ಶಿರಾಡಿ ಘಾಟಿಯಲ್ಲಿ ನಿರಂತರ ಕಾಟ ನೀಡುತ್ತಿರುವ ಕಾಡಾನೆ
– ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಲ್ಲಿ ರಾತ್ರಿ ಪ್ರಯಾಣ ಬಲು ದುಸ್ತರ!
NAMMUR EXPRESS :
ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳನ್ನು ಬೆಂಗಳೂರು ನಗರದ ಜತೆಗೆ ಸಂಪರ್ಕ ಕಲ್ಪಿಸುವುದಕ್ಕೆ ಇರುವ ಎರಡು ಪ್ರಮುಖ ರಸ್ತೆಗಳೆಂದರೆ ಚಾರ್ಮಾಡಿ ಘಾಟಿ ಹಾಗೂ ಶಿರಾಡಿ ಘಾಟಿ ಹೆದ್ದಾರಿ. ಈ ಎರಡು ಹೆದ್ದಾರಿಗಳ ಪೈಕಿ ಹೆಚ್ಚಿನ ಪ್ರಯಾಣಿಕರು ಈಗ ಚಾರ್ಮಾಡಿ ಘಾಟಿ ಮೂಲಕವೇ ಸಂಚರಿಸುತ್ತಿದ್ದಾರೆ. ಏಕೆಂದರೆ, ಶಿರಾಡಿ ಘಾಟಿಯಲ್ಲಿ ಬಿಸಿ ರೋಡ್-ಅಡ್ಡಹೊಳೆ ರಸ್ತೆಯಲ್ಲಿ ಹೆದ್ದಾರಿ ಕಾಮಗಾರಿ ನಡೆಯುವುದರಿಂದ ಆ ಮಾರ್ಗದ ಮೂಲಕ ಸಂಚರಿಸುವುದು ಹೆಚ್ಚಿನ ಸಮಯಾವಕಾಶ ಹಾಗೂ ಕಿರಿಕಿರಿ ಉಂಟು ಮಾಡುತ್ತಿದೆ.
ಆದರೆ, ಶಿರಾಡಿ ಘಾಟಿ ರಸ್ತೆಯು ಇದೀಗ ವಾಹನ ಸವಾರರಿಗೆ ದೊಡ್ಡ ದುಸ್ವಪ್ನವಾಗಿ ಕಾಡಲಾರಂಭಿಸಿದೆ. ಏಕೆಂದರೆ, ಕಳೆದ ಎರಡು ದಿನಗಳಿಂದ ಶಿರಾಡಿ ಘಾಟಿ ರಸ್ತೆಯ ಮಧ್ಯಭಾಗದಲ್ಲೇ ಕಾಡಾನೆಗಳು ಪ್ರತ್ಯಕ್ಷವಾಗಿ ವಾಹನ ಸವಾರರನ್ನು ಭಯಭೀತರನ್ನಾಗಿಸುತ್ತಿದೆ. ಅದರಲ್ಲಿಯೂ ರಾತ್ರಿಹೊತ್ತು ಜನರು ಈ ರಸ್ತೆಯಲ್ಲಿ ಜೀವ ಕೈಯಲ್ಲಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ದಿನ ಕೂಡ ಸವಾರರು ಘಾಟಿಯಲ್ಲಿ ಸಂಚರಿಸುತ್ತಿರಬೇಕಾದರೆ ಕಾಡಾನೆಯೊಂದು ಎದುರಾಗಿದೆ. ಎರಡು ದಿನಗ ಹಿಂದೆ ಕೂಡ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಒಂಟಿ ಸಲಗ ಓಡಾಡುತ್ತಿದ್ದ ದೃಶ್ಯ ಕಾಣಿಸಿತ್ತು. ಹೀಗಾಗಿ, ವಾಹನ ಸವಾರರಿಗೆ ಭೀತಿ ಸೃಷ್ಟಿಸುತ್ತಿರುವ ಕಾಡಾನೆಯನ್ನು ಸೆರೆ ಹಿಡಿಯುವಂತೆ ಈ ಭಾಗದಲ್ಲಿ ಸಂಚರಿಸುತ್ತಿರುವ ಜನರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.