೆ, ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಈ ಬಾರಿ ಹಾಲಿ ಜೆಡಿಎಸ್ ಸದಸ್ಯ ಭೋಜೇಗೌಡರು ಕಣಕ್ಕಿಳಿಯುತ್ತಿದ್ದಾರೆ. ಬಿಜೆಪಿ ಕೂಡ ಭೋಜೇಗೌಡರಿಗೆ ತಮ್ಮ ಮೈತ್ರಿಯಿಂದಾಗಿ ಬೆಂಬಲಿಸುತ್ತಿದೆ. ಆದರೆ, ಈ ಬಾರಿ ಈ ಕ್ಷೇತ್ರದಿಂದ ಪದವೀಧರ ಅಭ್ಯರ್ಥಿಯಾಗಿ ಬಿಜೆಪಿಯಿಂದ ಟಿಕೆಟ್ ಪಡೆಯುವುದಕ್ಕೆ ಮಾಜಿ ಶಾಸಕರಾದ ರಘುಪತಿ ಭಟ್ ಅವರು ಮುಂಚೂಣಿಯಲ್ಲಿದ್ದರು. ಆದರೆ, ಬಿಜೆಪಿ ಅವರಿಗೆ ಟಿಕೆಟ್ ನೀಡದೆ ಶಿವಮೊಗ್ಗದ ಧನಂಜಯ ಸರ್ಜಿ ಅವರಿಗೆ ಟಿಕೆಟ್ ನೀಡಿದೆ. ಇದು ರಘುಪತಿ ಅವರನ್ನು ಕೆರಳಿಸಿದ್ದು, ಅವರು ಇದೀಗ ಬಿಜೆಪಿ ವಿರುದ್ಧವೇ ಸೆಡ್ದುಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ನೆರುತ್ಯ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಈ ಹಿನ್ನಲೆಯಲ್ಲಿ ಕರಾವಳಿಯ ಪದವೀಧರ ಕ್ಷೇತ್ರವು ಹೆಚ್ಚು ಗಮನಸೆಳೆಯುವ ಕ್ಷೇತ್ರವಾಗಿ ಗುರುತಿಸಿಕೊಂಡಿದೆ.
ಇನ್ನು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಈ ಬಾರಿ ಹರೀಶ್ ಆಚಾರ್ಯ ಅವರು ಪಕ್ಷೇತರರಾಗಿ ಸ್ಪರ್ಧಿಸುವ ನಿರ್ಧಾರವನ್ನು ಮಾಡಿದ್ದಾರೆ. ಕಾಲೇಜು ದಿನಗಳಲ್ಲೇ ಎಬಿವಿಪಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹರೀಶ್ ಆಚಾರ್ಯ ಅವರು ಸಹಕಾರ ಭಾರತಿಯಲ್ಲಿಯೂ ಪೂರ್ಣಾವಧಿ ಕಾರ್ಯಕರ್ತರಾಗಿದ್ದರು. ಈ ನಡುವೆ ಸಹಕಾರ ಭಾರತಿ ರಾಜ್ಯ ಕಾರ್ಯದರ್ಶಿಯಾಗಿ, ಸಹಕಾರಿ ವಲಯದ ಬ್ಯಾಂಕ್ಗಳಲ್ಲಿ ಕೂಡ ಗುರುತಿಸಿಕೊಂಡಿದ್ದರು. ಮುಂದೆ ಮಂಗಳೂರು ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ, ಶಿಕ್ಷಕ ವರ್ಗದ ಜತೆಗೆ ಹೆಚ್ಚಿನ ಒಡನಾಟವನ್ನು ಹೊಂದಿರುವ ಅವರು ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇವರ ಜತೆಗೆ ಮಾಜಿ ಸಿಂಡಿಕೇಟ್ ಸದಸ್ಯರಾದ ರಮೇಶ್ ಕೆ. ಹಾಗೂ ಮಾಜಿ ಎಂಎಲ್ಸಿ ಗಣೇಶ್ ಕಾರ್ಣಿಕ್ ಕೂಡ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸುವುದಕ್ಕೆ ಬಯಸಿದ್ದರು. ಆದರೆ, ಈ ಕ್ಷೇತ್ರವನ್ನು ಬಿಜೆಪಿಯು ಜೆಡಿಎಸ್ಗೆ ಬಿಟ್ಟು ಕೊಟ್ಟಿರುವುದರಿಂದ ಇವರೆಲ್ಲರ ನಿರೀಕ್ಷೆಗಳು ಹುಸಿಯಾಗಿದೆ.
ಹರೀಶ್ ಆಚಾರ್ಯ ಸೇರಿ ಇತರರು ಕಣಕ್ಕಿಳಿದರೆ ಕಷ್ಟ ಕಷ್ಟ!
ಬಿಜೆಪಿಯ ಅನೇಕರು ಇದೀಗ ಹರೀಶ್ ಆಚಾರ್ಯ ಅವರಿಗೆ ಪಕ್ಷೇತರರಾಗಿ ಕಣಕ್ಕಿಳಿಯುವಂತೆ ಒತ್ತಡ ಹಾಕಿರುವುದಾಗಿ ಮೂಲಗಳು ತಿಳಿಸಿವೆ. ಒಂದುವೇಳೆ ಹರೀಶ್ ಆಚಾರ್ಯ ಕಣಕ್ಕಿಳಿದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಭೋಜೇಗೌಡರಿಗೂ ದಕ್ಷಿಣ ಕನ್ನಡ-ಉಡುಪಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಪೈಪೋಟಿ ಎದುರಾಗುವ ಸಾಧ್ಯತೆಯಿದೆ. ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಹಾಗೂ ನೆಟ್ವರ್ಕ್ ಗೆಲುವಿಗೆ ಪ್ರಮುಖ ಅಸ್ತ್ರವಾಗಿರುವ ಕಾರಣ ಹೆಚ್ಚು ಮಂದಿ ಪಕ್ಷೇತರರಾಗಿ ಕಣಕ್ಕಿಳಿಯುತ್ತಿದ್ದಂತೆ ಜೆಡಿಎಸ್-ಬಿಜೆಪಿ ಮೈತ್ರಿ ಅಥವಾ ಕಾಂಗ್ರೆಸ್ನಿಂದ ಕಣಕ್ಕಿಳಿಯುವ ಅಭ್ಯರ್ಥಿ ಪಾಲಿಗೆ ದೊಡ್ಡ ಸವಾಲಾಗುವುದರಲ್ಲಿ ಅನುಮಾನವಿಲ್ಲ.