ಮಂಗಳೂರಿನ ವಿಮಾನ ದುರಂತಕ್ಕೆ 14 ವರ್ಷ!
– 158 ಮಂದಿ ಸಜೀವ ದಹನವಾಗಿ ಮೃತಪಟ್ಟಿದ್ದ ಏರ್ ಇಂಡಿಯಾ ವಿಮಾನ ದುರಂತ
– ದೇಶದ ಅತೀ ದೊಡ್ಡ ದುರಂತದಲ್ಲಿ ಒಂದು!
NAMMUR EXPRESS NEWS
ದೇಶದ ಅತ್ಯಂತ ದೊಡ್ಡ ವಿಮಾನ ದುರಂತಗಳಲ್ಲಿ ಒಂದಾಗಿರುವ ಮಂಗಳೂರಿನ ಬಜ್ಪೆ ಏರ್ಪೋರ್ಟ್ನಲ್ಲಿ ಏರ್ ಇಂಡಿಯಾ ವಿಮಾನವು ದುರಂತಕ್ಕೀಡಾಗಿ ಇಂದಿಗೆ 14 ವರ್ಷಗಳಾಗುತ್ತಿದೆ. 2010ರಲ್ಲಿ ಇದೇ ದಿನ ಮುಂಜಾನೆ 6.20ರ ಸುಮಾರಿಗೆ ದುಬೈನಿಂದ ಮಂಗಳೂರು ಏರ್ಪೋರ್ಟ್ಗೆ ಬಂದು ಲ್ಯಾಂಡಿಂಗ್ ಆಗಿದ್ದ ವಿಮಾನವು ಪೈಲಟ್ನ ನಿರ್ಲಕ್ಷ್ಯದಿಂದಾಗಿ ರನ್ವೇನಿಂದ ಕೆಳಗಿನ ಕಂದಕಕ್ಕೆ ಜಾರಿ ಹೋಗಿತ್ತು. ವಿಮಾನದಲ್ಲಿ ಸಿಬ್ಬಂದಿ ಒಳಗೊಂಡಂತೆ 166 ಮಂದಿ ಪ್ರಯಾಣಿಕರು ಇದ್ದರು. ದುರಂತವೆಂದರೆ 158 ಮಂದಿ ಪ್ರಯಾಣಿಕರು ವಿಮಾನ ಹೊತ್ತಿ ಉರಿದ ಪರಿಣಾಮ ಸಜೀವ ದಹನವಾಗಿದ್ದರು. ಈ ದುರ್ಘಟನೆಯು 2010ರಲ್ಲಿ ನಡೆದಿದ್ದು, ಆ ದಿನ ಇಡೀ ದೇಶವನ್ನೇ ಬೆಚ್ಚಿಬೀಳಿಸುವಂತೆ ಮಾಡಿತ್ತು. ಈ ದುರಂತದ ಬಗ್ಗೆ ಸಮಗ್ರ ತನಿಖೆ ನಡೆದಿದ್ದು, ಕೊನೆಗೂ ಪೈಲಟ್ನ ಗೊಂದಲವೇ ಅಪಘಾತಕ್ಕೆ ಕಾರಣ ಎನ್ನುವುದು ಬೆಳಕಿಗೆ ಬಂದಿತ್ತು.
ಇನ್ನು ಪವಾಡಸದೃಶ್ಯವಾಗಿ ಬದುಕಿರುವ 8 ಮಂದಿ ಪ್ರಯಾಣಿಕರು ಈಗಲೂ ಕೂಡ ಈ ದುರಂತದ ಭಯಾನಕತೆಯನ್ನು ಹೇಳಿ ಕಂಬನಿ ಮಿಡಿಯುತ್ತಿದ್ದಾರೆ. ಅಷ್ಟೇಅಲ್ಲ, ತಮ್ಮ ಬಂಧು-ಬಳಗವನ್ನು ಕಳೆದುಕೊಂಡಿರುವ 158 ಮಂದಿ ಮೃತರ ಕುಟುಂಬಸ್ಥರು ಇಂದಿಗೂ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಮಹಿಳೆಯರು, ಮಕ್ಕಳು, ಯುವಕರು ಸೇರಿದಂತೆ ಹಲವು ಅಮಾಯಕ ಜೀವಗಳು ಬಲಿಯಾಗಿದ್ದವು. ಈ ನಡುವೆ ಪ್ರತಿ ವರ್ಷದಂತೆ ಈ ಬಾರಿಯು ಬೆಳಗ್ಗೆ ಜಿಲ್ಲಾಡಳಿತದ ವತಿಯಿಂದ ಮೃತರ ಸ್ಮರಣಾರ್ಥ ಕೂಳೂರಿನಲ್ಲಿರುವ ಪಾರ್ಕ್ನಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.