ಅಯ್ಯೋ ಕರೆಂಟ್ ಶಾಕ್: 3 ಕರಡಿ ದುರಂತ ಸಾವು!
– ಆಹಾರ ಹುಡುಕಿ ಬಂದಿದ್ದ ಮೂಕ ಪ್ರಾಣಿಗಳು ಒದ್ದಾಡಿ… ಒದ್ದಾಡಿ… ಜೀವ ತೆತ್ತವು!
– ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಸಾದರಹಳ್ಳಿಯಲ್ಲಿ ಘಟನೆ
NAMMUR EXPRESS NEWS
ಅರಸೀಕೆರೆ: ಧಾರಾಕಾರ ಮಳೆ-ಗಾಳಿಯಿಂದಾಗಿ ತುಂಡಾಗಿ
ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೂರು ಕರಡಿಗಳು ದಾರುಣವಾಗಿ ಸಾವನ್ನಪ್ಪಿರುವ ದುರಂತ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕಲ್ಲು ಸಾದರಹಳ್ಳಿ ಬಳಿ ನಡೆದಿದೆ.
ಆಹಾರ ಅರಸಿ ಅಲೆದಾಡುತ್ತಿದ್ದ 7 ವರ್ಷದ ಎರಡು ಜೋರಿ ಕರಡಿ ಹಾಗೂ ಒಂದು ವರ್ಷದ ಮರಿ ಜಾಂಬವಂತ ಹಸಿವು ನೀಗಿಸಿಕೊಳ್ಳುವ ಮುನ್ನವೇ ಜೀವ ಕಳೆದುಕೊಂಡಿವೆ. ಈ ದುರಂತ ನಿಜಕ್ಕೂ ಪ್ರತಿಯೊಬ್ಬರೂ ಮಮ್ಮಲ ಮರುವಂತೆ ಮಾಡಿದೆ. ಕಳೆದ ಹಲವು ದಿನಗಳಿಂದ ಅರಸೀಕೆರೆ ಭಾಗದಲ್ಲಿ ಕರಡಿ ಕಾಟ ತುಸು ಮಿತಿ ಮೀರಿದೆ. ಆಹಾರ-ನೀರು ಅರಸಿ ಜಾಂಬವ ಪಡೆ ಕಾಡಿನಿಂದ ನಾಡಿಗೆ ಬರುವುದು ಸಾಮಾನ್ಯವಾಗಿದೆ.
ಹೀಗೆಯೇ ಕಾಡಿನಿಂದ ಬಂದು ಅರಣ್ಯದಂಚಿನಲ್ಲೇ ಇದ್ದ ಕಲ್ಲು ಸಾದರಹಳ್ಳಿಯ ರೈತರೊಬ್ಬರ ಜಮೀನಿನಲ್ಲಿ ನಡೆದು ಹೋಗುತ್ತಿದ್ದ ವೇಳೆ, ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ೭ ವರ್ಷದ ಒಂದು ಹೆಣ್ಣು ಹಾಗೂ ಒಂದು ಗಂಡು ಕರಡಿ ಮತ್ತು ಮರಿ ಸೇರಿ ಮೂರು ಮೂಕ ಪ್ರಾಣಿಗಳು ಹಂತ ಹಂತವಾಗಿ ಶಾಶ್ವತವಾಗಿ ಕಣ್ಮುಚ್ಚಿವೆ.
ಸರಣಿ ದುರಂತ: ಮೂರೂ ಕರಡಿಗಳು ಒಟ್ಟಿಗೇ ಆಹಾರ ಹುಡುಕಿಕೊಂಡು ಅರಣ್ಯದ ಪಕ್ಕದಲ್ಲೇ ಇದ್ದ ರೈತರ ಜಮೀನಿಗೆ ಬಂದಿವೆ. ಅಲ್ಲೇ ಆಹಾರಕ್ಕಾಗಿ ಅಲೆದಾಡುತ್ತಿದ್ದಾಗ ರೈತನ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಮೊದಲು ಗಂಡು ಕರಡಿ ತುಳಿದಿದೆ. ಕೂಡಲೇ ವಿದ್ಯುತ್ ಶಾಕ್ನಿಂದ ಕಿರುಚಾಡುತ್ತಾ ಒದ್ದಾಡಿ, ಒದ್ದಾಡಿ ಪ್ರಾಣ ಬಿಟ್ಟಿದೆ.
ಗಂಡು ಕರಡಿ ಒದ್ದಾಡುವುದನ್ನು ಕಂಡ ಮರಿ ಕರಡಿ ಹಾಗೂ ತಾಯಿ ಕರಡಿ ಗಾಬರಿಯಿಂದ ಓಡಲಾರಂಭಿಸಿವೆ. ಈ ಧಾವಂತದಲ್ಲಿ ಗಂಡು ಕರಡಿ ಮೃತಪಟ್ಟ ಜಮೀನಿನ ಪಕ್ಕದ ಮತ್ತೊಬ್ಬ ರೈತನ ಭೂಮಿಯಲ್ಲೂ ಅದೇ ಮಾರ್ಗದ ವಿದ್ಯುತ್ ತಂತಿ, ತುಂಡಾಗಿ ಬಿದ್ದಿರುವುದನ್ನು ಗಮನಿಸಿದೇ ಹೆಣ್ಣು ಕರಡಿ ಮತ್ತು ಮರಿ ತುಳಿದಿವೆ. ಕರೆಂಟ್ ಶಾಕ್ನಿಂದ ಎರಡೂ ಸ್ಥಳದಲ್ಲೇ ಮೃತಪಟ್ಟಿವೆ.
ಸೋಮವಾರ ಬೆಳಗ್ಗೆ ರೈತರು ಜಮೀನಿನ ಬಳಿ ಬಂದ ವೇಳೆ
ಕೆಲವೇ ದೂರದ ಅಂತರದಲ್ಲಿ ಮೂರು ಕರಡಿ ಸಾವನ್ನಪ್ಪಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ಕರೆಂಟ್ ಶಾಕ್ನಿಂದಲೇ ಮೂರು ಕರಡಿ ಮೃತಪಟ್ಟಿವೆ ಎಂಬುದು ಖಾತ್ರಿಯಾಗಿದೆ.
ಕೂಡಲೇ ಅರಣ್ಯ ಇಲಾಖೆ ಹಾಗೂ ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಅರಣ್ಯ ಹಾಗೂ ವಿದ್ಯುತ್
ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.
ಸರಣಿ ದುರಂತಕ್ಕೆ ಅಕ್ಷರಶಃ ಮರುಕ ಪಟ್ಟ ಸ್ಥಳೀಯರು ಹಾಗೂ ರೈತರು, ಕರಡಿಗಳು ತಮ್ಮ ಪ್ರಾಣ ಕಳೆದುಕೊಂಡು ನಮ್ಮ ಪ್ರಾಣ ಉಳಿಸಿವೆ ಎಂದು ನಿಟ್ಟುಸಿರು ಬಿಟ್ಟರು. ಸ್ಥಳದಲ್ಲೇ ಮೂರೂ ಕರಡಿಗಳ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಅಂತ್ಯಕ್ರಿಯೆ ನಡೆಸಲಾಯಿತು.
ಕಿಡಿ ಕಾರಿದ್ದ ಕೆಎಂಶಿ: ಜಿಪಂ ಸಭಾಂಗಣದಲ್ಲಿ ಸೋಮವಾರ ಸಂಸದರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ಮಾತನಾಡಿದ್ದ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಕಾಡುಪ್ರಾಣಿಗಳು ಕಾಡಿನಿಂದ ನಾಡಿಗೆ ಬರುವುದು ಹಸಿವಿನಿಂದಲೇ, ಅಲ್ಲೇ ಅವುಗಳಿಗೆ ಬೇಕಾದ ಆಹಾರ, ಕುಡಿಯುವ ನೀರು ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ವಿಶೇಷವಾಗಿ ಕರಡಿಗಳಿಗೆ ನೀರು ಸಿಗಲು ಸರ್ಕಾರದ ಗಮನ ಸೆಳೆದು ಚೆಕ್ಡ್ಯಾಂ ನಿರ್ಮಿಸಿ ತಾಕೀತು ಮಾಡಿದ್ದರು. ಈ ನಡುವೆಯೇ ನಡೆಯ ಬಾರದ ದುರಂತ ನಡೆದು ಹೋಗಿದೆ.
.