ಮಂಗಳೂರಿನ ಅಡ್ಯಾರ್ನಲ್ಲಿ ಮನೆ ಆವರಣ ಗೋಡೆ ಕುಸಿತ!
– ತಪ್ಪಿದ ಅಪಾಯ: ಒಂದು ವಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಅನಾಹುತ
– ಮನೆಯಲ್ಲಿ ಯಾರು ಇಲ್ಲದ ಕಾರಣ ಅನಾಹುತ ನಡೆಯಲಿಲ್ಲ
NAMMUR EXPRESS NEWS
ಮಂಗಳೂರು: ಮಳೆ ಅನಾಹುತಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾಸ್ತಿಯಾಗುತ್ತಿದ್ದು, ಹಲವು ಕಡೆಗಳಲ್ಲಿ ಮನೆಗಳ ಗೋಡೆ ಅಥವಾ ಧರೆ ಕುಸಿದು ನಿವಾಸಿಗಳಲ್ಲಿ ಆತಂಕ ಸೃಷ್ಟಿಸುತ್ತಿದೆ.
ಇದೀಗ ಮಂಗಳೂರು ನಗರದ ಕಣ್ಣೂರು ಗ್ರಾಮದ ಕುಂಡಾಲದಲ್ಲಿ ಮುದಾಸಿರ್ ಅವರ ಮನೆಯ ಆವರಣ ಗೋಡೆ ಬುಧವಾರ ಮಧ್ಯಾಹ್ನ ಕುಸಿದಿದ್ದು, ಪಕ್ಕದಲ್ಲಿದ್ದ ಮನೆಗೂ ಹಾನಿಯುಂಟಾಗಿದೆ. ಇನ್ನು ಮನೆಯಲ್ಲಿ ಯಾರು ಇಲ್ಲದ ಕಾರಣ ದೊಡ್ಡ ಮಟ್ಟದ ಅಪಾಯ ತಪ್ಪಿದೆ.
ಬೆಳಗ್ಗಿನಿಂದಲೇ ಜೋರು ಮಳೆಯಾಗುತ್ತಿದ್ದ ಕಾರಣ ಮಧ್ಯಾಹ್ನದ ವೇಳೆಗೆ ಮನೆಯ ಆವರಣ ಗೋಡೆ ಕುಸಿದಿದೆ. ಈ ಘಟನೆ ನಡೆಯುವುದಕ್ಕೂ ಐದು ನಿಮಿಷ ಮೊದಲು ಅಲ್ಲಿ ಮಳೆ ನೀರು ಹರಿದು ಹೋಗುವುದಕ್ಕೆ ವ್ಯವಸ್ಥೆ ಮಾಡುತ್ತಿದ್ದೆ. ಅದಾದ ನಂತರ ಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ದೊಡ್ಡ ಶಬ್ದ ಕೇಳಿಸಿದ್ದು, ಹೋಗಿ ನೋಡಿದರೆ ಮನೆಯ ಆವರಣ ಗೋಡೆ ಕುಸಿದಿದೆ. ಆ ವೇಳೆ ನಾವಿಬ್ಬರು ಕೂಡ ಮನೆಯ ಒಳಗೆ ಇದ್ದೆವು ಎಂದು ಮನೆಯ ಮಾಲೀಕ ಮುದಾಸಿರ್ ಹೇಳಿದ್ದಾರೆ.
ಅಪಾಯದಲ್ಲಿರುವ ಮನೆಗಳ ನಿವಾಸಿಗಳ ಸ್ಥಳಾಂತರಕ್ಕೆ ಡಿಸಿ ಸೂಚನೆ
ಮಂಗಳೂರು ನಗರದ ಕಾವೂರು ಸೂಜಿಕಲ್ ಗುಡ್ಡೆ ಎಂಬಲ್ಲಿ ಭೂಕುಸಿತದಿಂದ ಕೆಲವು ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ತಕ್ಷಣವೇ ಅಲ್ಲಿನ ನಿವಾಸಿಗಳ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚಿಸಿದ್ದಾರೆ. ಗುರುವಾರ ಮಂಗಳೂರು ತಾಲೂಕಿನ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕಾವೂರು ಸೂಜಿಕಲ್ ಗುಡ್ಡೆಯಲ್ಲಿ ಖಾಸಗಿ ಮನೆ ಕಟ್ಟಡ ನಿರ್ಮಿಸಲು ಅಗೆಯಲಾದ ಮಣ್ಣಿನಿಂದ ಎತ್ತರದ ಪ್ರದೇಶದಲ್ಲಿರುವ ಮನೆಗಳು ಕೆಳಗೆ ಬೀಳುವ ಸ್ಥಿತಿಯಲ್ಲಿವೆ. ಈ ನಿಟ್ಟಿನಲ್ಲಿ ಇಲ್ಲಿನ ನಿವಾಸಿಗಳನ್ನು ಬೇರೆಡೆ ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಲು ಅವರು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ರಿಗೆ ನಿರ್ದೇಶಿಸಿದರು. ಅಲ್ಲದೇ, ಘಟನೆಗೆ ಕಾರಣರಾದ ಖಾಸಗಿ ಮನೆಯ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಲು ಸೂಚಿಸಿದರು. ಬಳಿಕ ಕೆಂಜಾರು ಶ್ರೀ ದೇವಿ ಕಾಲೇಜು ಆವರಣದಲ್ಲಿ ಉಂಟಾದ ಭೂಕುಸಿತ, ಮರವೂರು ಅಂತೋನಿಕಟ್ಟೆ ಎಂಬಲ್ಲಿ ಕಾಂಕ್ರೀಟ್ ತಡೆಗೋಡೆ ಕುಸಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸುರತ್ಕಲ್ ಬಾಳ ಸಮೀಪ ಐ.ಎಸ್.ಪಿ.ಆರ್.ಎಲ್. ಗೆ ಸೇರಿದ ಪೈಪ್ ಲೈನ್ ಹಾದುಹೋದ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ತುರ್ತು ಕ್ರಮ ಕೈಗೊಳ್ಳಲು ಐ.ಎಸ್.ಪಿ.ಆರ್.ಎಲ್. ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಪಕ್ಕದಲ್ಲಿ ಹಾದು ಹೋಗಿರುವ ಸಾರ್ವಜನಿಕ ರಸ್ತೆಯ ಸಮೀಪ ತಡೆ ಬೇಲಿ ಹಾಕಲು ತಿಳಿಸಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ಉಪವಿಭಾಗಾಧಿಕಾರಿ ಹರ್ಷವರ್ಧನ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಮತ್ತಿತರರು ಇದ್ದರು.
ಉಡುಪಿಯಲ್ಲಿ ಬಾವಿಯೊಂದು ಕುಸಿತ
– ಭಾರಿ ಮಳೆಗೆ ಪಾತಾಳ ಸೇರಿದ ಬಾವಿ
– ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ
NAMMUR EXPRESS NEWS
ಉಡುಪಿ: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ನೋಡ ನೋಡುತ್ತಿದ್ದಂತೆ ಮನೆ ಮುಂದಿದ್ದ ಬಾವಿಯೊಂದು ಪಾತಾಳ ಸೇರಿದೆ. ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭೂಕುಸಿತಕ್ಕೆ ಮನೆಯ ಬಾವಿ ಧಾರಾಶಾಹಿಯಾಗಿದೆ. ಬಾವಿಯೊಂದು ಕುಸಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಉಡುಪಿಯ ಕಾರ್ಕಳ ತಾಲೂಕಿನ ನೆಲ್ಲಿಕಟ್ಟೆಯ ಸರ್ವಿಸ್ ಸ್ಟೇಶನ್ ಸಮೀಪ ಘಟನೆ ನಡೆದಿದೆ. ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಭೂಮಿ ಒಳಗೆ ಬಾವಿ ಜಾರಿದೆ. ಬಾವಿ ಪಕ್ಕದಲ್ಲೆ ಮನೆ ಇದ್ದು, ಭೂಕುಸಿತದಿಂದಾಗಿ ಆತಂಕ ಹೆಚ್ಚಾಗಿದೆ.
– ಮಂಗಳೂರಿನಲ್ಲಿ ಹೆಚ್ಚಾದ ಕಡಲ ಅಬ್ಬರ
ಮಂಗಳೂರಿನಲ್ಲಿ ಕಡಲ ಅಬ್ಬರ ಹೆಚ್ಚಾಗುತ್ತಿದ್ದು, ನೋಡ ನೋಡುತ್ತಿದ್ದಂತೆ ಮನೆಯೊಂದು ಸಮುದ್ರಕ್ಕುರುಳಿದೆ. ಉಳ್ಳಾಲದ ಬಟ್ಟಪಾಡಿ ಕಡಲ ತೀರದಲ್ಲಿದ್ದ ಮನೆಯು ಅಲೆಗಳ ಹೊಡೆತಕ್ಕೆ ಸಿಲುಕಿ ಬಿದ್ದು ಹೋಗಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಕಡಲ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮನೆಯವರನ್ನು ಸ್ಥಳಾಂತರ ಮಾಡಿತ್ತು.