ಪಂಜಿಮೊಗರು ಜೋಡಿ ಕೊಲೆ: ಮೃತಪಟ್ಟಿದ್ದ ಮಹಿಳೆ ಪತಿ ಹತ್ಯೆಗೆ ಯತ್ನ!
– ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ತಾಯಿ ಮಗುವಿನ ಜೋಡಿ ಕೊಲೆ
– 13 ವರ್ಷ ಕಳೆದರೂ ಪತ್ತೆಯಾಗದ ಹಂತಕರು!
– ಇನ್ನಿಬ್ಬರ ಹತ್ಯೆಗೆ ಯತ್ನ: ಏನಿದು ಕೊಲೆ ಯತ್ನ?!
NAMMUR EXPRESS NEWS
ಮಂಗಳೂರು: ಕರಾವಳಿಯಲ್ಲಿ ಮಾತ್ರವಲ್ಲದೇ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದ್ದ ಪಂಜಿಮೊಗರು ಜೋಡಿ ಕೊಲೆ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಮಗುವಿನ ತಂದೆ, ಮಹಿಳೆ ಪತಿ ಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ನಗರಸಭೆ ಸಮೀಪದ ಬಾಡಿಗೆ ಮನೆಯಲ್ಲಿ ಶನಿವಾರ ಮಧ್ಯಾಹ್ನದ ವೇಳೆ ನಡೆದಿದೆ. ಘಟನೆಯಿಂದ ಗಂಭೀರ ಸ್ಥಿತಿಯಲ್ಲಿರುವ, ಮೂಲತ: ಪಂಜಿಮೊಗರು , ಸದ್ಯ ಉಳ್ಳಾಲ ನಗರಸಭೆ ಕಚೇರಿ ಬಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಹಮೀದ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಬಂದರು ಭಾಗದ ಖ್ಯಾತ ಈಜುಪಟು ಜಾವೇದ್ ಎಂಬಾತ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಹಣದ ವಿಚಾರವಾಗಿ ಕೃತ್ಯ ನಡೆದಿರುವ ಸಾಧ್ಯತೆಗಳಿವೆ . ಉಳ್ಳಾಲ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಏನಿದು ಘಟನೆ?
ಪಂಜಿಮೊಗರಿನಲ್ಲಿ 2011ರ ಜೂ.28ರಂದು ರಜಿಯಾ ಮತ್ತು ಪುಟ್ಟ ಮಗು ಫಾತಿಮಾ ಜುವಾ ಅವರ ಜೋಡಿ ಕೊಲೆ ನಡೆದಿತ್ತು. ಈ ಘಟನೆ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಮಧ್ಯಾಹ್ನದ ಹೊತ್ತಿನಲ್ಲೇ ನಡೆದ ಕೊಲೆ ಆರೋಪಿಗಳ ಸುಳಿವು ಇನ್ನೂ ಸಿಕ್ಕಿಲ್ಲ . ಘಟನೆ ನಡೆದು 13 ವರ್ಷ ಕಳೆದರೂ ಹತ್ಯೆ ಪ್ರಕರಣದಲ್ಲಿ ಯಾರ ಕೈವಾಡವಿದೆ ಎಂಬುವುದು ತಿಳಿದುಬಂದಿಲ್ಲ. ಈ ಕುರಿತು ಸ್ಥಳೀಯ ಪೊಲೀಸರ ಜೊತೆ ಸಿಐಡಿ ತನಿಖೆ ನಡೆದರೂ ಹಂತಕರು ಸಿಕ್ಕಿಲ್ಲ. ಮೃತ ರಜಿಯಾಳ ಪತಿ, ಸದ್ಯ ಕೊಲೆ ಯತ್ನಕ್ಕೆ ಒಳಗಾದ ಹಮೀದ್ ಪಿ.ಎಂ. ವಿರುದ್ದವೂ ಆರೋಪ ಕೇಳಿ ಬಂದಿತ್ತು. ಪತಿ ಹಮೀದ್ ಮನೆಯಿಂದ ಹೊರ ಹೋದ 30 ನಿಮಿಷದ ಬಳಿಕ ಹತ್ಯೆಯಾಗಿತ್ತು. ಆದರೆ, ಸ್ಥಳೀಯ ಪೊಲೀಸರು ಹಾಗೂ ಸಿಐಡಿ ತನಿಖೆ ವೇಳೆ ಹಮೀದ್ ಕೈವಾಡ ಇಲ್ಲ ಎಂದಾಗಿತ್ತು. ಅಲ್ಲದೇ ಪತಿ ಹಮೀದ್ ಮಂಪರು ಪರೀಕ್ಷೆಗೂ ಆಗ್ರಹಿಸಿದ್ದರು. ಇದೀಗ ಉಳ್ಳಾಲದಲ್ಲಿ ಹಮೀದ್ಗೆ ಚೂರಿ ಇರಿದು ಹತ್ಯೆಗೆ ಯತ್ನಿಸಲಾಗಿದೆ.