ಬ್ರೇಕ್ ಬದಲು ಎಕ್ಸಿಲೇಟರ್ ತುಳಿದ ಮಹಿಳೆ: ಓರ್ವ ಬಲಿ!
– ಮಂಗಳೂರಿನಲ್ಲಿ ಭೀಕರ ಅಪಘಾತಕ್ಕೆ ಅಮಾಯನ ಜೀವ ಬಲಿ
– ವಾಹನಗಳ ಬಗ್ಗೆ ಹುಷಾರ್ ಜನರೇ ಹುಷಾರ್..!
NAMMUR EXPRESS NEWS
ಮಂಗಳೂರು: ಇತ್ತೀಚಿನ ದಿನಗಳಲ್ಲಿ ನಿರ್ಲಕ್ಷ್ಯದ ವಾಹನ ಚಾಲನೆಗಾಗಿ ಅಮಾಯಕರು ಬಲಿಯಾಗುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಮಂಗಳೂರಿನಲ್ಲಿ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಯಮಸ್ವರೂಪಿಯಂತೆ ಬಂದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಪಡೀಲ್ನ ಫಸ್ಟ್ ನ್ಯೂರೋ ಆಸ್ಪತ್ರೆಯ ಬಳಿ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಮೊಬೈಲ್ ಮಾತನಾಡುತ್ತಿದ್ದ ವ್ಯಕ್ತಿ ಮೇಲೆ ಮಹಿಳೆಯು ನಿರ್ಲಕ್ಷ್ಯದ ಚಾಲನೆಯಿಂದ ಕಾರು ಹತ್ತಿಸಿದ್ದಾರೆ. ಮೃತರನ್ನು ನಮ್ಮ ಕುಡ್ಲ-ವಿಜಾರ್ಡ್ ಕೇಬಲ್ ನೆಟ್ವರ್ಕ್ನಲ್ಲಿ ಟೆಕ್ನಿಶೀಯನ್ ಆಗಿದ್ದ ತೊಕ್ಕೊಟ್ಟುವಿನ ಕಲ್ಲಾಪು ನಿವಾಸಿ ಹರೀಶ್(43) ಎಂದು ಗುರುತಿಸಲಾಗಿದೆ.
ಘಟನೆ ನಡೆದಿದ್ದು ಹೇಗೆ?
ಫಸ್ಟ್ನ್ಯೂರೋ ಆಸ್ಪತ್ರೆಗೆ ಕೇಬಲ್ ಬಿಲ್ ಕಲೆಕ್ಷನ್ಗೆಂದು ಬಂದಿದ್ದ ಹರೀಶ್ ಅವರು ಫುಟ್ಪಾತ್ನಲ್ಲಿ ಬೈಕ್ ನಿಲ್ಲಿಸಿ ಮೊಬೈಲ್ನಲ್ಲಿ ಮಾತನಾಡುತ್ತ ನಿಂತಿದ್ದರು. ಅಷ್ಟೊತ್ತಿಗೆ ಹೆದ್ದಾರಿಯಲ್ಲಿ ಬಂಟ್ವಾಳ ಕಡೆಯಿಂದ ಬಂದ ಡಸ್ಟರ್ ಕಾರು ಡಿವೈಡರ್ಗೆ ಡಿಕ್ಕಿಯಾಗಿ ಅಲ್ಲಿಂದ ಎಡಕ್ಕೆ ಬಂದು ನೇರವಾಗಿ ಹರೀಶ್ಗೆ ಡಿಕ್ಕಿಯಾಗಿ ಮತ್ತೆ ಫುಟ್ಪಾತ್ ಮೇಲೆ ಹತ್ತಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಫಸ್ಟ್ನ್ಯೂರೋ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಮಹಿಳೆಯು ಬ್ರೇಕ್ ಬದಲಿಗೆ ಎಕ್ಸಿಲೇಟರ್ ತುಳಿದಿರುವ ಪರಿಣಾಮ ಅಮಾಯಕರೊಬ್ಬರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಜಮಾಯಿಸಿದ್ದು, ಮಹಿಳೆಯ ನಿರ್ಲಕ್ಷ್ಯದ ಕಾರು ಚಾಲನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ತಮ್ಮ ಪತಿ ಮೃತಪಟ್ಟಿರುವ ವಿಷಯ ತಿಳಿದು ಪತ್ನಿ ಸ್ಥಳಕ್ಕೆ ದೌಡಾಯಿಸಿ ಮೃತದೇಹದ ಮುಂದೆ ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಸ್ಕೂಟಿಗೆ ಟಿಪ್ಪರ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು; ಇಬ್ಬರಿಗೆ ಗಾಯ!
ಕಾರ್ಕಳದ ಪಳ್ಳಿ ಗರಡಿ ರಸ್ತೆಯಲ್ಲಿ ಟಿಪ್ಪರ್ ಹಾಗೂ ಸ್ಕೂಟಿ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಳ್ಳಿ ಗರಡಿಗೆ ಹೋಗುವ ರಸ್ತೆಯಲ್ಲಿ ಈ ಅಪಘಾತ ಇಂದು ಬೆಳಗ್ಗೆ ಸಂಭವಿಸಿದೆ. ಸ್ಕೂಟಿಗೆ ಟಿಪ್ಪರ್ ಡಿಕ್ಕಿಯಾದ ರಭಸಕ್ಕೆ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ನೇಪಾಳಿ ಮೂಲದ ಕಮಲ್ ಎಂದು ಗುರುತಿಸಲಾಗಿದೆ. ಜತೆಗೆ ಪ್ರಸನ್ನ ಹಾಗೂ ಬಚ್ಚನ್ ಎಂಬವರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಒಬ್ಬರ ಸ್ಥಿತಿ ಕೂಡ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಅಜ್ಜರಕಾಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.