ಕತ್ತು ಸೀಳಿಕೊಂಡು ಬ್ಯಾಂಕ್ ಮ್ಯಾನೇಜರ್ ಸಾವು !
– ಆತ್ಮಹತ್ಯೆಯೋ? ಅಥವಾ ಕೊಲೆಯೋ?
– ಬೋಂದೆಲ್ನ ಬಾಡಿಗೆ ಮನೆಯಲ್ಲಿ ಘಟನೆ
NAMMUR EXPRESS NEWS
ಮಂಗಳೂರು: ಕರ್ಣಾಟಕ ಬ್ಯಾಂಕಿನ ಮಂಗಳೂರಿನ ಪ್ರಧಾನ ಕಚೇರಿಯ ಜನರಲ್ ಮ್ಯಾನೇಜರ್ ಒಬ್ಬರು ಗುರುವಾರ ಬೆಳಗ್ಗೆ ಚಾಕುವಿನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಂಪ್ವೆಲ್ನಲ್ಲಿರುವ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಚೀಫ್ ಕಂಪ್ಲೇಂಟ್ ಆಫೀಸರ್(ಸಿಸಿಒ) ಆಗಿದ್ದ ವಾದಿರಾಜ ಕೆ.ಎ.(51) ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇವರು ಮೂಲತಃ ಕಾರ್ಕಳದವರು. ಮಂಗಳೂರಿನ ಬೋಂದೆಲ್ನ ೯ಮೆಂಟ್ನ ಮನೆಯಲ್ಲಿ ಗುರುವಾರ ಬೆಳಗ್ಗೆ ಕತ್ತು ಕೊಯ್ದ ಸ್ಥಿತಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಬೆಳಗ್ಗೆ ಇವರ ಪತ್ನಿ ಮಗುವಿನೊಂದಿಗೆ ಶಾಲೆಗೆ ಹೆತ್ತವರ ಸಭೆಗೆ ತೆರಳಿದ್ದರು.
ಈ ವೇಳೆ ಅವರನ್ನು ಬ್ಯಾಂಕ್ಗೆ ಕರೆದೊಯ್ಯಲು ಚಾಲಕ ಕೆಳಗೆ ಕಾಯುತ್ತಿದ್ದರು. ವಾದಿರಾಜ್ ಇನ್ನೂ ಯಾಕೆ ಬಂದಿಲ್ಲ ಎಂದು ಚಾಲಕ ಮೇಲಿನ ಅಂತಸ್ತಿನಲ್ಲಿರುವ ಮನೆಗೆ ಹೋಗಿ ನೋಡಿದಾಗ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗಲೇ ಬಹಳಷ್ಟು. ರಕ್ತ ಸ್ರಾವವಾಗಿದ್ದರಿಂದ ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದರು. ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್” ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇವರ ಸಾವಿಗೆ ಬ್ಯಾಂಕಿನ ಆಡಳಿತ ಮಂಡಳಿ ಸಂತಾಪ ವ್ಯಕ್ತಪಡಿಸಿದೆ.
ಮಂಗಳೂರು ಗ್ರಾಮಾಂತರ ಪೊಲೀಸ್ ತನಿಖೆ
ವಾದಿರಾಜ ಅವರ ಸಾವಿನ ಬಗ್ಗೆ ಮರಣೋತ್ತರ ವರದಿ, ಸಿಸಿ ಕ್ಯಾಮರಾ ದೃಶ್ಯ, ಫೋನ್ ಕರೆಗಳ ಆಧಾರದಲ್ಲಿ ತನಿಖೆ ನಡೆಸಲಾಗುವುದು. ಅವರ ಮನೆಯವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಚಾಕುವಿನಿಂದ ಹೊಟ್ಟೆ ಹಾಗೂ ಕುತ್ತಿಗೆ ಮೇಲೆ ಕೊಯ್ದಿರುವ ಗಾಯವಿದೆ. ಈ ಸಂದರ್ಭ ಮನೆಯಲ್ಲಿ ಅವರು ಒಬ್ಬರೇ ಇದ್ದರು ಎಂದು ಗೊತ್ತಾಗಿದೆ. ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಮಂಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಂತಹಂತವಾಗಿ ಬಡ್ತಿ..!
ಒಂದು ವರ್ಷದಿಂದ ವಾದಿರಾಜ್ ಕುಟುಂಬ ಬೋಂದೆಲ್ನ ಅಪಾರ್ಟ್ಮೆಂಟ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. 33 ವರ್ಷಗಳಿಂದ ಕರ್ಣಾಟಕ ಬ್ಯಾಂಕ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಕ್ಲರ್ಕ್ ಆಗಿ ಸೇರಿದ್ದರು. ಬಳಿಕ ಹಂತಹಂತವಾಗಿ ಬಡ್ತಿ ಪಡೆದು ಈಗ ಜನರಲ್ ಮ್ಯಾನೇಜರ್ ಆಗಿದ್ದರು. ದೇಶದ ವಿವಿಧ ಕಡೆ ಇವರು ಸೇವೆ ಸಲ್ಲಿಸಿದ್ದರು. ನಾಲ್ಕು ವರ್ಷಗಳಿಂದ ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲು ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಕುಟುಂಬ ಸದಸ್ಯರು ಅನ್ನೋನ್ಯತೆಯಿಂದ ಇದ್ದರು ಎಂದು ಮೂಲಗಳು ತಿಳಿಸಿವೆ.