ಮಂಗಳೂರು ವಿಮಾನದಲ್ಲಿ ಚಿನ್ನ ಕಳ್ಳ ಸಾಗಣೆ!
– ದುಬೈನಿಂದ 40 ಲಕ್ಷ ರೂ. ಮೌಲ್ಯದ ಚಿನ್ನ ಅಕ್ರಮವಾಗಿ ತಂದು ಮಂಗಳೂರಿನಲ್ಲಿ ಸಿಕ್ಕಿ ಬಿದ್ದ ಪ್ರಯಾಣಿಕ
– ಈವರೆಗೆ ಬರೋಬ್ಬರಿ 4.45 ಕೋಟಿ ರೂ. ಮೌಲ್ಯದ ಬಂಗಾರ ವಶ
NAMMUR EXPRESS NEWS
ಮಂಗಳೂರು: ದುಬೈನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕನೊಬ್ಬನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 40 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಮೇ 5ರಂದು ಆಗಮಿಸಿದ್ದ ಪ್ರಯಾಣಿಕನಿಂದ 24 ಕ್ಯಾರೆಟ್ನ 578 ಗ್ರಾಂ. ಸುಮಾರು 40,40,220 ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ನಿವಾಸಿಯೆಂದು ಗುರುತಿಸಲಾಗಿದೆ. ಈತ ಅಪಾರ ಪ್ರಮಾಣದ ಚಿನ್ನವನ್ನು ಕಳ್ಳಸಾಗಾಟ ಮಾಡುವುದಕ್ಕೆ ಯತ್ನಿಸುತ್ತಿದ್ದ. ಅನುಮಾನದ ಮೇರೆಗೆ ಆತನನ್ನು ತಪಾಸಣೆಗೆ ಒಳಪಡಿಸಿದಾಗ ದೇಹದೊಳಗೆ ಮೂರು ಅಂಡಾಕಾರದ ವಸ್ತು ಪತ್ತೆಯಾಗಿದೆ. ಆತ ಅದರೊಳಗೆ ಚಿನ್ನವನ್ನು ಅಕ್ರಮವಾಗಿ ಬಚ್ಚಿಟ್ಟು ಸಾಗಿಸುವುದಕ್ಕೆ ಯತ್ನಿಸಿರುವುದ ಬೆಳಕಿಗೆ ಬಂದಿದೆ. ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಜನವರಿಯಿಂದ ಏಪ್ರಿಲ್ ವರೆಗೆ ಬರೋಬ್ಬರಿ 4.45 ಕೋಟಿ ಮೌಲ್ಯದ ಬಂಗಾರ ವಶ!
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಕಸ್ಟಮ್ಸ್ ಅಧಿಕಾರಿಗಳು ಕಳೆದ ಜನವರಿಯಿಂದ ಎಪ್ರಿಲ್ ವರೆಗೆ ಇಂತಹ 13 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು ಸುಮಾರು ೪ .೭೮ ಕೆ.ಜಿ ತೂಕದ 4,45,95,340 ರೂ. ಮೌಲ್ಯದ ಚಿನ್ನವನ್ನು ಸರಕಾರಕ್ಕೆ ಸುಪರ್ಧಿಗೆ ಒಪ್ಪಿಸಿದ್ದಾರೆ. ಗಲ್ಫ್ ರಾಷ್ಟ್ರಗಳಿಂದ ಮಂಗಳೂರಿಗೆ ಹೆಚ್ಚಾಗಿ ಚಿನ್ನ ಕಳ್ಳಸಾಗಣೆ ನಡೆಯುತ್ತದೆ. ಇಂತಹ ಪ್ರಕರಣಗಳಲ್ಲಿ ಸಿಕ್ಕಿಬೀಳುವ ಆರೋಪಿಗಳ ಪೈಕಿ ಕೇರಳದವರೇ ಅಧಿಕವಾಗಿದ್ದಾರೆ. ಸ್ಮಗ್ಲರ್ಗಳು ಕಮಿಷನ್ ಆಸೆಗೆ ಕಳ್ಳಸಾಗಾಣೆಗೆ ಯತ್ನಿಸಿ ಸಿಕ್ಕಿಬೀಳುತ್ತಾರೆ.
ಗುದದ್ವಾರದಲ್ಲಿ ಇರಿಸಿ ಸಾಗಾಟಕ್ಕೆ ಯತ್ನ!
ಏರ್ ಕಸ್ಟಮ್ಸ್ ಅಧಿಕಾರಿಗಳು ಜ.8ರಂದು ಪತ್ತೆ ಹಚ್ಚಿದ ಪ್ರಕರಣ ಬಹುದೊಡ್ಡ ಪ್ರಕರಣವಾಗಿದ್ದು, ಅಬುಧಾಬಿಯಿಂದ ಬಂದ ಪ್ರಯಾಣಿಕನೊಬ್ಬ ಪೇಸ್ಟ್ ರೂಪದ ಚಿನ್ನವನ್ನು 5 ಅಂಡಾಕಾರದ ವಸ್ತುವಿನಲ್ಲಿ ಇರಿಸಿ, ಗುದದ್ವಾರದಲ್ಲಿ ಇರಿಸಿ ಸಾಗಾಟಕ್ಕೆ ಯತ್ನಿಸಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ. ಈ ಸಂದರ್ಭ ಆತನಿಂದ 24 ಕ್ಯಾರೆಟ್ನ 1,579 ಗ್ರಾಂ ತೂಕದ 98,68,750 ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು.