– ತಲೆನೋವೆಂದು ಮಲಗಿದ್ದ ದಂತ ವೈದ್ಯೆ ಬೆಳಗ್ಗೆ ಏಳಲೇ ಇಲ್ಲ!
– ಮಂಗಳೂರು: ಯುವ ದಂತ ವೈದ್ಯೆ ಸ್ವಾತಿ ಶೆಟ್ಟಿ ಸಾವು
– ಮಗಳ ದಿಢೀರ್ ಸಾವಿನಿಂದ ಶೋಕತಪ್ತ ಕುಟುಂಬ
– ವಿಧಿಯಾಟದ ಮುಂದೆ ಬದುಕಿನಾಟವೇ ಮುಗಿಯಿತು..!
NAMMUR EXPRESS NEWS
ಮಂಗಳೂರು: ಯುವ ದಂತ ವೈದ್ಯೆ ಮಲಗಿದ್ದಲ್ಲೇ ಮೃತಪಟ್ಟ ದಾರುಣ ಘಟನೆ ಮಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಮಂಗಳವಾರದಿಂದ ವೃತ್ತಿ ಜೀವನ ಆರಂಭಿಸಬೇಕಾಗಿದ್ದ ಸ್ವಾತಿ ವಿಧಿಯಾಟದ ಮುಂದೆ ಬದುಕಿನಾಟವನ್ನೇ ಮುಗಿಸಿದ್ದಾರೆ.
ತಂದೆಯ ಸೇವೆ, ಮಗಳ ಪ್ರೇರಣೆ ಇನ್ನೆಲ್ಲಿ?
ಮೃತರನ್ನು ಉಳ್ಳಾಲದ ನರಿಂಗಾನ ಗ್ರಾಮದ ಆಳ್ವರಬೆಟ್ಟು ನಿವಾಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ, ಶಾಂತಿಪಳಿಕೆ ಶ್ರೀ ಮಹಾಮ್ಮಾಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಆಳ್ವರಬೆಟ್ಟು ಹಾಗೂ ಜ್ಯೋತಿ ಶೆಟ್ಟಿ ದಂಪತಿ ಪುತ್ರಿ ದಂತ ವೈದ್ಯೆ ಸ್ವಾತಿ ಶೆಟ್ಟಿ (24) ಎಂದು ಗುರುತಿಸಲಾಗಿದೆ.
ಕೆಲಸಕ್ಕೆ ಸೇರಿದ ದಿನವೇ ಸಾವು
ಮಂಗಳೂರಿನಲ್ಲಿ ದಂತ ವೈದ್ಯಕೀಯ ಪದವಿ ಪೂರೈಸಿದ್ದ ಸ್ವಾತಿ ಏ.16ರ ಮಂಗಳವಾರದಿಂದ ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ದಂತವೈದ್ಯೆಯಾಗಿ ವೃತ್ತಿ ಜೀವನ ಆರಂಭಿಸಬೇಕಿತ್ತು. ಇದಕ್ಕಾಗಿ ಭಾನುವಾರ ತನಕ ತಮ್ಮ ಮನೆಯಲ್ಲೇ ಇದ್ದ ಸ್ವಾತಿ ವೃತ್ತಿ ಆರಂಭಿಸುವ ಸಲುವಾಗಿ ಪಾಂಡೇಶ್ವರದ ಪಿಜಿಯೊಂದರಲ್ಲಿ ಸೋಮವಾರ ಸಂಜೆಯಿಂದ ಉಳಿದುಕೊಂಡಿದ್ದರು. ಸೋಮವಾರ ರಾತ್ರಿ ತಂದೆ ತಾಯಿಯೊಂದಿಗೆ ಕರೆ ಮಾತನಾಡಿದ್ದು, ಇದೇ ವೇಳೆ ವಿಪರೀತ ತಲೆನೋವು ಕಾಡುತ್ತಿದ್ದು ನಾಳೆ ಕರೆ ಮಾಡುವೆ ಎಂದು ಕರೆ ಕಟ್ ಮಾಡಿದ್ದರು. ಬಳಿಕ ರಾತ್ರಿ ಮಲಗಿದ್ದ ಅವರನ್ನು ತಲೆನೋವು ಇರೋದ್ರಿಂದ ತೊಂದರೆ ಕೊಡೋದು ಬೇಡ ಎಂದು ಅವರ ಸಹಪಾಠಿಯೂ ಎಬ್ಬಿಸಿರಲಿಲ್ಲ. ಆದರೆ ಬೆಳಗ್ಗೆ ದೇಹ ತಣ್ಣಗಾಗಿದ್ದನ್ನು ಕಂಡು ಸೂಪರ್ ವೈಸರ್ ತಕ್ಷಣ ಆಂಬ್ಯುಲೆನ್ಸ್ ತರಿಸಿ ವೆನ್ ಲಾಕ್ ಗೆ ದಾಖಲಿಸುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.
ತಲೆನೋವು ಜೀವ ತೆಗೆಯಿತೇ..?
ಅವಿವಾಹಿತೆಯಾಗಿರುವ ಸ್ವಾತಿ ಶೆಟ್ಟಿ ಅವರಿಗೆ ಅಪರೂಪಕ್ಕೊಮೆ ತಲೆನೋವು ಕಾಣಿಸಿಕೊಳ್ಳುತ್ತಿದ್ದದು ಬಿಟ್ಟರೆ ಬೇರೆ ಯಾವುದೇ ಆರೋಗ್ಯ ತೊಂದರೆ ಇರಲಿಲ್ಲ ಎಂಬುವುದು ಅವರನ್ನು ಹತ್ತಿರದಿಂದ ಬಲ್ಲವರ ಮಾತು. ಉತ್ತಮ ಹೆಸರು ಸಂಪಾದಿಸಿದ್ದ ಸ್ವಾತಿ ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.