ಕೊಂಕಣಿ ಅಕಾಡೆಮಿ ನೂತನ ಅಧ್ಯಕ್ಷರಾಗಿ ಸ್ಟ್ಯಾನಿ ಅಲ್ವಾರಿಸ್!
– ಮಂಗಳೂರಿನಲ್ಲಿ ಅಧಿಕಾರ ಸ್ವೀಕಾರ: ಕೊಂಕಣಿ ಅಭಿವೃದ್ಧಿಗೆ ಬದ್ಧ
– ಶಾಸಕ ಐವನ್ ಡಿಸೋಜ ಸೇರಿ ಅನೇಕ ಗಣ್ಯರ ಶುಭಾಶಯ
NAMMUR EXPRESS NEWS
ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಅವರು ಮಂಗಳೂರಿನ ಲಾಲ್ಬಾಗ್ನಲ್ಲಿ ಪಾಲಿಕೆ ಕಟ್ಟಡದಲ್ಲಿರುವ ಕೊಂಕಣಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಭಾಷೆಯ ಮೂಲಕ ವ್ಯವಹಾರ ಹಾಗೂ ಸಮಾಜದ ಅಭಿವೃದ್ಧಿಗೆ ಪೂರಕವಾಗುವಂತೆ ಅಕಾಡೆಮಿಯನ್ನು ಬಳಸಿಕೊಳ್ಳುವುದು ಮುಖ್ಯ. ಅಕಾಡೆಮಿಗಳು ರಾಜಕೀಯ ಸಂಸ್ಥೆ ಅಲ್ಲ; ಭಾಷಾಭಿವೃದ್ಧಿಯ ಜತೆಗೆ ನಾನಾ ಭಾಷಿಗರ ನಡುವೆ ಸೌಹಾರ್ದ ಸಾಧಿಸುವ ಕೆಲಸ ಆಗಬೇಕು ಎಂದರು.
ಅಧಿಕಾರ ವಹಿಸಿಕೊಂಡ ಸ್ಟ್ಯಾನಿ ಅಲ್ವಾರಿಸ್ ಮಾತನಾಡಿ, ಕೊಂಕಣಿ ಭಾಷಾ ಸಾಹಿತ್ಯ ಸಂಶೋಧನೆಗೆ ಸಂಬಂಧಿಸಿದ ಕೆಲಸಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದರೊಂದಿಗೆ, ಅಕಾಡೆಮಿ ಸದಸ್ಯರೊಂದಿಗೆ ಚರ್ಚಿಸಿ, ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಅಕಾಡೆಮಿ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಈ ವೇಳೆ ಶುಭ ಕೋರಿದ್ದಾರೆ.
ಅಕಾಡೆಮಿಯ ಸದಸ್ಯರಾದ ಡಾ. ಪ್ರಶಾಂತ್ ಮಾಡ್ತಾ, ರೊನಾಲ್ಡ್ ಕ್ರಾಸ್ತಾ, ನವೀನ್ ಲೋಬೋ, ಸಮರ್ಥ ಭಟ್, ಸುನೀಲ್ ಸಿದ್ದಿ ಯಲ್ಲಾಪುರ, ಜೇಮ್ಸ್ ಲೋಪೇಸ್, ದಯಾನಂದ ಮಡ್ಕೇಕರ್ ಕಾರ್ಕಳ, ಪ್ರವೀಣ್ ಪಿಂಟೋ ಚಿಕ್ಕಮಗಳೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯುಎಚ್ ಮುಂತಾದವರು ಭಾಗವಹಿಸಿದ್ದರು.