ಮಲಗಿದ್ದಲ್ಲೇ ಜೀವ ಬಿಟ್ಟ ನಾಲ್ವರು..!
– ಭಾರೀ ಮಳೆಗೆ ಮನೆ ಬಿರುಕು: ನಾಲ್ವರ ಕುಟುಂಬಕ್ಕೆ ಸಂತಾಪ
-ಎರಡು ವರ್ಷಗಳ ಹಿಂದೆಯೂ ಮನೆ ಮೇಲೆ ಕಾಂಪೌಂಡ್ ಕುಸಿದಿತ್ತು!
– ದುರಂತ ಸ್ಥಳಕ್ಕೆ ಸ್ಪೀಕರ್ ಯುಟಿ ಖಾದರ್ ಭೇಟಿ: ಪರಿಹಾರದ ಭರವಸೆ
NAMMUR EXPRESS NEWS
ಮಂಗಳೂರು: ಭಾರೀ ಮಳೆಗೆ ಮಂಗಳೂರು ಹೊರವಲಯದಲ್ಲಿ ಬೆಳ್ಳಂಬೆಳಗ್ಗೆಯೇ ದುರಂತವೊಂದು ಸಂಭವಿಸಿದ್ದು, ಮಕ್ಕಳು ಸಹಿತ ಒಂದೇ ಕುಟುಂಬದ ನಾಲ್ವರು ಮಲಗಿದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ-ಗೋಡೆಗಳು ಬಿರುಕು ಬಿಟ್ಟಿವೆ.
ಅದೇರೀತಿ ಉಳ್ಳಾಲ ಸಮೀಪದ ಮುನ್ನೂರು ಗ್ರಾಮದ ಮದನಿ ನಗರದಲ್ಲಿ ಪಕ್ಕದ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಬುಧವಾರ ಮುಂಜಾನೆ ಈ ಘಟನೆ ನಡೆದಿದ್ದು, ಮೃತರನ್ನು ಯಾಸಿರ್(45),ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಹಾನ (11)ಮತ್ತು ರಿಫಾನ (17) ಎಂದು ಗುರುತಿಸಲಾಗಿದೆ. ಅಬೂಬಕ್ಕರ್ ಎಂಬವರಿಗೆ ಸಂಬಂಧಿಸಿದ ಮನೆಯ ಗೋಡೆ, ಕುಸಿದು ಈ ದುರಂತ ಸಂಭವಿಸಿದೆ. ಮಣ್ಣಿನಡಿ ಸಿಲುಕಿಕೊಂಡಿದ್ದ ಎಲ್ಲ ಮೃತದೇಹಗಳನ್ನು ಸತತ ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಹೊರತೆಗೆಯಲಾಗಿದೆ.
ಮನೆ ಮಾಲೀಕ ಯಾಸೀರ್ ಅವರು ಮಂಗಳೂರಿನ ಬಂದರಿನಲ್ಲಿ ಮಡ್ಡಿ ಆಯಿಲ್ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಊಟ ಮುಗಿಸಿ ಮನೆಯ ಕೋಣೆಯಲ್ಲಿ ಮಲಗಿದ್ದ ಇಬ್ಬರು ಪುತ್ರಿಯರು ಹಾಗೂ ದಂಪತಿ ಬೆಳಗ್ಗಿನ ಜಾವ ಬೆಳಗ್ಗಿನ ಜಾವ ಕೊನೆಯುಸಿರೆಳೆದಿದ್ದಾರೆ. ರಾತ್ರಿಯಿಡೀ ಮಳೆಯಾದ ಪರಿಣಾಮ ಕಂಪೌಂಡ್ ವಾಲ್ ಹಾಗೂ ಎರಡು ಅಡಿಕೆ ಮರಗಳು ಯಾಸಿರ್ ಅವರ ಮನೆ ಮೇಲೆ ಉರುಳಿಬಿದ್ದಿದೆ. ರಿಹಾನಾ ಹಾಗೂ ರಿಫಾನ ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದರು. ಆರು ವರ್ಷಗಳ ಹಿಂದೆ ಮನೆ ಖರೀದಿಸಿದ್ದ ಇವರು ಒಂದು ವರ್ಷ ಮನೆಯನ್ನು ಬೇರೆಯವರಿಗೆ ಲೀಸ್ಗೆ ನೀಡಿ ಆರು ತಿಂಗಳ ಹಿಂದಷ್ಟೇ ಮನೆಗೆ ವಾಪಸ್ಸಾಗಿದ್ದರು. ಎರಡು ವರ್ಷಗಳ ಹಿಂದೆಯೂ ಮನೆ ಮೇಲೆ ಇದೇ ರೀತಿ ಕಾಂಪೌಂಡ್ ಕುಸಿದಿದ್ದು, ಯಾವುದೇ ಪ್ರಾಣಾಪಾಯವಾಗಿರಲಿಲ್ಲ.
ಯಾಸಿರ್ ಅವರಿಗೆ ಒಟ್ಟು ಮೂವರು ಪುತ್ರಿಯರಿದ್ದು, ಹಿರಿಯ ಮಗಳು ರಶೀನಾಳನ್ನು ಕೇರಳಕ್ಕೆ ಮದುವೆ ಮಾಡಿಕೊಡಲಾಗಿದೆ. ಆದರೆ, ರಶೀನಾ ಕೂಡ ಬಕ್ರೀದ್ಗೆ ತಾಯಿ ಮನೆಗೆ ಬಂದಿದ್ದು, ನಿನ್ನೆಯಷ್ಟೇ ಗಂಡನ ಮನೆಗೆ ವಾಪಾಸ್ ಹೋಗಿದ್ದರು. ಹೀಗಾಗಿ, ಇಡೀ ಕುಟುಂಬದಲ್ಲಿ ಒಬ್ಬರು ಮಾತ್ರ ಈಗ ಪ್ರಾಣಾಪಾಯದಿಂದ ಬದುಕುಳಿದಿದ್ದಾರೆ.
ದುರಂತ ಸ್ಥಳಕ್ಕೆ ಸ್ಪೀಕರ್ ಯುಟಿ ಖಾದರ್ ಭೇಟಿ
ಮಂಗಳೂರಿನ ಹೊರ ವಲಯದ ಮುನ್ನೂರು ಗ್ರಾಮದ ಮದನಿ ನಗರದಲ್ಲಿ ಕಾಂಪೌಂಡ್ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಇಂದು ಬೆಳಗ್ಗೆ ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ವಿಧಾನಸಭೆ ಸಭಾಧ್ಯಕ್ಷ ಯುಟಿ ಖಾದರ್ ಅವರು ಭೇಟಿ ನೀಡಿದ್ದಾರೆ.ಈ ದುರಂತದ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದ ಅವರು, ಯಾವ ರೀತಿ ದುರಂತ ಸಂಭವಿಸಿದೆ ಎಂಬುದರ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಬಳಿಕ ಮಾಧ್ಯಮದ ಜತೆ ಮಾತನಾಡಿದ ಅವರು, ಇಂಥಹ ದುರಂತಗಳು ಸಂಭವಿಸಿದಾಗ ಸರ್ಕಾರದಿಂದ ನೊಂದವರಿಗೆ ಪರಿಹಾರ ನೀಡಬೇಕಾದರೆ ಕೆಲವೊಂದು ಮಾನದಂಡ ಹಾಗೂ ನಿಯಮಗಳಿವೆ. ಆದರೆ, ಈ ಘಟನೆಯು ಬಹಳ ದಾರುಣವಾಗಿ ಸಂಭವಿಸಿದ್ದು, ಮೃತ ಕುಟುಂಬಸ್ಥರಿಗೆ ಸರ್ಕಾರದಿಂದ ಯಾವ ರೀತಿಯಲ್ಲಿ ಹೆಚ್ಚುವರಿ ಪರಿಹಾರ ಕೊಡಿಸಬಹುದು ಎಂಬುದರ ಬಗ್ಗೆ ಚರ್ಚಿಸಲಾಗುವುದು. ಸದ್ಯಕ್ಕೆ ಪರಿಹಾರದ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ತೀರ್ಮಾನಕ್ಕೆ ಬರಲಾಗುವುದು ಎಂದು ಅವರು ಹೇಳಿದ್ದಾರೆ.
ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಪಕ್ಕದವರ ಮನೆಯ ಕಾಂಪೌಂಡ್ ಗೋಡೆ ಕುಸಿದು ಮನೆಯ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮಲಗಿದಲ್ಲೇ ಪ್ರಾಣ ಕಳೆದುಕೊಂಡಿದ್ದರು.