ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳು ಎಲ್ಲಿದ್ದಾರೆ?!
– ಐವರು ವಾಂಟೆಡ್ ಲಿಸ್ಟ್ ಬಿಡುಗಡೆ ಮಾಡಿದ ಎನ್ಐಎ
– ಕಾಡುಗಳ್ಳ ವೀರಪ್ಪನ್ ಸಹಚರ ಸಾವು: ಏನಿದು ಕೇಸ್?
NAMMUR EXPRESS NEWS
ಮಂಗಳೂರು: ಹಿಂದೂಪರ ಸಂಘಟನೆಯ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಐವರು ಆರೋಪಿಗಳು ಇನ್ನೂ ನಾಪತ್ತೆಯಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪಟ್ಟಿಯನ್ನು ರಾಷ್ಟ್ರೀಯ ತನಿಖಾ ದಳ ಬಿಡುಗಡೆ ಮಾಡಿದೆ.
ಎನ್ಐಎ ವಾಂಟೆಡ್ ಲಿಸ್ಟ್ ನಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಐವರು ದುಷ್ಕರ್ಮಿಗಳ ಹೆಸರು ಪ್ರಕಟಗೊಂಡಿದ್ದು, ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ವಾಂಟೆಡ್ ಲಿಸ್ಟ್ ಅನ್ನು ಎನ್ಐಎ ಬಿಡುಗಡೆಗೊಳಿಸಿದೆ. ಎನ್ಐಎ ಪಟ್ಟಿಯಲ್ಲಿ ಬಿಡುಗಡೆಗೊಂಡಿರುವ ಈ ಎಲ್ಲಾ ಆರೋಪಿಗಳು ನಿಷೇಧಿತ ಪಿಎಫ್ಐ ಸಂಘಟನೆಯ ಪ್ರಕರಣಗಳು, ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದಾರೆ.
ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಹುಡುಕಾಟದಲ್ಲಿರುವ ಎನ್ಐಎ, ಇದೀಗ 24 ಆರೋಪಿಗಳ ಹೆಸರುಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಐವರು ಆರೋಪಿಗಳು ಸೇರಿದ್ದಾರೆ. ಈ ಎಲ್ಲಾ ಆರೋಪಿಗಳ ಸುಳಿವು ಸಿಕ್ಕಲ್ಲಿ ತಿಳಿಸುವಂತೆ ಮನವಿ ಮಾಡಲಾಗಿದೆ. ಕೇರಳದ 11 ಆರೋಪಿಗಳು, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮೂವರು, ಕರ್ನಾಟಕ ಹಾಗೂ ತಮಿಳುನಾಡಿನ ಐವರು ಆರೋಪಿಗಳ ಹೆಸರು ಪ್ರಕಟಿಸಲಾಗಿದೆ. ಆರೋಪಿಗಳ ಹೆಸರು, ಭಾವಚಿತ್ರ, ವಿಳಾಸ ಸಹಿತ ಮಾಹಿತಿ ಪ್ರಕಟಿಸಿ ಸುಳಿವು ಸಿಕ್ಕಲ್ಲಿ ಎನ್ಐಎಗೆ ವಾಟ್ಸ್ಆ್ಯಪ್ ಅಥವಾ ದೂರವಾಣಿ ಕರೆ ಮೂಲಕ ಮಾಹಿತಿ ನೀಡುವಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಬೆಳ್ಳಾರೆ ಮುಸ್ತಫಾ, ಮಸೂದ್ ಅಗ್ನಾಡಿ, ಮೊಹಮ್ಮದ್ ಶರೀಫ್ ಕೊಡಾಜೆ, ಉಮ್ಮರ್ ಅಲಿಯಾಸ್ ಉಮರ್ ಫಾರೂಕ್, ಅಬೂಬ್ಬಕ್ಕರ್ ಸಿದ್ದಿಕ್ ಎಂಬ ಐವರ ಹೆಸರುಗಳನ್ನು ಪ್ರಕಟಿಸಲಾಗಿದೆ.
ಕಾಡುಗಳ್ಳ ವೀರಪ್ಪನ್ ಸಹಚರ ಸಾವು
ಕಾಡುಗಳ್ಳ ವೀರಪ್ಪನ್ ಸಹಚರ ಹಾಗೂ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಜ್ಞಾನಪ್ರಕಾಶ್, ಸಂದನಪಾಳ್ಯ ಗ್ರಾಮದಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ್ದಾನೆ. ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದ ನಿವಾಸಿ ಜ್ಞಾನಪ್ರಕಾಶ್ (68) ಕಾಡುಗಳ್ಳ ವೀರಪ್ಪನ್ ಮುಖ್ಯ ಸಹಚರನಾಗಿದ್ದ. ಭಯಾನಕ ಎನಿಸುವ “ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮುಖ್ಯ ಆರೋಪಿಯೂ ಆಗಿದ್ದ. ಆದ್ದರಿಂದ ಜ್ಞಾನಪ್ರಕಾಶ್ ಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ, ಸುಪ್ರೀಂ ಕೋರ್ಟ್ 2014 ರಲ್ಲಿ ಈತನಿಗೆ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.
29 ವರ್ಷಗಳಿಂದ ಜೈಲಿನಲ್ಲಿಯೇ ಇದ್ದ ಜ್ಞಾನಪ್ರಕಾಶ್ ಗೆ ಮೂರು ವರ್ಷಗಳಿಂದ ಶ್ವಾಸಕೋಸ ಕ್ಯಾನ್ಸರ್ ಬಾಧಿಸಿತ್ತು. ಮಾನವೀಯತೆ ಆಧಾರದಲ್ಲಿ ಸುಪ್ರೀಂ ಜಾಮೀನು ಮಂಜೂರು ಮಾಡಿತ್ತು. ಆದ್ದರಿಂದ ಚಾಮರಾಜನಗರ ನ್ಯಾಯಾಲಯವು ಇಬ್ಬರಿಂದ ಶೂರಿಟಿ ಪಡೆದು ಜಾಮೀನು ಮಂಜೂರು ಮಾಡಿತ್ತು. ಜಾಮೀನು ಮೇಲೆ ಬಿಡುಗಡೆಯಾದ ಜ್ಞಾನಪ್ರಕಾಶ್ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದನು. ಆದರೆ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳುತ್ತಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಸಂದನಪಾಳ್ಯ ಗ್ರಾಮದ ಸ್ವಗೃಹದಲ್ಲಿ ನಿಧನ ಹೊಂದಿದ್ದಾನೆ.