ಬ್ರಿಜೇಶ್ ಚೌಟರಿಂದ “ಯೋಗ ವಿದ್ ಯೋಧ” ಕಾರ್ಯಕ್ರಮ
– ಸಸಿಹಿತ್ಲು ಬೀಚ್ನಲ್ಲಿ ಯೋಗ ಮಾಡಿದ ಗಣ್ಯರು
– ಕ್ರೀಡಾಪಟುಗಳು, ನಿವೃತ್ತ ಸೇನಾಧಿಕಾರಿಗಳು, ಚಲನಚಿತ್ರ ನಟರು, ಸಮಾಜ ಸೇವಕರ ಸಾಥ್
NAMMUR EXPRESS NEWS
ಮಂಗಳೂರು: ಯೋಗ ಮತ್ತು ಯೋಗ್ಯತೆ ಎರಡೂ ಕೂಡಿ ಬಂದಾಗ ಮಾತ್ರ ವಿಕಾಸ ಸಾಧ್ಯ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.
ಸಸಿಹಿತ್ಲು ಬೀಚಿನಲ್ಲಿ ನಡೆದ “ಯೋಗ ವಿದ್ ಯೋಧ” ವಿಶ್ವ ಯೋಗ ದಿನಾಚರಣೆಯ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗ ಮತ್ತು ಯೋಗ್ಯತೆ ಫಲಿಸಬೇಕೆಂದರೆ ನಮ್ಮ ಪ್ರಯತ್ನ ಅವಶ್ಯಕ. ದಕ್ಷಿಣ ಕನ್ನಡ ಎಂಬ ಸಾಧ್ಯತೆಗಳ ಸಾಗರದಲ್ಲಿ ಅಭಿವೃದ್ಧಿಯ ಒಂದು ನವಯುಗ ಪ್ರಾರಂಭಿಸಲು ನಾವೆಲ್ಲ ಸೇರಿ ಈ ನವಪಥದಲ್ಲಿ ನವ ಪ್ರಯತ್ನಗಳನ್ನು ಮಾಡಬೇಕು. ಇಡಿ ವಿಶ್ವವೇ ನಮ್ಮ ದಕ್ಷಿಣ ಕನ್ನಡದತ್ತ ನೋಡುವಂತೆ ಮಾಡಬೇಕು ಎಂಬ ಆಶಯದಿಂದ ಈಗಾಗಲೇ ಸಾಹಸ ಕ್ರೀಡೆಗಳ ಮೂಲಕ ಅಂತರ ರಾಷ್ಟ್ರೀಯ ಪ್ರವಾಸೋದ್ಯಮದ ನಕ್ಷೆಯಲ್ಲಿ ತನ್ನ ಸ್ಥಾನವನ್ನು ಕಲ್ಪಿಸಿದ ಸಸಿಹಿತ್ಲು ಕಡಲ ತೀರದಲ್ಲಿ ಇಂದು “ಯೋಗ ವಿದ್ ಯೋಧ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವಸಂಸ್ಥೆಗೆ ಶಿಫಾರಸು ಮಾಡಿ ಕಳೆದ ಹತ್ತು ವರ್ಷಗಳಿಂದ ಲೋಕದೆಲ್ಲೆಡೆ ಯೋಗ ಒಂದು ಜಾಗತಿಕ ಹಬ್ಬವಾಗಿ ಆಚರಿಸಲ್ಪಡುತ್ತಿದೆ. ಈ ಹಬ್ಬದಲ್ಲಿ ಇಂದು ನಾವೆಲ್ಲ ಸೇರಿರುವುದು ಅತ್ಯಂತ ಉತ್ಸಾಹದ ವಿಷಯ ಎಂದು ಸಂಸದರು ವಿಶ್ಲೇಷಿಸಿದರು.
– ಸಸಿಹಿತ್ಲು ಬೀಚ್ನಲ್ಲಿ ಯೋಗ ಮಾಡಿದ ಗಣ್ಯರು
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕ್ರೀಡಾಪಟುಗಳು, ನಿವೃತ್ತ ಸೇನಾಧಿಕಾರಿಗಳು, ಚಲನಚಿತ್ರ ನಟರು, ಸಮಾಜ ಸೇವಕರು ಮತ್ತು ಇತರ ಗಣ್ಯರು ಸೇರಿ, ಸಮುದ್ರ ತಟದ ಪ್ರಶಾಂತ ವಾತಾವರಣದಲ್ಲಿ ಯೋಗಾಭ್ಯಾಸ ಮಾಡಿದರು.