3 ಕ್ಷೇತ್ರಗಳಲ್ಲಿ ಬಿಲ್ಲವ ಅಭ್ಯರ್ಥಿಗಳಿಗೆ ಸುರತ್ಕಲ್ ಸಪೋರ್ಟ್!
– ಉಡುಪಿ- ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡದಲ್ಲಿ ಎಸ್ ಎನ್ ಜಿ ವಿ ಬೆಂಬಲ
– ಸತ್ಯಜಿತ್ ಸುರತ್ಕಲ್ ಮನದ ಮಾತು
NAMMUR EXPRESS NEWS
ಮಂಗಳೂರು : ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ಎಸ್ಎನ್ಜಿವಿ)ಯ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದಂತೆ ಸಮಾಜಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ದ.ಕ., ಉಡುಪಿ- ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಲ್ಲವ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ ಎಂದು ಎಸ್ಎನ್ಜಿವಿ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.
ಟೀಂ ಸತ್ಯಜಿತ್ ಸುರತ್ಕಲ್ನಲ್ಲಿ ವಿವಿಧ ಸಮಾಜದ ಬಾಂಧವರು ಇರುವುದರಿಂದ ಅದು ಹಾಗೇ ಮುಂದುವರಿಯಲಿದ್ದು, ಚುನಾವಣೆಯ ನನ್ನ ಕಾರ್ಯಕ್ಕೂ ಆ ತಂಡಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ನನ್ನ ಯಾವುದೇ ಕಾರ್ಯಕ್ಕೂ ಬೆಂಬಲ ನೀಡವುದಾಗಿ ಹೇಳಿದ್ದು, ಮುಂದಿನ ದಿನಗಳಲ್ಲಿ ಆ ತಂಡ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದೆ ಎಂದು ಹೇಳಿದರು. ಕಳೆದ ಶುಕ್ರವಾರ ಎಸ್ಎನ್ಜಿವಿಯ ಸಭೆ ನಡೆದು ಅಂತಿಮ ನಿರ್ಧಾರಕ್ಕೆ ಬರಲಾಗಿದೆ. ರಾಜ್ಯದಲ್ಲಿ ನಾರಾಯಣಗುರು ಸಮಾಜ ಎಂದು ಹೇಳುವ ಬಿಲ್ಲವ, ಈಡಿಗ, ನಾಮಧಾರಿ ಎಂಬ 26 ಪಂಗಡಗಳ ಸಮಾಜ ಅನೇಕ ವರ್ಷಗಳ ನಂತರ ಸಮಾಜಕ್ಕೆ ಮೂರು ಕ್ಷೇತ್ರಗಳಲ್ಲಿ ಅವಕಾಶ ದೊರಕಿದೆ. ದ.ಕ.ಉಡುಪಿ, ಚಿಕ್ಕಮಗಳೂರು, ಕಾರವಾರ, ಶಿವಮೊಗ್ಗದಲ್ಲಿ ಸಮಾಜದ 12 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ನಮ್ಮ ಸಮಾಜ ಬಹುಸಂಖ್ಯಾತ ಸಮಾಜವಾಗಿದೆ. ಆದರೆ ಬಿಜೆಪಿಯಿಂದ 33 ವರ್ಷಗಳಿಂದ ಈ ನಾಲ್ಕೂ ಕ್ಷೇತ್ರಗಳಲ್ಲಿಯೂ ಸಮಾಜದ ಅಭ್ಯರ್ಥಿಗೆ ಅವಕಾಶ ನೀಡಲಾಗಿಲ್ಲ.
ಕಾಂಗ್ರೆಸ್ನಲ್ಲಿ ನಾಲ್ಕನೆ ಬಾರಿ ಜನಾರ್ದನ ಪೂಜಾರಿ ಸೋತ ಬಳಿಕ ಕಳೆದ ಬಾರಿ ದ.ಕ.ದಲ್ಲಿ ಬಂಟ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಲಾಗಿತ್ತು. ಎಸ್ಎನ್ಜಿವಿ ಸಂಘಟನೆ ಆರಂಭವಾದ ಶಿವಮೊಗ್ಗದ ಸಿಗಂದೂರಿನಲ್ಲಿ ಆರಂಭಗೊಂಡ ಹೋರಾಟ ಬ್ರಹ್ಮಶ್ರೀ ನಾರಾಯಣಗುರುಗಳ ಟ್ಯಾಬ್ಲೊ ವಿಚಾರ, ಪಠ್ಯಪುಸ್ತಕ, ಅಭಿವೃದ್ಧಿ ನಿಗಮ, ಕಾಂತರಾಜು ವರದಿ ಹೋರಾಟ, ವಿಮಾನ ನಿಲ್ದಾಣಕ್ಕೆ ಕೋಟಿಚನ್ನಯ ಹೆಸರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂಗಾರಪ್ಪರ ಹೆಸರಿಡುವ ಹೋರಾಟ ಸೇರಿದಂತೆ ಹಲವು ಹೋರಾಟಗಳು ನಡೆದಿವೆ. ಇದರ ಪರಿಣಾಮವಾಗಿ ಸಮಾಜಕ್ಕೆ ಬಿಜೆಪಿಯಿಂದ ಉಡುಪಿ- ಚಿಕ್ಕಮಗಳೂರು, ಕಾಂಗ್ರೆಸ್ನಿಂದ ಶಿವಮೊಗ್ಗ ಹಾಗೂ ದ.ಕ.ದಲ್ಲಿ ಅವಕಾಶ ನೀಡಲಾಗಿದೆ.
ಸಮಾಜದ ಸಂಘಟನೆಯಾಗಿ, ಸಮಾಜವನ್ನು ಗೆಲ್ಲಿಸಲು, ಪಕ್ಷವನ್ನು ಪಕ್ಕಕ್ಕಿಟ್ಟು ಸಮಾಜದ ಅಭ್ಯರ್ಥಿಗಳಾದ ಪದ್ಮರಾಜ್ ಆರ್., ಕೋಟ ಶ್ರೀನಿವಾಸ ಪೂಜಾರಿ ಹಾಗೂ ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸುವ ಪ್ರಯತ್ನ ನಾರಾಯಣ ಗುರು ವಿಚಾರವೇದಿಕೆಯಿಂದ ಆಗಲಿದೆ. ಇವರು ಮೂವರು ಗೆದ್ದರೆ ಸಮಾಜಕ್ಕೆ ದೊಡ್ಡ ಶಕ್ತಿ ಸಿಗಲಿದೆ. ಉಳಿದ ಸಮಾಜಗಳಂತೆ ನಮ್ಮ ಸಮಾಜವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮೇಲೆತ್ತಲು ಸಾಧ್ಯ ಆಗಲಿದೆ. ಆ ನಿಟ್ಟಿನಲ್ಲಿ ಮೂರು ಕ್ಷೇತ್ರಗಳಲ್ಲಿಯೂ ತಾನೂ ಪ್ರಚಾರ ಕಾರ್ಯ ನಡೆಸುವುದಾಗಿ ಘೋಷಿಸಿದರು.
ಸಮಾಜಕ್ಕಾಗಿ ದುಡಿಯುವೆ, ತಲೆ ಕೆಡಿಸಿಕೊಳ್ಳಲ್ಲ!
ಹಿಂದುತ್ವಕ್ಕಾಗಿ ಕಳೆದ 37 ವರ್ಷಗಳ ಶ್ರಮಕ್ಕೆ ಬೆಲೆ ಸಿಗದಿದ್ದಾಗ, ಅನ್ಯಾಯ ಆದಾಗ, ಹಿಂದುತ್ವದ ಪಕ್ಷದಲ್ಲಿಯೇ ನನ್ನನ್ನು ತಿರಸ್ಕರಿಸಿ, ನನಗೆ ಯಾವುದೇ ಸ್ಥಾನಮಾನ ನೀಡದೆ ಕಡೆಗಣಿಸಿದರೂ ನನ್ನ ಜತೆಗಿದ್ದು, ನನ್ನ ಕಷ್ಟದಲ್ಲಿ ಜತೆಯಾದವರ ಮಾತಿಗೆ ಮಾತ್ರ ಬೆಲೆ ನೀಡಲಿದ್ದೇನೆ. ನನ್ನನ್ನು ಕಾಂಗ್ರೆಸ್ವಾದಿ ಅನ್ನಲಿ, ಜಾತಿವಾದಿ ಎಂದು ಆಪಾದಿಸಲಿ. ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಟೀಕೆ, ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳದೆ ಸಮಾಜದ ಅಭ್ಯರ್ಥಿಗಳ ಜಯಕ್ಕಾಗಿ ದುಡಿಯಲು ಕಟಿಬದ್ಧನಾಗಿದ್ದೇನೆ ಎಂದು ಹೇಳಿದರು.
ಕಳೆದ ಎರಡು ತಿಂಗಳಿನಿಂದ ಟೀಂ ಸತ್ಯಜಿತ್ ಸುರತ್ಕಲ್ ಹೆಸರಿನಲ್ಲಿ ಚುನಾವಣೆಗೆ ಅಭಿಯಾನ ನಡೆದಿದೆ. ಟೀಂ ಸತ್ಯಜಿತ್ ಸುರತ್ಕಲ್ ರಾಜಕೀಯ ಉದ್ದೇಶದೊಂದಿಗೆ ಮಾಡಲಾಗಿದ್ದು, ಸಮಾವೇಶ, ಸಭೆಗಳು ನಡೆದಿವೆ. ಬಿಜೆಪಿಯಿಂದ ಬೃಜೇಶ್ ಚೌಟ ಅವರಿಗೆ ಟಿಕೆಟ್ ಘೋಷಣೆ ಆದ ಬಳಿಕವೂ ತಂಡದವರು ಮತ್ತೆ ತಮಗೆ ಕಾಲಾವಕಾಶ ನೀಡಿ, ಪಕ್ಷದಲ್ಲಿ ನನಗೆ ಸೂಕ್ತ ಸ್ಥಾನಮಾನ ನಾವು ಕೇಳುವುದಾಗಿ ಹೇಳಿ ನನ್ನನ್ನು ತಡೆ ಹಿಡಿದಿದ್ದರು. ಆದರೆ ಟಿಕೆಟ್ ಘೋಷಣೆಯಾಗಿ 20 ದಿನಗಳಾಗುತ್ತಾ ಬಂದರೂ ಯಾವುದೇ ಜವಾಬ್ದಾರಿಯ ಘೋಷಣೆ ಮಾಡಿಲ್ಲ. ಹಾಗಾಗಿ ಪ್ರಸಕ್ತ ಚುನಾವಣೆಯಲ್ಲಿ ನಾನು ಯಾವುದೇ ನಿರ್ಧಾರ ಕೈಗೊಳ್ಳಲು ನಾನು ಸ್ವತಂತ್ರ್ಯ ಹಾಗೂ ನನ್ನ ನಿರ್ಧಾರಕ್ಕೆ ಯಾವುದೇ ವಿರೋಧ ಇಲ್ಲ ಎಂಬುದನ್ನು ತಂಡ ಸ್ಪಷ್ಟಪಡಿಸಿದೆ ಎಂದರು. ಎಸ್ಎನ್ಜಿವಿಯ ಶಿವಮೊಗ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವು, ಉಪಾಧ್ಯಕ್ಷ ಕೆ.ಪಿ. ಲಿಂಗೇಶ್, ಉಡುಪಿ ತಾಲೂಕು ಅಧ್ಯಕ್ಷ ಶಶಿಧರ ಎಂ. ಅಮೀನ್, ಉಡುಪಿ ಜಿಲ್ಲಾಧ್ಯಕ್ಷ ಜಗನ್ನಾಥ್ ಕೋಟೆ, ಮಂಗಳೂರು ಘಟಕದ ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.
ದೊಡ್ಡ ಜಾತಿ ಆಗಿದ್ದರೆ ಅವಕಾಶ ಸಿಗುತ್ತಿತ್ತೇನೋ?
ಸತ್ಯಜಿತ್ ಸುರತ್ಕಲ್ ದೊಡ್ಡ ಶಕ್ತಿ ಆಗಿದ್ದರೆ ಬಿಜೆಪಿಯವರು ಯಾಕೆ ತಿರಸ್ಕರಿಸಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಸತ್ಯಜಿತ್ ಬ್ರಾಹ್ಮಣ, ಲಿಂಗಾಯಿತ, ಒಕ್ಕಲಿಗ ಅಥವಾ ಬಂಟ ಆಗುತ್ತಿದ್ದರೆ ಅವಕಾಶ ಸಿಗುತ್ತಿತ್ತೋ ಏನೋ? ಆದರೆ ನಾನು ಹುಟ್ಟಿದ್ದು, ಶೂದ್ರ ಸಮಾಜದಲ್ಲಿ. ಹಾಗಾಗಿ ಶೂದ್ರ ಸಮಾಜದ ಎಂದರೆ ಕೇವಲ ಸೇವೆ ಮಾಡಲು, ಗುಲಾಮಗಿರಿಗೆ ಮಾತ್ರ ಎಂದು ಗೊತ್ತಿರಲಿಲ್ಲ. ಬಡತನದಲ್ಲಿ ಹುಟ್ಟಿ ಬೆಳೆದ ನಾನು ಹಿಂದುತ್ವ ಸಂಘ ಎಂದು ನಾನು ನಿಂತಿದ್ದೆ ನಾಯಕರು ಹೇಳಿದಂತೆ ಬಾಲ ಮುದುರಿಕೊಂಡು ಇರುವವವರಿಗೆ, ಬಕೆಟ್ ಹಿಡಿಯುವವರಿಗೆ ಮಾತ್ರ ಬಿಜೆಪಿಯಲ್ಲಿ ಬೆಲೆ ಇರುವಂತದ್ದು. ಆ ಗುಲಾಮಿ ಮಾನಸಿಕತೆ ನನ್ನಲ್ಲಿಲ್ಲ. ಕೋಟಿ ಚನ್ನಯರು ಸ್ವಾಭಿಮಾನದಿಂದ ಬದುಕಲು ಕಲಿಸಿದವರು. ಅವರ ಸಮುದಾಯದವ ನಾನು. ಜಾತಿ, ಬಡತನದಿಂದಾಗಿ ನನಗೆ ಬಿಜೆಪಿಯಲ್ಲಿ ಅವಕಾಶ ತಪ್ಪಿದೆ ಎಂದು ನಾನು ನೇರವಾಗಿ ಹೇಳಲು ಬಯಸುತ್ತೇನೆ ಎಂದರು.