ಮಂಗಳೂರಿನಲ್ಲಿ ಹೆಚ್ಚಿದ ಪಬ್ ಗಳ ಹಾವಳಿ..!
– ಡ್ರಗ್ಸ್ ನಶೆಯಲ್ಲಿ ತೇಲುವ ಯುವ ಜನತೆ
– ಎತ್ತ ಸಾಗುತ್ತಿದೆ ಬುದ್ಧಿವಂತರ ಜಿಲ್ಲೆ.!?
– ನಗರದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿರುವ ಪಬ್ ಗಳು!
NAMMUR EXPRESS NEWS
ಮಂಗಳೂರು: ಸ್ಮಾರ್ಟ್ ಸಿಟಿ ಮಂಗಳೂರು ಒಂದು ಸುಂದರ ನಗರವಾಗಿದೆ. ಹಾಗೆ ಬುದ್ಧಿವಂತರ ಜಿಲ್ಲೆ ಎಂಬ ಬಿರುದು ಕೂಡ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಎಂಬ ಪಿಶಾಚಿ ಯುವ ಜನತೆಯ ಹಾದಿ ತಪ್ಪಿಸುತ್ತಿದೆ ಎಂದರೆ ತಪ್ಪಾಗಲಾರದು. ಪೊಲೀಸ್ ಇಲಾಖೆಯು “ಆಂಟಿ ಡ್ರಗ್ ಸ್ಕ್ವಾಡ್” ಎಂಬ ಘಟಕ ರಚಿಸಿ ಬಿಗು ಕಾರ್ಯಾಚರಣೆ ನಡೆಸಿ ಹಲವೆಡೆ ಡ್ರಗ್ಸ್ ಪೆಡ್ಲರ್ ಗಳ ಹೆಡೆಮುರಿ ಕಟ್ಟಿದೆ. ಆದರೆ ಈಗಿನ ದಿನಗಳಲ್ಲಿ ಯಾವುದೇ ಲೈಸೆನ್ಸ್ ಇಲ್ಲದೆ ಕಾರ್ಯಾಚರಣೆ ನಡೆಸುತ್ತಿರುವ ಪಬ್ ಗಳು ಡ್ರಗ್ಸ್ ಎಂಬ ಮಹಾಮಾರಿಯ ಅಕ್ರಮ ಅಡ್ಡೆಯಾಗಿದೆ. ನಮ್ಮ ಮಂಗಳೂರಿನಲ್ಲಿ ಇರುವ ತುಳುನಾಡಿನ ಸಂಪ್ರದಾಯಕ್ಕೆ ಧಕ್ಕೆ ತರುವಂತೆ ಈ ಪಬ್ ಗಳು ಇಂದಿನ ದಿನಗಳಲ್ಲಿ ಕಾರ್ಯಾಚರಿಸುತ್ತಿವೆ.
ಈ ಪಬ್ ಗಳು ಮಂಗಳೂರಿನಲ್ಲಿ ಈಗಿನ ದಿನಗಳಲ್ಲಿ ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 3 ರಿಂದ 4 ಗಂಟೆಯವರೆಗೂ ಜೋರಾಗಿ ಡಿ.ಜೆ. ಸೌಂಡ್ಸ್ ಇಟ್ಟುಕೊಂಡು ತೆರೆದಿರುತ್ತವೆ. ಅರೆಬರೆ ಬಟ್ಟೆ ತೊಟ್ಟ ಹುಡುಗಿಯರು ಮತ್ತಿನಲ್ಲಿ ಡ್ಯಾನ್ಸ್ ಮಾಡುವುದು, ನಶೆಯಲ್ಲಿಯೇ ರಸ್ತೆಗಳಲ್ಲಿ ತೇಲಾಡಿಕೊಂಡು ಹೋಗುವುದು, ರಾತ್ರಿ ಸಂಚರಿಸುವವರಿಗೆ ಮುಜುಗರ ಉಂಟುಮಾಡಿದೆ. ಇದೆಲ್ಲ ಸದ್ಯ ಮಂಗಳೂರು ನಗರದಲ್ಲಿ ರಾತ್ರಿ ಹೊತ್ತು ಸರ್ವೇ ಸಾಮಾನ್ಯವಾಗಿದೆ.
ಮಂಗಳೂರಿನ ಕೆಲವು ಪಬ್ ಗಳಿಗೆ ಯುವಜನತೆ ಹೆಚ್ಚಾಗಿ ಬರುತ್ತಿದ್ದು, ಪ್ರತಿಷ್ಠಿತ ಕಾಲೇಜುಗಳ ಸಂಖ್ಯೆ ಹೆಚ್ಚಿರುವುದರಿಂದ, ಇಲ್ಲಿ ಹೊರ ರಾಜ್ಯದಿಂದ ಕಲಿಯಲು ಬಂದಿರುವ ವಿಧ್ಯಾರ್ಥಿಗಳ ದಂಡು ಕಾಣ ಸಿಗುವುದೇ ಹೆಚ್ಚು! ಶನಿವಾರ ಆದಿತ್ಯವಾರ ಬಂದರಂತೂ ಇಲ್ಲಿ ಜನಸಾಗರವೇ ಸೇರುತ್ತದೆ. ಬೆಳಿಗ್ಗೆ 4 ಗಂಟೆವರೆಗೂ ಕೆಲವು ಪಬ್ ತೆರೆದಿರುತ್ತದೆ. ಶಾಲಾ ಕಾಲೇಜು ಹತ್ತಿರದ 100 ಮೀಟರ್ ಅಂತರದಲ್ಲಿ ಯಾವುದೇ ಬಾರ್, ಪಬ್ ಗಳು ಕಾರ್ಯಚರಿಸುವಂತಿಲ್ಲ.
ಆದರೆ, ಇವೆಲ್ಲಾ ಕಾನೂನು ಕೆಲವು ಪಬ್ ಗೆ ಅನ್ವಯವಾಗುವುದಿಲ್ಲವೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಯಾಕೆಂದರೆ ಕೆನರಾ ಕಾಲೇಜು, ಎಸ್.ಡಿ.ಎಂ. ಕಾಲೇಜು, ಶ್ರೀ ದೇವಿ ಕಾಲೇಜು, ಇನ್ನೂ ಹಲವಾರು ಕಾಲೇಜುಗಳ ಹತ್ತಿರವೇ ಪಬ್ ಇದೆ. ಅರೆಬರೆ ಬಟ್ಟೆ ಹಾಕಿಕೊಂಡು ರಾತ್ರಿ ಇಡೀ ಡ್ರಗ್ಸ್, ಮದ್ಯಪಾನದಲ್ಲಿ ಯುವಜನತೆ ತೊಡಗಿಕೊಂಡು ಡಿ.ಜೆ. ಹಾಡಿಗೆ ನಶೆಯಲ್ಲಿ ನರ್ತಿಸುವುದು ಕಾಣಬಹುದು. ತಕ್ಷಣ ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುವಂತೆ ಜನತೆ ಆಗ್ರಹಿಸಿದ್ದಾರೆ.