ಪ್ರವೀಣ್ ನೆಟ್ಟಾರ್ ಕೊಲೆ: ಆರೋಪಿಗೆ ಆಶ್ರಯ ನೀಡಿದವರೂ ಅರೆಸ್ಟ್!
– ಸಕಲೇಶಪುರದಲ್ಲಿ ಬಂಧನ: ಎನ್ಐಎ ಮಹತ್ವದ ಕಾರ್ಯಚರಣೆ
– ರಾಜ್ಯದಲ್ಲಿ ಮತ್ತಷ್ಟು ಜನರ ಬಂಧನ ಸಾಧ್ಯತೆ?
NAMMUR EXPRESS NEWS
ಮಂಗಳೂರು/ಹಾಸನ: ಕರ್ನಾಟಕ ಮಾತ್ರವಲ್ಲದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಸುಳ್ಯದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಕಳೆದ ಎರಡು ವರ್ಷದಿಂದ ತಲೆಮರೆಸಿಕೊಂಡಿದ್ದ 4ನೇ ಆರೋಪಿ ಕೊನೆಗೂ ಎನ್ಐಎ ಬಲೆಗೆ ಬಿದ್ದಿದ್ದಾನೆ. ಸುಳ್ಯದ ಶಾಂತಿನಗರದ ನಿವಾಸಿ ಉಮರ್ ಮಗ ಮುಸ್ತಾಫ್ ಪೈಚಾರ್ ಯಾನೆ ಮಹಮ್ಮದ್ ಮುಸ್ತಫಾ (43) ಎಂಬಾತನನ್ನು ಇ ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಹಾಸನ ಜಿಲ್ಲೆಯ ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಗಳೂರು ಎನ್ಐಎ ಇನ್ಸ್ಪೆಕ್ಟರ್ ಷಣ್ಮುಗಂ ನೇತೃತ್ವದಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರವೀಣ್ ಹತ್ಯೆ ನಂತರ ತಲೆಮರೆಸಿಕೊಂಡಿದ್ದ ಈತನ ಸುಳಿವು ಕೊಟ್ಟವರಿಗೆ 5ಲಕ್ಷರೂ. ಬಹುಮಾನ ನೀಡುವುದಾಗಿ ಎನ್ಐಎ ತನಿಖಾ ಸಂಸ್ಥೆ ಕೂಡ ಘೋಷಣೆ ಮಾಡಿತ್ತು. ಸದ್ಯ ಆರೋಪಿಯನ್ನು ಎನ್ಐಎ ಪೊಲೀಸರು ಸಕಲೇಶಪುರದಲ್ಲಿ ಖಚಿತ ಸುಳಿವು ಆಧರಿಸಿ ಬಂಧನ ಮಾಡಿದ್ದು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಈತನ ವಿಚಾರಣೆಯಿಂದ ಇನ್ನು ಕೂಡ ಈ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಮೂರಕ್ಕೂ ಅಧಿಕ ಆರೋಪಿಗಳ ಪತ್ತೆಗೆ ಸುಳಿವು ಪಡೆಯುವ ಸಾಧ್ಯತೆ ಕೂಡ ಇದೆ.
ಮತ್ತಿಬ್ಬರು ಆರೋಪಿಗಳು ವಶಕ್ಕೆ?
ಇನ್ನು ಮುಸ್ತಫಾ ಪೈಚಾರ್ ಜತೆಗೆ ಇನ್ನು ಕೂಡ ಇಬ್ಬರು ಆರೋಪಿಗಳನ್ನು ಎನ್ಐಎ ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ. ಸೋಮವಾರಪೇಟೆ ಮೂಲದ ಇಲ್ಯಾಸ್ ಹಾಗೂ ಸಿರಾಜ್ ಅವರನ್ನು ಕೂಡ ಬಂಧಿಸಲಾಗಿದೆ ಎನ್ನಲಾಗಿದೆ. ಮುಸ್ತಾಫಾ ಪೈಚಾರ್ ಹಾಗೂ ಇಲ್ಯಾಸ್ ಸಕಲೇಶಪುರದ ಆನೆಮಹಲ್ನ ಸಿರಾಜ್ ಬಳಿ ಕೆಲಸಕ್ಕೆ ಸೇರಿದ್ದರು. ಹೀಗಾಗಿ, ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಡಿ ಸಿರಾಜ್ನನ್ನು ಕೂಡ ಎನ್ಐಎ ತಂಡ ವಶಕ್ಕೆ ಪಡೆದು ಕರೆದೊಯ್ದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಏನಿದು ಕೇಸ್?
ಬಿಜೆಪಿ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು 2022ರ ಜುಲೈ 6ರಂದು ದುಷ್ಕರ್ಮಿಗಳು ಬೆಳ್ಳಾರೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಇನ್ನು ಕೂಡ ಪ್ರಮುಖ 4ಕ್ಕೂ ಹೆಚ್ಚು ಆರೋಪಿಗಳು ತಲೆಮರೆಸಿಕೊಂಡಿದ್ದು, ತನಿಖಾಧಿಕಾರಿಗಳು ಲುಕ್ಔಟ್ ನೊಟೀಸ್ ಕೂಡ ಜಾರಿಗೊಳಿಸಿದ್ದಾರೆ.