ಮೂಡುಬಿದಿರೆ: ‘ಸಮೃದ್ಧಿ’ ಮಹಾಮೇಳ ರಂಗು!
– ಹಲಸಿನ ಹಣ್ಣು, ವಿವಿಧ ಹಣ್ಣಿನ ಚಿತ್ತಾರ ನೋಡಿ ಮನಸೋತ ಜನ
– ಸಾವಿರಾರು ಜನರ ಭೇಟಿ: ಮಾದರಿಯಾದ ಆಳ್ವಾಸ್ ಆಯೋಜನೆ
ವರದಿ: ಗಣೇಶ್ ಮಂಗಳೂರು
NAMMUR EXPRESS NEWS
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾಗಿರಿಯ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ)ವೇದಿಕೆಯಲ್ಲಿ ಆಯೋಜನೆಗೊಂಡ ‘ಸಮೃದ್ಧಿ’ -ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳ ಸಾವಿರಾರು ಜನರ ಮನ ಸೆಳೆಯಿತು.
ಹಲಸಿನ ಖಾದ್ಯಗಳು ಗಮನ ಸೆಳೆದವು. ನೂರಾರು ಕೃಷಿ ಪರಿಕರ ಮಳಿಗೆಗಳು ಭಾಗವಹಿಸಿದ್ದವು. ರಾಜ್ಯ, ಕರಾವಳಿ ಸೇರಿ ಸುತ್ತಮುತ್ತಲಿನ ಸಾವಿರಾರು ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.
ಗಮನ ಸೆಳೆದ ಕಲಾಕೃತಿಗಳು!
ಕಲ್ಲಂಗಡಿಯಲ್ಲಿ ಅರಳಿದ ಕಲಾಕೃತಿಗಳು ಅಧ್ಯಾಪಕ ಸಂತೋಷ ಮಾಳರ ಕೈಯಿಂದ ಕಲ್ಲಂಗಡಿ ಹಣ್ಣಿನಲ್ಲಿ ಮೂಡಿಬಂದ ವಿವಿಧ ವ್ಯಕ್ತಿಗಳ, ಪಕ್ಷಿ, ಹೂವುಗಳ ಕಲಾಕೃತಿ ಎಲ್ಲರ ಗಮನ ಸೆಳೆಯಿತು. ಮದರ್ ತೆರೇಸಾ, ಡಾ ಬಿ.ಆರ್. ಅಂಬೇಡ್ಕರ್, ಗಾಂದೀಜಿ, ಸುಭಾಶ್ಚಂದ್ರ ಬೋಸ್, ಕುವೆಂಪು, ಆನಂದ ಆಳ್ವ, ದ್ರೌಪಧಿ ಮುರ್ಮು, ನರೇಂದ್ರ ಮೋದಿ, ಸುಧಾ ಮೂರ್ತಿ, ಕೆ ಅಮರನಾಥ ಶೆಟ್ಟಿ, ವಿರಾಟ್ ಕೊಯ್ಲಿ, ಡಾ ಮೋಹನ ಆಳ್ವ ಕಲಾಕೃತಿಗಳು ಸುಂದರವಾಗಿ ಮೂಡಿಬಂದವು.
ಸ್ವಚ್ಛತಾ ಸೇನಾನಿಗಳ ಸೇವೆ!
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಳ್ಳುವ ಪ್ರತಿ ಕಾರ್ಯಕ್ರಮದಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ. ಆಳ್ವಾಸ್ ನುಡಿಸಿರಿ, ಜಂಬೂರಿ , ವಿರಾಸತ್ ನಂತಹ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ವೈಭವದ ಜೊತೆ ಜೊತೆಯಲ್ಲಿ ಸ್ವಚ್ಛತೆಯೆಡೆಗಿನ ಕಾಳಜಿ ಎಲ್ಲರ ಮನಗೆಲ್ಲುತ್ತದೆ. ಅದೇ ರೀತಿ ಈ ಭಾರಿಯ ಸಮೃದ್ಧಿ ಹಲಸು – ವೈವಿದ್ಯಮಯ ಹಣ್ಣುಗಳ ಆಹಾರೋತ್ಸವ ಹಾಗೂ ಕೃಷಿಪರೀಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳದಲ್ಲಿ ಸಾವಿರಾರು ಜನರು ಸೇರಿದ್ದರೂ ಸಂಸ್ಥೆಯ ಸ್ವಚ್ಛತಾ ಸೇನಾನಿಗಳು ಅಹರ್ನಿಶಿ ದುಡಿದಿದ್ದಾರೆ. ಸ್ವಚ್ಚತಾ ವಿಭಾಗದ ಮೇಲ್ವಿಚಾರಣೆಯನ್ನು ಪ್ರೇಮನಾಥ್ ಶೆಟ್ಟಿ, ಸುಧಾಕರ್ ಪೂಂಜಾ, ದೇವಿಶ್ ಶೆಟ್ಟಿ, ಹಾಗೂ ಪರಶುರಾಮ್ ನೋಡಿಕೊಂಡಿದ್ದರು.