ನವ ವಿವಾಹಿತನ ಬಲಿ ಪಡೆದ ಸಿಡಿಲು!
– ಸುಬ್ರಹ್ಮಣ್ಯದ ಗ್ರಾಮದ ಪರ್ವತಮುಖಿಯಲ್ಲಿ ಘಟನೆ
– ಮಂಗಳೂರು: ಮಾದಕ ವಸ್ತು ಮಾರುತ್ತಿದ್ದ ಇಬ್ಬರ ಬಂಧನ!
– ಟಿಪ್ಪರ್ ಡಿಕ್ಕಿಯಾಗಿ ಅಪಘಾತ : ಓರ್ವ ಸಾವು!
– ಸಿಬಿಐ ಹೆಸರಿನಲ್ಲಿ ಮೋಸ : 15 ಲಕ್ಷ ರೂ. ವಂಚನೆ!
– ಟೋಲ್ ಗೇಟ್ಗೆ ಮುತ್ತಿಗೆ ಪ್ರಕರಣ: 101 ಮಂದಿಗೆ ನ್ಯಾಯಾಲಯ ಸಮನ್ಸ್
NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಸುಬ್ರಹ್ಮಣ್ಯದ ಗ್ರಾಮದ ಪರ್ವತಮುಖಿಯಲ್ಲಿ ಸಿಡಿಲು ಬಡಿದು ಸೋಮಸುಂದರ್ (34) ಸಾವು ಮೃತಪಟ್ಟಿದ್ದಾನೆ. ಈತ ಹತ್ತು ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ. ಸಂಜೆ ವೇಳೆ ಸುಬ್ರಮಣ್ಯ ಭಾಗದಲ್ಲಿ ಗುಡುಗು ಸಿಡಿಲು ಸಹಿತ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಮನೆ ಅಂಗಳದಲ್ಲಿ ಅಡಿಕೆಯನ್ನು ಯುವಕ ರಾಶಿ ಮಾಡುತ್ತಿದ್ದ. ಈ ವೇಳೆ ಸೋಮ ಸುಂದರ್ಗೆ ಸಿಡಿಲು ಬಡಿದಿದ್ದರಿಂದ ಮೃತಪಟ್ಟಿದ್ದಾನೆ.
ಮಾದಕ ವಸ್ತು ಮಾರುತ್ತಿದ್ದ ಇಬ್ಬರ ಬಂಧನ!
ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ನಿಷೇಧಿತ ಡ್ರಗ್ಸ್ ಎಂಡಿಎಂಎ ಮಾರುತ್ತಿದ್ದ ಇಬ್ಬರನ್ನು ಪತ್ತೆಹಚ್ಚಿ, ಅವರನ್ನು ಸೆರೆಹಿಡಿದಿದ್ದು, ಆರೋಪಿಗಳಿಂದ 16 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ನಗರದ ಕೋಟೆಕಾರ್ ಬೀರಿ ಬಳಿಯ ಮನೆಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ಬೃಹತ್ ಪ್ರಮಾಣದಲ್ಲಿ ಎಂಡಿಎಂಎ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿತರನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳು ಬೆಂಗಳೂರಿನಿಂದ ಮಾದಕ ವಸ್ತುವನ್ನು ಖರೀದಿಸಿ ತಂದು ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡಲು ಪ್ರಯತ್ನಿಸುತ್ತಿದ್ದರು. ಆರೋಪಿತರಿಂದ 9,00,000 ರೂ ಮೌಲ್ಯದ 407 ಗ್ರಾಂ ನಿಷೇಧಿತ ಎಂಡಿಎಂಎ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿರುತ್ತಾರೆ.
ಸೇತುವೆಯಲ್ಲಿ ಅಪಘಾತ: ಸವಾರ ಸಾವು
ಮಂಗಳೂರು: ವಾಹನಗಳ ಅನಿಯಂತ್ರಿತ ವೇಗದಿಂದ ಕಳೆದ ಕೆಲ ದಿನಗಳಿಂದ ತೀರಾ ಅಪಾಯಕಾರಿಯಾಗಿ ಪರಿಣಮಿಸುತ್ತಿರುವ ಬಿ.ಸಿ.ರೋಡಿನ ಸೇತುವೆಯಲ್ಲಿ ಗುರುವಾರ ಟಿಪ್ಪರ್ ಡಿಕ್ಕಿಯಾಗಿ ಸ್ಕೂಟರ್ ಸವಾರನೋರ್ವ ಸಾವನ್ನಪ್ಪಿದ್ದಾರೆ. ನರಿಕೊಂಬು ಗ್ರಾಮದ ಪೊಯಿತ್ತಾಜೆ ಎಂಬಲ್ಲಿನ ನಿವಾಸಿ ನರಿಕೊಂಬು ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಸುಬ್ಬಣ್ಣ ಭಂಡಾರಿ (68) ಅವರು ಸಾವನ್ನಪ್ಪಿದವರು. ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಹೊಂದಿದ್ದರು.
ಸಿಬಿಐ ಹೆಸರಿನಲ್ಲಿ ಮೋಸ: ಗುತ್ತಿಗೆದಾರನಿಗೆ 15 ಲಕ್ಷ ರೂ. ವಂಚನೆ!
ಮಂಗಳೂರು: ಗುತ್ತಿಗೆದಾರೊಬ್ಬರಿಗೆ ಸಿಬಿಐ ಅಧಿಕಾರಿ ಎಂದು ಹೇಳಿ ಕರೆ ಮಾಡಿ ನಿಮ್ಮ ಮೇಲೆ ಸಿಬಿಐ ಕೇಸು ಆಗಿದೆ ಎಂದು ಹೇಳಿ ಬರೋಬ್ಬರಿ 15 ಲಕ್ಷಕ್ಕೂ ಹೆಚ್ಚು ಮೊತ್ತ ಲಪಟಾಯಿಸಿರುವ ಕುರಿತಂತೆ ಸೈ ಬರ್ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿ ಒಬ್ಬರಿಗೆ 25ರಂದು ಅಪರಿಚಿತ ನಂಬರ್ನಿಂದ ಕರೆ ಬಂದಿದೆ. ಕರೆ ಮಾಡಿದಾತ ನಿಮ್ಮ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಹಣದ ವ್ಯವಹಾರ ಆಗುತ್ತಿರುವ ಬಗ್ಗೆ ಹೇಳಿದ್ದು, ಮೊಬೈಲ್ ಸಂಖ್ಯೆಯನ್ನು ಅಮಾನತು ಮಾಡಬೇಕಾಗುತ್ತದೆ. ನಿಮ್ಮ ಮೇಲೆ ಮುಂಬೈ ಸಿಬಿಐ ಕಚೇರಿಯಲ್ಲಿ ಕೇಸು ಆಗಿದೆ ಎಂದು ಹೇಳಿದ್ದ. ಅನಂತರ, ಕರೆಯನ್ನು ಸಿಬಿಐ ಅಧಿಕಾರಿಗೆ ವರ್ಗಾಯಿಸುತ್ತೇನೆ ಎಂದು ಹೇಳಿದ್ದು, ಇನ್ನೊಬ್ಬ ವ್ಯಕ್ತಿ ಮಾತನಾಡಿದ್ದ. ಆತ ನಿಮ್ಮ ಬ್ಯಾಂಕ್ ಖಾತೆಯಿಂದ ಹಣದ ಅವ್ಯವಹಾರ ಆಗಿದ್ದು ಖಾತೆಯನ್ನು ಮುಟ್ಟುಗೋಲು ಹಾಕಲಾಗುವುದು ಎಂದಿದ್ದ.
ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಬೇಕು. ಅದಕ್ಕಾಗಿ ಸ್ಕೈ ಪ್ ಆಯಪ್ ಡೌನ್ಲೋಡ್ ಮಾಡುವಂತೆ ಸೂಚಿಸಿದ್ದ. ಬಳಿಕ ಸಿಬಿಐ ತನಿಖಾಧಿಕಾರಿ ಎಂದು ಹೇಳಿಕೊಂಡು ನೋಟಿಸ್ ಕಳುಹಿಸಿದ್ದು, ನಮ್ಮೊಂದಿಗೆ ಸಹಕರಿಸಿದರೆ ನಿಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸುತ್ತೇವೆ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದ. ಪ್ರಕರಣದಿಂದ ಮುಕ್ತಗೊಳ್ಳುವ ಉದ್ದೇಶದಿಂದ ಗುತ್ತಿಗೆದಾರರು ಅದಕ್ಕೆ ಮೊದಲಿಗೆ 2.99 ಲಕ್ಷ ರೂ. ಹಾಕಿದ್ದರು. ಬಳಿಕ ವಿವಿಧ ಖಾತೆ ಸಂಖ್ಯೆಗಳನ್ನು ಕಳುಹಿಸಿದ್ದ ಖದೀಮರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಒಟ್ಟು 15,01,049 ರೂಪಾಯಿ ಹಣವನ್ನು ವರ್ಗಾಯಿಸಿ ದ್ದಾರೆ. ಕೊನೆಗೆ ಅನುಮಾನ ಬಂದ ಅವರು ಮೇ 3 ರಂದು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.
101 ಮಂದಿ ಹೋರಾಟಗಾರರಿಗೆ ನ್ಯಾಯಾಲಯ ಸಮನ್ಸ್!
ಮಂಗಳೂರು: ಸುರತ್ಕಲ್ ಎನ್ಐಟಿಕೆಯಲ್ಲಿ ಕಾರ್ಯಾಚರಿಸುತ್ತಿದ್ದ ಟೋಲ್ ಗೇಟ್ಗೆ ಮುತ್ತಿಗೆ ಹಾಕಿದ್ದ ಹೋರಾಟ ಸಮಿತಿಯ 101 ಮಂದಿಗೆ ಮಂಗಳೂರು ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದ್ದು, ಮೇ 4ರಂದು ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ ನೀಡಿದೆ. 2022ರ ನವೆಂಬರ್ನಲ್ಲಿ ಟೋಲ್ ಗೇಟ್ ತೆರವು ಹೋರಾಟ ಸಮಿತಿಯು ಟೋಲ್ ಗೇಟ್ ತೆರವಿಗಾಗಿ ನೇರ ಕಾರ್ಯಾ ಚಣೆಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾವಿರಾರು ಹೋರಾಟಗಾರರು ಟೋಲ್ ಕೇಂದ್ರಕ್ಕೆ ಮುತ್ತಿಗೆ ಹಾಕಿದ್ದರು. ಈ ವೇಳೆ ಸುಮಾರು 250 ಕ್ಕೂ ಮಂದಿ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದರು.
ಈ ಸಂಬಂಧ 2023ರ ಅಕ್ಟೋಬರ್ನಲ್ಲಿ ಸುರತ್ಕಲ್ ಪೊಲೀಸರು ಮಂಗಳೂರು ಜೆಂಎಫ್ಸಿ ನ್ಯಾಯಾಲಯಕ್ಕೆ 101 ಮಂದಿ ಹೋರಾಟಗಾರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು 101 ಮಂದಿ ಆರೋಪಿತ ಹೋರಾಟಗಾರರು ಮೇ 4ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದೆ.