ಅನಧಿಕೃತ ಕ್ಲಿನಿಕ್, ಲ್ಯಾಬ್ಗಳಿಗೆ ಬೀಗ!
– ಆರೋಗ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ
– ನೊಂದಣಿಗೆ ಒಂದು ವಾರ ಗಡುವು
NAMMUR EXPRESS NEWS
ಮಂಗಳೂರು: ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಕ್ಲಿನಿಕ್, ಪ್ರಯೋಗಾಲಯಗಳ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಮುಚ್ಚಿಸಿ ಬೀಗ ಜಡಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಾಚರಣೆ ಕೈಗೊಂಡಿತ್ತು. ಕೆಪಿಎಂಇಎ ಕಾಯ್ದೆ-2017ರ ಅಡಿಯಲ್ಲಿ ನೋಂದಣಿಯಾಗದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆ/ ಕ್ಲಿನಿಕ್ಗಳು/ಲ್ಯಾಬೋರೇಟರಿ ಗಳಿಗೆ ತನಿಖಾ ತಂಡದ ಸದಸ್ಯರು ದಿಢೀರ್ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು.ಆಗ ವಾಮಂಜೂರಿನ ಮೂಡುಶೆಡ್ಡೆಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಒಂದು ಕ್ಲಿನಿಕ್ ಹಾಗೂ ಲ್ಯಾಬೋರೇಟರಿ ಹಾಗೂ ನಗರದ ಹಂಪನಕಟ್ಟೆಯಲ್ಲಿರುವ ಒಂದು ಕ್ಲಿನಿಕ್ಗೆ ಬೀಗಮುದ್ರೆ ಹಾಕಿದ್ದಾರೆ.
ನೋಂದಣಿಗೆ ವಾರದ ಗಡುವು
ಮಂಗಳೂರು ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಈಗಾಗಲೇ ಕೆಪಿಎಂಇಎ ಅಡಿ ನೋಂದಣಿ ಮಾಡಿಕೊಳ್ಳದ ಅಲೋಪತಿ ಕ್ಲಿನಿಕ್. ಆಯುಷ್ ಕ್ಲಿನಿಕ್, ಡೆಂಟಲ್ ಕ್ಲಿನಿಕ್, ಜನೆಟಿಕ್ ಲ್ಯಾಬೋ ರೇಟರಿಗಳು, ಫಿಸಿಯೋಥೆರಪಿ ಸೆಂಟರ್ಗಳು, ಲ್ಯಾಬ್ ಹಾಗೂ ಈಗಾಗಲೇ ನೋಂದಣಿಯಾಗಿ ನವೀಕರಿಸಲು ಬಾಕಿ ಇರುವ ಸಂಸ್ಥೆಗಳು ಕಡ್ಡಾಯವಾಗಿ 1 ವಾರದೊಳಗೆ ನೋಂದಣಿ ಮಾಡಬೇಕು. ಈ ಅವಧಿಯೊಳಗೆ ನೋಂದಣಿ ಮಾಡದಿದ್ದಲ್ಲಿ ಕೆಪಿಎಂಇ ಕಾಯ್ದೆಯಡಿ ನಿರ್ದಾಕ್ಷಿಣ್ಯ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಎಚ್ಚರಿಸಿದ್ದಾರೆ.