ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ!
– ಭದ್ರತಾ ಸಿಬ್ಬಂದಿಯಿಂದ ಬಜ್ಪೆ ಠಾಣೆಗೆ ದೂರು: ಏನಿದು ದೂರು?
– ಇ-ಮೇಲ್ ಸಂದೇಶದಲ್ಲಿ ಬಾಂಬ್ ಬೆದರಿಕೆ
NAMMUR EXPRESS NEWS
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದೀಗ ಮತ್ತೆ ಬಾಂಬ್ ಬೆದರಿಕೆ ಬಂದಿದೆ. ಜೂ.18ರ ಮಂಗಳವಾರ ಮಧ್ಯಾಹ್ನ 12.43ಕ್ಕೆ ವಿಮಾನ ನಿಲ್ದಾಣದ ಎರಡು ಇ-ಮೇಲ್ ಐಡಿಗಳಿಗೆ ಏರ್ಪೋರ್ಟ್ನಲ್ಲಿ ಬಾಂಬ್ ಇಟ್ಟಿದ್ದು ಕೆಲವೇ ಕ್ಷಣದಲ್ಲಿ ಅದು ಸ್ಫೋಟಗೊಳ್ಳಲಿದೆ ಎಂದು ಕಿಡಿಗೇಡಿಗಳು ಸಂದೇಶ ಕಳುಹಿಸಿದ್ದಾರೆ. ಈ ಬಗ್ಗೆ ಏರ್ಪೋರ್ಟ್ನ ಮುಖ್ಯ ಸೆಕ್ಯುರಿಟಿ ಅಧಿಕಾರಿಯಾದ ಮೋನಿಷ್ ಜೂ.19ರಂದು ಸಂಜೆ ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ.
ಅಪರಿಚಿತ ವ್ಯಕ್ತಿ ವಿಮಾನ ನಿಲ್ದಾಣದ ಎರಡು ಇಮೇಲ್ ಐಡಿಗಳಿಗೆ [email protected] ಎಂಬ ಇಮೇಲ್ ವಿಳಾಸದಿಂದ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ವಿಮಾನ ನಿಲ್ದಾಣದ ಒಳಗೆ ಸ್ಫೋಟಕ ಸಾಮಗ್ರಿ ಅಡಗಿಸಿಟ್ಟಿದ್ದು ಕೆಲವೇ ಕ್ಷಣದಲ್ಲಿ ಸ್ಫೋಟ ಆಗಲಿದೆ. ನೀವೆಲ್ಲ ಸಾಯಲಿದ್ದೀರಿ. ಗ್ರೂಪ್ ಕೆಎನ್ಆರ್ ಇದರ ಹಿಂದಿದೆ. ಮೇ 1ರ ಡೆಲ್ಲಿ ಸ್ಕೂಲ್ ಅಟ್ಯಾಕ್ ಕೃತ್ಯದಲ್ಲೂ ಇದೇ ಗ್ರೂಪ್ ಇತ್ತು ಎಂದು ಬರೆಯಲಾಗಿದೆ.
ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ ಏರ್ಪೋರ್ಟ್ ಅಧಿಕಾರಿಗಳು ನಿಲ್ದಾಣದಲ್ಲಿ ಬಿಗಿ ತಪಾಸಣೆಯನ್ನು ನಡೆಸಿದ್ದಾರೆ.
ಇದೇ ಮಾದರಿಯ ಸಂದೇಶವನ್ನು ಒಂದೇ ದಿನ ದೇಶದ ಇತರೆ 41 ವಿಮಾನ ನಿಲ್ದಾಣಗಳಿಗೂ ರವಾನಿಸಲಾಗಿದ್ದು, ಇದೊಂದು ಹುಸಿ ಬಾಂಬ್ ಬೆದರಿಕೆ ಎನ್ನುವುದು ಗೊತ್ತಾಗಿದೆ. ಕಳೆದ ಮೇ ತಿಂಗಳಿನಲ್ಲಿಯೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಇದೇ ರೀತಿಯಲ್ಲಿ ಬಾಂಬ್ ಬೆದರಿಕೆ ಕರೆ ಮಾಡಲಾಗಿತ್ತು. ಆಗ ಕೂಡ ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬಾಂಬ್ ಇಡಲಾಗಿದ್ದು, ಎಲ್ಲರೂ ಸಾಯುತ್ತೀರಿ ಎಂಬುದಾಗಿ ಇ-ಮೇಲ್ ಸಂದೇಶ ಬಂದಿತ್ತು.