ಟಾಪ್ ನ್ಯೂಸ್ ಮಂಗಳೂರು
ಪೂಂಜಾ ವಿರುದ್ಧ ದಿನೇಶ್ ಗುಂಡೂರಾವ್ ಗರಂ!
– ಪೂಂಜಾ ಗೂಂಡಾಗಿರಿ ಸಹಿಸಲು ಸಾಧ್ಯವಿಲ್ಲ: ದಿನೇಶ್ ಗುಂಡೂರಾವ್
– ಮಂಗಳೂರು ರೈಲ್ವೆ ಕಚೇರಿ ಮುಂದೆ ಕಾರ್ಮಿಕ ಸಂಘಟನೆ ಪ್ರತಿಭಟನೆ
– ನಿಮ್ಮ ಸಮಸ್ಯೆಗೆ ಪರಿಹಾರ: ಮೇ 24ರಂದು ಫೋನ್-ಇನ್
NAMMUR EXPRESS NEWS
ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಬೆಳ್ತಂಗಡಿಯ ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆದರೆ, ಶಾಸಕ ಪೊಲೀಸರ ವಿರುದ್ಧವೇ ಗೂಂಡಾ ವರ್ತನೆ ಮಾಡಿರುವುದು ಅಕ್ಷಮ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ವಿರುದ್ಧ ಧಮ್ಕಿ ಹಾಕಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಗುಂಡೂರಾವ್, ಜನಪ್ರತಿನಿಧಿಯಾಗಿರುವ ಹರೀಶ್ ಪೂಂಜಾ ಅವರು ಅಕ್ರಮ ಲೂಟಿಕೋರರ ಪರವಾಗಿ ನಿಂತು ಸಮಾಜದ ಶಾಂತಿ-ಸುವ್ಯವಸ್ಥೆ ಕಾಪಾಡುವ ಪೊಲೀಸರ ವಿರುದ್ಧವೇ ಗೂಂಡಾ ವರ್ತನೆ ತೋರಿದ್ದಾರೆ. ಸಮಾಜದ ಕಾನೂನು ವ್ಯವಸ್ಥೆ ಬಗ್ಗೆ ಪೂಂಜಾರಿಗೆ ಗೌರವವಿಲ್ಲ. ಒಬ್ಬ ಶಾಸಕರಾಗಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಶಾಸಕರೇ ಸರ್ಕಾಇ ಅಧಿಕಾರಿಗಳಿಗೆ ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸುವುದಕ್ಕೆ ಅಡ್ಡಿಪಡಿಸಿರುವ ಅವರ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಸಮಾಜಘಾತುಕರ ಪರವಾಗಿ ನಿಂತು ಶಾಸಕರು ರಾಜಕಾರಣ ಮಾಡುತ್ತಿರುವುದು ಈ ಪ್ರಕರಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಕಾಂಗ್ರೆಸ್ನವರಿಗೆ ಸಂವಿಧಾನದ ಮೇಲೆ ಗೌರವವಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಸಚಿವರು ಆರೋಪಿಸಿದ್ದಾರೆ.
ಮಂಗಳೂರು ರೈಲ್ವೆ ಕಚೇರಿ ಮುಂದೆ ಕಾರ್ಮಿಕ ಸಂಘಟನೆ ಪ್ರತಿಭಟನೆ
ಮಂಗಳೂರು ಸೆಂಟ್ರಲ್ ಮೆಕ್ಯಾನಿಕಲ್ ಡಿಪೋದಲ್ಲಿ ಕಾರ್ಮಿಕರಿಗೆ ಮಾನಸಿಕ ಒತ್ತಡ ಉಂಟು ಮಾಡುತ್ತಿರುವ ಡ್ಯೂಟಿ ರೋಸ್ಟರ್ ಪರಿಷ್ಕರಣೆ ಮಾಡಬೇಕು ಹಾಗೂ ಮಲೆಯಾಳಂ ಮತ್ತಿತರ ಭಾಷೆಯನ್ನು ಮಾತನಾಡುವ ನೌಕರರ ನಡುವೆ ತಾರತಮ್ಯ ನೀತಿ ಅನುಸರಿಸಬಾರದು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ರೈಲ್ವೆ ಕಾರ್ಮಿಕರ ಸಂಘ(ಬಿಎಂಎಸ್) ವತಿಯಿಂದ ಸೋಮವಾರ ನಗರದ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ಮುಂದೆ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಬಿಎಂಎಸ್ ಕೇರಳ ರಾಜ್ಯ ಉಪಾಧ್ಯಕ್ಷ ಮುರಳೀಧರನ್ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡದೆ ಕಾರ್ಮಿಕರ ಮೇಲೆ ಕೆಲಸದ ಹೊರೆ ಹೇರುವುದನ್ನು ಕೊನೆಗೊಳಿಸಬೇಕೆಂದು ಆಗ್ರಹಿಸಿದರು.
ಜತೆಗೆ ಕಾರ್ಮಿಕರು ಅನಾರೋಗ್ಯಕ್ಕೆ ಒಳಗಾಗುವ ಸಂದರ್ಭದಲ್ಲಿ ಅವರಿಗೆ ಬೆದರಿಕೆ ಹಾಕುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದರು. ಅರ್ಹ ರಜಾ ದಿನಗಳನ್ನು ನಿರಾಕರಿಸುವ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸುವುದಾಗಿ ಹೇಳಿದರು. ಬಿಎಂಎಸ್ ಕರ್ನಾಟಕದ ಮಾಜಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ದಕ್ಷಿಣ ರೈಲ್ವೆ ಕಾರ್ಮಿಕರ ಸಂಘದ ವಿಭಾಗೀಯ ಅಧ್ಯಕ್ಷ ಶ್ಯಾಮಲನ್, ಬಿಎಂಎಸ್ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿದಿನೇಶ್ ಬಂಬ್ರಾಣ, ಜಂಟಿ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಭಾಗವಹಿಸಿದ್ದರು.
ನಿಮ್ಮ ಸಮಸ್ಯೆಗೆ ಪರಿಹಾರ: ಮೇ 24ರಂದು ಫೋನ್-ಇನ್
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಮೇ 24ರಂದು ಸಾರ್ವಜನಿಕರಿಂದ ದೂರು, ಅಹವಾಲು, ಸಲಹೆ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ವಿಶೇಷ ಫೋನ್-ಇನ್ ಕಾರ್ಯಕ್ರಮ ನಡೆಯಲಿದೆ. ಪೊಲೀಸ್ ಆಯುಕ್ತರ ಕಚೇರಿಯ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸುವ ಈ ಫೋನ್ ಇನ್ ಕಾರ್ಯಕ್ರಮವು ಆ ದಿನ ಬೆಳಗ್ಗೆ 10ಗಂಟೆಯಿಂದ 11ಗಂಟೆಯವರೆಗೆ ನಡೆಯಲಿದೆ. ಈ ಫೋನ್ ಇನ್ ಕಾರ್ಯಕ್ರಮಕ್ಕೆ ಸಾರ್ವಜನಿಕರು 0824-2220801 ಅಥವಾ 0824-2220830 ನಂಬರ್ಗೆ ಕರೆ ಮಾಡಬಹುದಾಗಿದೆ.
ಅದೇ ದಿನ ಬೆಳಗ್ಗೆ 11.15ರಿಂದ 12.15 ಗಂಟೆಯವರೆಗೆ ಮಂಗಳೂರು ನಗರದ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಪೊಲೀಸ್ ಆಯುಕ್ತರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಕುಂದುಕೊರತೆಯ ಕುರಿತು ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದ್ದು ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.