ಮಂಗಳೂರು: ಕಾರುಗಳು ಪುಡಿ ಪುಡಿ!
– ಕರಾವಳಿ ಮಳೆ ಅಬ್ಬರಕ್ಕೆ ಹಲವೆಡೆ ಅವಘಡ
– ಎಲ್ಲೆಲ್ಲಿ ಏನಾಗಿದೆ… ಇಲ್ಲಿದೆ ವರದಿ
NAMMUR EXPRESS NEWS
ಮಂಗಳೂರು: ಬಾರಿ ಬಿರುಗಾಳಿ ಮಳೆಗೆ ಶೀಟ್ ಉರುಳಿಬಿದ್ದು ಕಾರುಗಳು ಜಖಂಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ನಲಪಾಡ್ ಕುಣಿಲ್ ಟವರ್ ನಲ್ಲಿ ನಡೆದಿದೆ.
ಭಾರಿ ಬಿರುಗಾಳಿ ಮಳೆ ಮಂಗಳೂರು ನಗರ ಮತ್ತು ಹೊರವಲಯದಲ್ಲಿ ಅವಾಂತರ ಸೃಷ್ಟಿಸಿದೆ. ಅಲ್ಲದೆ ಭಾರಿ ಗಾತ್ರದ ಶೀಟ್ ಕಾರುಗಳ ಮೇಲೆ ಉರುಳಿ ಬಿದ್ದ ಪರಿಣಾಮ ಕಾರುಗಳು ಜಖಂಗೊಂಡಿದೆ. ಕಾರುಗಳನ್ನು ವಸತಿ ಸಮುಚ್ಚಯದ ಪಾರ್ಕಿಂಗ್ ಬಳಿ ನಿಲ್ಲಿಸಲಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಂತಹ ಘಟನೆ ನಡೆದಿಲ್ಲ.
ಬಂಟ್ವಾಳದಲ್ಲಿ ಮಳೆ ಹಾನಿ ಪ್ರಕರಣ ಹೆಚ್ಚಳ
ಬಂಟ್ವಾಳ: ಬಂಟ್ವಾಳದಲ್ಲಿ ಮಳೆ ಹಾನಿ ಪ್ರಕರಣಗಳು ಮುಂದುವರಿದಿದೆ. ಮಾಣಿ ಗ್ರಾಮದ ಸೂರಿಕುಮೇರು ನಿವಾಸಿ ಚೆನ್ನಮ್ಮ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಪುದು ಗ್ರಾಮದ ಮಾರಿಪಳ್ಳ ನಿವಾಸಿ ಮೊಯಿದಿನ್ ಬಿನ್ ಎಫ್ ಎಚ್ ಇಸ್ಮಾಯಿಲ್ ಅವರ ಮನೆ ಹಂಚು ಹಾಗೂ ಗೋಡೆಗೆ ಹಾನಿಯಾಗಿದೆ. ಮಾರಿಪಳ್ಳ ನಿವಾಸಿ ಚಂದ್ರಕಲಾ ಕೋಂ ಶೇಖರ ಪೂಂಜಾ ಅವರ ಮನೆ ಹಂಚು ಹಾನಿಯಾಗಿದೆ. ಮಾರಿಪಳ್ಳ ನಿವಾಸಿ ಹಾಜಿರಾ ಕೋಂ ಇಬ್ರಾಹಿಂ ಅವರ ಮನೆ ಹಂಚು ಹಾಗೂ ಗೋಡೆಗೆ ಹಾನಿಯಾಗಿದೆ. ಪುದು ನಿವಾಸಿ ಹಸನಬ್ಬ ಬಿನ್ ಅಬೂಬಕ್ಕರ್ ಅವರ ಮನೆ ಹಂಚು ಪೂರ್ತಿ ಹಾನಿಯಾಗಿದೆ. ಜುಮಾದಿಗುಡ್ಡೆ ನಿವಾಸಿ ಸೈನಾಝ್ ಕೋಂ ಸಲೀಮ ಅವರ ಮನೆಗೆ ಮರ ಬಿದ್ದು ಹಂಚು ಹಾನಿಯಾಗಿದೆ.
ತುಂಬೆ ಗ್ರಾಮದ ನಿವಾಸಿ ಸಾರಮ್ಮ ಅವರ ಮನೆಗೆ ಪಕ್ಕದ ಮನೆಯ ಶೀಟ್ ಬಿದ್ದು ಹಂಚು ಪುಡಿಯಾಗಿದೆ. ಮನೆಯಲ್ಲಿದ್ದ ರಿಯಾಜ್ ಎಂಬವರಿಗೆ ಗಾಯ ಆಗಿದ್ದು, ಆಸ್ಪತ್ರೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ನರಿಕೊಂಬು ಗ್ರಾಮದ ಮಿತ್ತಿಲಕೋಡಿ ನಿವಾಸಿ ನಾರಾಯಣ ಬಿನ್ ಈಶ್ವರ ಸಪಲ್ಯ ಅವರ ವಾಸ್ತವ್ಯದ ಮನೆ ಮೇಲೆ ಮಾವಿನ ಮರ ಮುರಿದು ಬಿದ್ದು ಹಾನಿ ಸಂಭವಿಸಿದೆ.
ಮೂಡುಬಿದಿರೆ: ರಾಜ್ಯ ಹೆದ್ದಾರಿಯ ಮೇಲೆ ಬಿದ್ದ ಮರ
ಮೂಡುಬಿದಿರೆ : ಬ೦ಟ್ವಾಳ – ಮೂಡುಬಿದಿರೆ ರಾಜ್ಯ ಹೆದ್ದಾರಿಯ ಮೇಲೆ ನಿನ್ನೆ ತಡರಾತ್ರಿ 11:30ರ ವೇಳೆಗೆ ಪ್ರಾಂತ್ಯ ಗ್ರಾಮದ ಮಿಜಾರ್ ಪ್ಯೂಯಲ್ಸ್ ಪೆಟ್ರೋಲ್ ಪಂಪಿನ ಬಳಿ ಹೆದ್ದಾರಿಗೆ ಅಡ್ಡವಾಗಿ ಮರವೊಂದು ವಿಪರೀತ ಗಾಳಿ-ಮಳೆಗೆ ಧರೆಗೆ ಉರಿಳಿತ್ತು. ರಾತ್ರಿ ವೇಳೆ ವಾಹನ ಸಂಚಾರ ಕಡಿಮೆ ಇದದ್ದರಿಂದ ಯಾವುದೇ ವಾಹನಗಳಿಗೆ ಹಾನಿಯಾಗಲಿಲ್ಲ.