ಯಕ್ಷಗಾನಕ್ಕೆ ಅವಮಾನ!?.. ನಿಜವೋ..ಸುಳ್ಳೋ?
– ವೇಷ ಕಳಚಲು ಹೇಳಿದ ಹಿರಿಯ ಕಲಾವಿದ
– ಮಂಗಳೂರು ಸಮೀಪದಲ್ಲಿ ಘಟನೆ
– ಸಾಮಾಜಿಕ ಜಾಲ ತಾಣದಲ್ಲಿ ವೈರಲ್
NAMMUR EXPRESS NEWS
ಮಂಗಳೂರು: ನವರಾತ್ರಿ ಅಂಗವಾಗಿ ಯಕ್ಷಗಾನ ವೇಷ ಹಾಕಿ ಬಂದ ವ್ಯಕ್ತಿಯ ವೇಷ ಕಳಚಲು ಹಿರಿಯ ಯಕ್ಷಗಾನ ಕಲಾವಿದರೊಬ್ಬರು ಹೇಳಿದ ಘಟನೆ ಮಂಗಳೂರು ಸಮೀಪದ ಬಿ.ಸಿ.ರೋಡ್ ನಲ್ಲಿ ನಡೆದಿದೆ. ರಾಜ್ಯದೆಲ್ಲೆಡೆ ನವರಾತ್ರಿ ಸಂಭ್ರಮ ಈ ಹಿನ್ನೆಲೆಯಲ್ಲಿ ವಿವಿಧ ವೇಷಧಾರಿಗಳು ಮನೆಮನೆಗೆ, ಅಂಗಡಿ ಅಂಗಡಿಗಳಿಗೆ ತೆರಳಿ ಹಣ ಸಂಗ್ರಹಿಸುತ್ತಾರೆ. ಕೆಲವರು ಇದನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಿದರೆ ಇನ್ನು ಕೆಲವರು ತಮ್ಮ ಸ್ವಂತ ಖರ್ಚಿಗಾಗಿ ಉಪಯೋಗಿಸುತ್ತಾರೆ. ಕೆಲವೊಮ್ಮೆ ಈ ವೇಷಗಳು ವಿವಾದ ಸೃಷ್ಟಿಸುವುದೂ ಇದೆ. ದಾವಣಗೆರೆ ಮೂಲದ ವ್ಯಕ್ತಿಯೊಬ್ಬ ಯಕ್ಷಗಾನದ ವೇಷ ಹಾಕಿ ಬಂದ ಕಾರಣಕ್ಕೆ ಹಿರಿಯ ಯಕ್ಷಗಾನ ಕಲಾವಿದರಾದ ಅಶೋಕ್ ಶೆಟ್ಟಿ ಸರಪಾಡಿ ಅವರು ವೇಷಧಾರಿ ವ್ಯಕ್ತಿಯನ್ನು ತಡೆದು ವೇಷವನ್ನು ಕಳಚಲು ಹೇಳಿದ ಘಟನೆ ಬಿ.ಸಿ, ರೋಡಿನಲ್ಲಿ ನಡೆದಿದೆ.
ವೇಷಧಾರಿ ಬಿ.ಸಿ. ರೋಡಿನ ಬ್ರಹ್ಮಶ್ರೀ ನಾರಾಯಣ ಮಂದಿರದ ಬಳಿ ಯಕ್ಷಗಾನದ ವೇಷ ಹಾಕಿ ಹೋಗುತ್ತಿದ್ದ. ಈ ವೇಳೆ ಆಗಮಿಸಿದ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಅವರು ಯಕ್ಷಗಾನದ ವೇಷ ಹಾಕುವಂತಿಲ್ಲ. ಅದನ್ನು ತೆಗೆಯುವಂತೆ ಒತ್ತಾಯ ಮಾಡಿದ್ದಾರೆ. ಯಕ್ಷಗಾನವನ್ನು ನಾವು ಇಲ್ಲಿ ಪೂಜೆ ಮಾಡುತ್ತೇವೆ. ನಿಮಗೆ ಗೊತ್ತಿದೆಯೇ? ನೀವು ವೇಷ ಹಾಕಿ ಭಿಕ್ಷಾಟನೆ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ನಾನು ತಪ್ಪು ಮಾಡಿದ್ದರೆ ನನಗೆ ಹೊಡೆಯಿರಿ ಎಂದು ವೇಷಧಾರಿ ಹೇಳಿದಾಗ, ಹೊಡೆಯುವುದು ಅಲ್ಲ, ವೇಷ ತೆಗೆಯದಿದ್ದರೆ ಕೈ ಕಾಲು ಮುರಿದು ಹಾಕುವುದಾಗಿ ಬೆದರಿಕೆಯೊಡ್ಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.