ಮನೆಯಿಂದಲೇ ಮತದಾನ ಮಾಡಿದ ಜನಾರ್ದನ ಪೂಜಾರಿ!
– ದ.ಕ.ದಲ್ಲಿ 8,010 ಮನೆ ಮತದಾನಕ್ಕೆ ನೋಂದಣಿ
– 6,053 ಹಿರಿಯ ನಾಗರಿಕರು, 1,957 ಅಂಗವೈಕಲ್ಯ ಮತದಾರರು ಅಂಚೆ ಮತ
NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 6,053 ಹಿರಿಯ ನಾಗರಿಕರು ಹಾಗೂ 1,957 ಅಂಗವೈಕಲ್ಯ ಮತದಾರರು ಅಂಚೆ ಮತ ಪತ್ರದ ಮೂಲಕ ಮನೆ ಮತದಾನ ಪ್ರಕ್ರಿಯೆ ಸೋಮವಾರದಿಂದ ಆರಂಭಗೊಂಡಿದ್ದು ಈ ಮತದಾನ ಪ್ರಕ್ರಿಯೆ ಮೂರು ದಿನಗಳ ಕಾಲ ಮುಂದುವರಿಯಲಿದೆ. ಹೀಗಾಗಿ ಈಗಾಗಲೇ ಮನೆಮನೆ ಮತದಾನಕ್ಕೆ ನೋಂದಣಿ ಮಾಡಿಕೊಂಡಿರುವವರು, ತಮಗೆ ತಿಳಿಸಿರುವ ನಿಗದಿತ ದಿನಾಂಕದಂದು ಮನೆಯಲ್ಲಿ ಹಾಜರಿದ್ದು ತಮ್ಮ ಹಕ್ಕು ಚಲಾಯಿಸಬೇಕು. ಮನೆ ಮತದಾನದ ಫಲಾನುಭವಿಗಳಾದ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರು ಮಂಗಳವಾರ ತಮ್ಮ ಮನೆಯಿಂದಲೇ ಮತದಾನ ನೆರವೇರಿಸಿದರು. ಮತದಾರರ ಪಟ್ಟಿಯಂತೆ ಇವರಿಗೆ 87 ವರ್ಷ ವಯಸ್ಸಾಗಿದ್ದು, ಈ ಹಿಂದೆ ಭಂಡಾರಿಬೆಟ್ಟು ಶಾಲೆಯ ಭಾಗಸಂಖೈ 130 ಮತಗಟ್ಟೆಗೆ ತೆರಳಿ ಮತದಾನ ಮಾಡುತ್ತಿದ್ದರು. ಬಿ ಮೂಡಾ ಗ್ರಾಮದ ಬಸ್ತಿಪಡ್ಪುವಿನಲ್ಲಿರುವ ನಿವಾಸಕ್ಕೆ ತೆರಳಿದ ಸೆಕ್ಟರ್ ಅಧಿಕಾರಿಗಳ ನೇತೃತ್ವದಲ್ಲಿ ಮತಗಟ್ಟೆ ಅಧಿಕಾರಿಗಳ ತಂಡ ಮತದಾನ ಪ್ರಕ್ರಿಯೆ ನಡೆಸಿಕೊಟ್ಟರು.
ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ ಮತದಾರರು ಹಾಗೂ ಪಿಡಬ್ಲ್ಯುಡಿ ಮತದಾರರು ಸೇರಿ ಒಟ್ಟು 8,010 ಜನ ಅಂಚೆ ಮತಪತ್ರದ ಮೂಲಕ ಮತದಾನದ ಸೌಲಭ್ಯ ಕ್ಕೆ ನೋಂದಾಯಿಸಿಕೊಂಡಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 975 ಮತದಾರರು, ಬೆಳ್ತಂಗಡಿ ವಿಧಾನಸಭಾ ಕ್ಷೇತದಲ್ಲಿ 812 ಮತದಾರರು, ಮಂಗಳೂರು ವಿಧಾನಸಭಾ ಕ್ಷೇತದಲ್ಲಿ 515, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತದಲ್ಲಿ 1,401 ,ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 976 ,ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 1,127, ಸುಳ್ಯ ವಿಧಾನಸಭಾ ಕ್ಷೇತದಲ್ಲಿ 1,038 ಮತದಾರರು ಮನೆಯಲ್ಲಿಯೇ ಮತ ಚಲಾಯಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಿದ್ದಾರೆ. ಮನೆ ಮತದಾನ ಚುನಾವಣೆ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಲು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.