ಸಿದ್ದಾರ್ಥ ರೀತಿಯಲ್ಲಿ ಉದ್ಯಮಿ ಆತ್ಮಹತ್ಯೆ! –
– ನೇತ್ರಾವತಿ ನದಿಗೆ ಹಾರಿ ಚಿಕ್ಕಮಗಳೂರು ಉದ್ಯಮಿ ಆತ್ಮಹತ್ಯೆ
– ಕಾಫಿ ಡೇ ಮಾಲೀಕ ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಮತ್ತೆ ಮರುಕಳಿಸಿದ ಘಟನೆ
NAMMUR EXPRESS NEWS
ಮಂಗಳೂರು: ನಗರದ ಹೊರವಲಯದ ಉಳ್ಳಾಲ ನೇತ್ರಾವತಿ ಸೇತುವೆಯಿಂದ ಕೆಳಗೆ ಹಾರಿ ಚಿಕ್ಕಮಗಳೂರಿನ ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದ್ದು ಉದ್ಯಮಿ ಸಿದ್ದಾರ್ಥ ಆತ್ಮಹತ್ಯೆ ಹೋಲುವಂತಿದೆ. ಚಿಕ್ಕಮಗಳೂರಿನ ಮುಗುಳಬಳ್ಳಿ ಗೋಕುಲ ಫಾರ್ಮ್ ನಿವಾಸಿ ಪ್ರಸನ್ನ (37) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಪ್ರಸನ್ನ ಅವರು ತೊಕ್ಕೊಟ್ಟುವಿನಿಂದ ಮಂಗಳೂರಿಗೆ ಬರುವ ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನದಿಗೆ ಹಾರಿದ್ದಾರೆ. ಘಟನೆಯನ್ನು ಪ್ರತ್ಯಕ್ಷ ಕಂಡವರು ತಕ್ಷಣ ಅವರ ರಕ್ಷಣೆಗೆ ಧಾವಿಸಿದರೂ, ಅದಾಗಲೇ ಅವರು ನದಿಪಾಲಾಗಿದ್ದು ರಕ್ಷಣಾ ಕಾರ್ಯ ಸಾಧ್ಯವಾಗಿಲ್ಲ.
ವ್ಯಾಪಾರಿ ಸೇತುವೆ ಬದಿಯಿಂದ ನದಿಗೆ ಹಾರಿದ್ದು, ಘಟನಾ ಸ್ಥಳದಲ್ಲಿ ಜನರು ಜಮಾಯಿಸಿದ್ದರಿಂದ ರಸ್ತೆ ಸಂಚಾರದಲ್ಲಿ ಕೆಲಕಾಲ ಅಸ್ತವ್ಯಸ್ತ ಆಯಿತು ಪೊಲೀಸರು ಸ್ಥಳಕ್ಕೆ ತೆರಳಿ ಸಂಚಾರ ಸುಗಮಗೊಳಿಸಿದರು. ಯುವಕ ನೀರುಪಾಲಾಗುತ್ತಿರುವ ದೃಶ್ಯವನ್ನು ಕೆಲವರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಕಾರಿನಲ್ಲಿ ಪ್ರಸನ್ನ ಅವರ ಡ್ರೈವಿಂಗ್ ಲೈಸೆನ್ಸ್ ಸಿಕ್ಕಿದೆ. ಕಂಕನಾಡಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಪ್ರಸನ್ನ ಅವರ ಸಂಬಂಧಿಕರು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ನೋಡಲು ಪ್ರಸನ್ನ ಮಂಗಳೂರಿಗೆ ಬಂದಿದ್ದರು ಎಂಬ ಮಾಹಿತಿ ಲಭಿಸಿದೆ. ಸ್ಥಳೀಯ ನಾಡದೋಣಿಗಳಿಂದ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.2019ರಲ್ಲಿ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಆತ್ಮಹತ್ಯೆ ನಂತರ ಸರಣಿ ಆತ್ಮಹತ್ಯೆಗಳೇ ನೇತ್ರಾವತಿ ಸೇತುವೆಯಲ್ಲಿ ನಡೆದಿತ್ತು. ಅದೇ ರೀತಿಯಲ್ಲಿ ಈ ಘಟನೆ ನಡೆದಿದೆ.