ಹೆಬ್ಬಾವಿನ ದೇಹದಲ್ಲಿತ್ತು ಬರೋಬ್ಬರಿ 11 ಏರ್ ಬುಲೆಟ್!
– ದೇಹದೊಳಗೆ ಉಳಿದಿದೆ ಇನ್ನೂ 9 ಗುಂಡು: ಏನಿದು ಘಟನೆ?
– ಮಂಗಳೂರಿನ ಆನೆಗುಂಡಿ ಬಳಿ ನಡೆದ ಘಟನೆ
NAMMUR EXPRESS NEWS
ಮಂಗಳೂರು: ಹೆಬ್ಬಾವು ಒಂದರ ದೇಹದಲ್ಲಿ ಏರ್ ಗನ್ ನಲ್ಲಿ ಬಳಸುವ ಪೆಲ್ಲೆಟ್ ಬುಲೆಟ್ ಪತ್ತೆಯಾದ ಘಟನೆ ಮಂಗಳೂರಿನ ಆನೆಗುಂಡಿ ನಡೆದಿದೆ. 11 ಬುಲೆಟ್ ಗಳು ಪತ್ತೆಯಾಗಿದ್ದು, ಈ ರೀತಿಯ ಪ್ರಕರಣ ವರದಿಯಾಗಿರುವುದು ಇದೇ ಮೊದಲು ಎನ್ನುತ್ತಾರೆ ಉರಗ ತಜ್ಞ ಭುವನ್ ದೇವಾಡಿಗ
ಪರ್ಶಿಯನ್ ಬೆಕ್ಕನ್ನು ತಿಂದು ನುಂಗಲಾರದೆ ಸಂಕಷ್ಟಪಡುತ್ತಿರುವುದನ್ನು ಗಮನಿಸಿ ಸ್ಥಳೀಯರು ಉರಗತಜ್ಞರಿಗೆ ಕರೆ ಮಾಡಿದ್ದರು. ಈ ವೇಳೆ ಕತ್ತಿನ ಕೆಳ ಭಾಗದಲ್ಲಿ ಬಲೆ ಸಿಲುಕಿ ನುಂಗಲಾರದೆ ಕಷ್ಟಪಡುತ್ತಿತ್ತು. ಅರಣ್ಯ ಇಲಾಖೆ ಮಾಹಿತಿ ಮೇರೆಗೆ ಉರಗತಜ್ಞ ಭುವನ್ ದೇವಾಡಿಗ ಸ್ಥಳಕ್ಕೆ ಆಗಮಿಸಿ ಅರಣ್ಯಾಧಿಕಾರಿಗಳ ಸಹಕಾರದಿಂದ ಬಲೆಯನ್ನು ಕತ್ತರಿಸಿ ಆ ಹೆಬ್ಬಾವನ್ನು ರಕ್ಷಿಸಿದ್ದಾರೆ. ಬಲೆ ಕತ್ತರಿಸಿ ಉರಗ ರಕ್ಷಿಸಿದ ಬಳಿಕ ಸುಮಾರು 8.50 ಫೀಟ್ ಉದ್ದದ, 8 ಕೆಜಿ ತೂಕವುಳ್ಳ ಈ ಹೆಬ್ಬಾವನ್ನು ವೈದ್ಯಕೀಯ ತಪಾಸಣೆಗೆ ಪಶುವೈದ್ಯ ಮರೋಳಿಯ ಡಾ| ಯಶಸ್ವಿ ಬಳಿ ಕೊಂಡೊಯ್ದಾಗ ಅದರ ಹಾವಿನ ದೇಹದಲ್ಲಿ ಅನೇಕ ಕಡೆ ಉಂಡೆಯಂತಹ ಗಟ್ಟಿ ವಸ್ತುಗಳು ಪತ್ತೆಯಾಗಿತ್ತು. ಹೆಚ್ಚಿನ ಚಿಕಿತ್ಸೆಗೆಂದು ಎಕ್ಸ್ರೇ ಮಾಡಿಸಿದಾಗ ದೇಹದಲ್ಲಿ 11 ಏರ್ ಗನ್ ಪೆಲ್ಲೆಟ್ ಬುಲೆಟ್ ಪತ್ತೆಯಾಯಿತು.
ಏರ್ ಗನ್ ಶೂಟ್ ಮಾಡಿದ್ದು ಹೇಗೆ?
ಸುಮಾರು ವರ್ಷಗಳ ಹಿಂದೆಯೇ ಈ ಹೆಬ್ಟಾವಿಗೆ ಏರ್ಗನ್ನಿಂದ ಶೂಟ್ ಮಾಡಿರಬಹುದು. ಇದೇ ಕಾರಣಕ್ಕೆ ಕೆಲವೊಂದು ಬುಲೆಟ್ಗಳ ಮೇಲೆ ಚರ್ಮ ಬೆಳೆದಿತ್ತು. ಎರಡು ಬುಲೆಟ್ಗಳನ್ನು ಸದ್ಯ ಹೊರತೆಗೆಯಲಾಗಿದೆ. ಕೆಲವು ದೇಹದ ಆಳದಲ್ಲಿದ್ದ ಕಾರಣ ಹೆಬ್ಬಾವಿನ ಪ್ರಾಣಕ್ಕೆ ಸಂಚಕಾರವಾಗುವ ಹಿನ್ನಲೆ 9 ಗುಂಡುಗಳು ಹಾಗೆ ಉಳಿದುಕೊಂಡಿದೆ ಎಂದು ತಿಳಿದುಬಂದಿದೆ.