ಕರಾವಳಿಯಲ್ಲಿ ಸೌಜನ್ಯಳಿಗಾಗಿ ನೋಟಾ ಹೋರಾಟ!
– ಮಂಗಳೂರು: ಸುರತ್ಕಲ್ ರಸ್ತೆಯಲ್ಲಿ ನೋಟಾ ಪ್ರಚಾರ
– ಕರಾವಳಿಯಲ್ಲಿ ತೀವ್ರಗೊಳ್ಳುತ್ತಿರುವ ನೋಟಾ ಅಭಿಯಾನ
NAMMUR EXPRESS NEWS
ಮಂಗಳೂರು: ಸುರತ್ಕಲ್ ನಗರದ ಒಳ ರಸ್ತೆಯಲ್ಲಿ ಮತದಾನದ ವೇಳೆ ನೋಟಾ ಬೆಂಬಲಿಸುವ ಬರಹ ಪತ್ತೆಯಾಗಿದೆ. ಸುರತ್ಕಲ್ ಮಾರಿಗುಡಿಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆಯಲ್ಲಿ ‘ನೋಟಾಗೆ ಮತ ನೀಡಿ’ ಎಂಬ ಸಂದೇಶವನ್ನು ಬರೆಯಲಾಗಿದೆ. ಇದಲ್ಲದೇ ಹೆಚ್ಚುವರಿಯಾಗಿ ವೋಟ್ ಫಾರ್ ಸೌಜನ್ಯ ಎಂದು ಬರೆಯಲಾಗಿದೆ. ಸಾರ್ವಜನಿಕರು ಚುನಾವಣಾಧಿಕಾರಿಗಳ ಗಮನಕ್ಕೆ ತಂದಿದ್ದು , ಬಳಿಕ ಸುಣ್ಣ ಬಳಿದು ಬರಹ ಅಳಿಸಲಾಗಿದೆ.
ಕರಾವಳಿಯಲ್ಲಿ ನೋಟಾ ಅಭಿಯಾನ ಜೋರು!
ನೋಟಾ ಅಭಿಯಾನಕ್ಕೆ ಕರೆಕೊಟ್ಟವರು ಗ್ರಾಮದ ಸಮಸ್ಯೆ ಹೊತ್ತ ಗ್ರಾಮಸ್ಥರು ಅಲ್ಲ, ಬಿಜೆಪಿಯ ಭದ್ರಕೋಟೆ ಎಂದೇ ಕರೆಯುವ ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಹಿಂದುತ್ವದ ಪ್ರತಿಪಾದಕರೇ ಈ ಬಾರಿ ನೋಟಾಕ್ಕೆ ಮತದಾನ ಮಾಡಿ ಎಂದು ಪ್ರಚಾರ ನಡೆಸುತ್ತಾರೆ. ಸುಮಾರು ಹನ್ನೆರಡು ವರ್ಷಗಳ ಹಿಂದೆ ಧರ್ಮಸ್ಥಳದ ಉಜಿರೆಯಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯ ಸಿಗಲಿಲ್ಲ ಎಂದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನೋಟಾ ಚಲಾಯಿಸಬೇಕೆಂದು ಅಭಿಯಾನ ಆರಂಭವಾಗಿದೆ. ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, ಪ್ರಜಾಪ್ರಭುತ್ವ ವೇದಿಕೆ, ಸೌಜನ್ಯಾ ಹೋರಾಟ ಸಮಿತಿ ನೋಟಾ ಅಭಿಯಾನಾಕ್ಕೆ ಕೆಲವು ದಿನಗಳ ಹಿಂದೆ ಕರೆನೀಡಿದೆ. ಹೀಗಾಗಿ ಬಿಜೆಪಿ , ಕಾಂಗ್ರೆಸ್ ಪಕ್ಷದ ಪ್ರಚಾರ ನಡುವೆ ನೋಟಾ ಅಭಿಯಾನವೂ ಕರಾವಳಿ ಜಿಲ್ಲೆಯಲ್ಲಿ ಕಾವು ಪಡೆದಿದೆ.