ಮೈಸೂರು ಕರಗಕ್ಕೆ ಶತಮಾನದ ಸಂಭ್ರಮ..!
– ಹೇಗಿರಲಿದೆ ಆಚರಣೆ?
NAMMUR EXPRESS NEWS
ಮೈಸೂರು: ಸಾಂಸ್ಕೃತಿಕ ನಗರಿಯ ಮೆರಗು ಹೆಚ್ಚಿಸಿರುವ ಆಚರಣೆಗಳಲ್ಲಿ ಇಲ್ಲಿನ ಕರಗ ಮಹೋತ್ಸವ ಕೂಡ ಒಂದು. ಇದೀಗ ಈ ಉತ್ಸವವು ಶತಮಾನದ ಸಂಭ್ರಮದಲ್ಲಿದೆ. ಮೂಲತಃ ಮೈಸೂರು ನಗರ ನಿವಾಸಿಗಳೇ ಆದವರಿಗೆ ಐದು ದಿನಗಳ ಕಾಲ ನಡೆಯುವ ಈ ಕರಗದ ಸಂಭ್ರಮದ ನೆನಪು ಅಚ್ಚಳಿಯದೇ ಉಳಿದಿರುತ್ತದೆ. ಅದರಲ್ಲೂ ಇಟ್ಟಿಗೆಗೂಡು, ನಜರಬಾದ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದ್ದವರು, ಇರುವವರಿಗೆ ಇದೊಂದು ವಿಶಿಷ್ಟ ಅನುಭವ. ಕರಗ ಹೊತ್ತ ಕರಗಧಾರಿಗಳು ಇಟ್ಟಿಗೆಗೂಡಿನಿಂದ ಆರಂಭಿಸಿ ರಾತ್ರಿಯಿಡೀ ನಗರದ ವಿವಿಧ ಬೀದಿಗಳಲ್ಲಿ ಹೆಜ್ಜೆ ಹಾಕುತ್ತಿದ್ದರೆ ಅವರೊಟ್ಟಿಗೆ ನೂರಾರು ಭಕ್ತರು ಜಾಗರಣೆ ಇದ್ದು, ತಾವೂ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಈ ಸಂದರ್ಭದಲ್ಲಿನ ಕುಣಿತ, ಕಲಾ ತಂಡಗಳ ಪ್ರದರ್ಶನಗಳು ಹೊಸತೊಂದು ಅನುಭವ ಕಟ್ಟಿಕೊಡುತ್ತ ಬಂದಿವೆ.
ಶಕ್ತಿ ದೇವತೆಗಳ ಆರಾಧನೆ: ಇಟ್ಟಿಗೆಗೂಡು ಕರಗವು ಚಾಮುಂಡೇಶ್ವರಿ ಹಾಗೂ ಮಾರಿಯಮ್ಮ ಶಕ್ತಿ ದೇವತೆಗಳ ಆರಾಧನೆಗೆ ಮೀಸಲಾದ ಆಚರಣೆ. ದುಷ್ಟಶಕ್ತಿಗಳ ನಿಗ್ರಹಕ್ಕಾಗಿ ಚಾಮುಂಡಿ ಹಾಗೂ ಸಾಂಕ್ರಾಮಿಕ ರೋಗ, ಬರ, ಕ್ಷಾಮಗಳ ನಿವಾರಣೆಗಾಗಿ ಮಾರಿಯಮ್ಮನ ಆರಾಧನೆ ಮಾಡುವ ಸಂಪ್ರದಾಯ ನಡೆಯುತ್ತ ಬಂದಿದೆ. ಹರೀಶ್, ಟ್ರಸ್ಟಿ, ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್ಶತಮಾನದ ಹಿನ್ನೆಲೆಯಲ್ಲಿ ಈ ಬಾರಿ ಕರಗ ಇನ್ನಷ್ಟು ಅದ್ದೂರಿಯಾಗಿರಲಿದ್ದು 26 ಕಲಾ ತಂಡಗಳು ಪಾಲ್ಗೊಳ್ಳಲಿವೆ. ಶನಿವಾರ ಇಡೀ ರಾತ್ರಿ ಮೆರವಣಿಗೆ ಸಾಗಲಿದೆ.
ಸರಿಯಾಗಿ ಶತಮಾನದ ಹಿಂದೆ ಮೈಸೂರು ಅರಮನೆಗೆ ಸಮೀಪವೇ ಇರುವ ಇಟ್ಟಿಗೆಗೂಡು ಸುತ್ತಮುತ್ತ ಪ್ಲೇಗ್, ಕಾಲರಾ ಹಾವಳಿ ಹೆಚ್ಚಾಗಿ ಜನ ಸಾಯುತ್ತ ಬಂದರು. ಹೀಗಾಗಿ ಹಿರಿಯರೆಲ್ಲ ಸೇರಿ ದೇವಿಯರ ಮೂರ್ತಿಗಳನ್ನು ಹೊತ್ತು ಕರಗ ಆಚರಣೆ ಆರಂಭಿಸಿದರು. ಆ ವರ್ಷ ಸಾವಿನ ಪ್ರಮಾಣವೂ ಕಡಿಮೆ ಆಗಿ, ಮಳೆ-ಬೆಳೆಯೂ ಹೆಚ್ಚಾಯಿತು. ಅಲ್ಲಿಂದ ಮೈಸೂರು ಕರಗ ನಿರಂತರವಾಗಿ ನಡೆದುಕೊಂಡು ಬಂದಿದೆ’ ಎನ್ನುತ್ತಾರೆ ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್ನ ಪದಾಧಿಕಾರಿಗಳು.
ಮೇಘಾ ಇಟ್ಟಿಗೆಗೂಡು, ನಿವಾಸಿಕರಗ ಎಂದರೆ ನಮಗೆ ಮತ್ತೊಂದು ದಸರಾ ನೆನಪಿಸುತ್ತದೆ. ಉತ್ಸವದ ರೀತಿಯಲ್ಲಿ ಐದು ದಿನ ಕಾಲದ ಈ ಆಚರಣೆಯಲ್ಲಿ ನಮ್ಮ ನೆರೆಹೊರೆ ಪ್ರದೇಶದವರೂ ಭಾಗಿ ಆಗುತ್ತಾರೆ. ಬೆಂಗಳೂರು ಹಸಿ ಕರಗವಾದರೆ, ಇಲ್ಲಿ ಎರಡು ವಿಗ್ರಹಗಳನ್ನು ಹೊತ್ತು ಕರಗಧಾರಿಗಳು ಮೆರವಣಿಗೆ ಹೊರಡುತ್ತಾರೆ. ಮನೆಮನೆಗೆ ತೆರಳಿ ಪೂಜೆ ಸ್ವೀಕರಿಸುತ್ತಾರೆ. ಮೆರವಣಿಗೆ ಸಂದರ್ಭ ಭಕ್ತರು ರಸ್ತೆಗಳಲ್ಲೇ ಕರಗಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ವರ್ಷ ಕರಗ ಧಾರಣೆಗೆ ಈಗಾಗಲೇ 80ಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ವಿವರಿಸುತ್ತಾರೆ.
ಹೇಗಿರಲಿದೆ ಆಚರಣೆ?
ಈ ವರ್ಷ ಶತಮಾನದ ಕರಗ ಮಹೋತ್ಸವಕ್ಕೆ ಇಟ್ಟಿಗೆಗೂಡಿನ ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್ ಅದ್ದೂರಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ದೇವಸ್ಥಾನದ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದ್ದು ಸುತ್ತಲಿನ ಪ್ರಮುಖ ಬೀದಿಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗುತ್ತಿದೆ. ಬುಧವಾರ (ಮೇ 15) ಬೆಳಿಗ್ಗೆ ಚಾಮುಂಡೇಶ್ವರಿ ಹಾಗೂ ಮಾರಿಯಮ್ಮನಿಗೆ ಪೂಜೆ ಸಲ್ಲಿಸಿ ಚಾಮುಂಡಿ ಬೆಟ್ಟದ ಪಾದದ ಬಳಿಯಿಂದ ಚಾಮುಂಡಿ ಹಾಗೂ ಕೋಟೆ ಮಾರಮ್ಮನ ದೇವಸ್ಥಾನದಿಂದ ಮಾರಿಯಮ್ಮನ ಕರಗವನ್ನು ತರಲಾಗುತ್ತದೆ. ಗುರುವಾರ ಹಾಗೂ ಶುಕ್ರವಾರದಂದು ಈ ಕರಗಗಳು ಸುತ್ತಲಿನ ಬೀದಿಗಳಲ್ಲಿ ಸಂಚರಿಸಿ ಮನೆಗಳಲ್ಲಿ ಭಕ್ತರಿಂದ ಪೂಜೆ ಸ್ವೀಕರಿಸಲಿವೆ.
ಶನಿವಾರ ರಾತ್ರಿ (ಮೇ 18) 8ಕ್ಕೆ ಇಟ್ಟಿಗೆಗೂಡಿನಿಂದ ಕರಗಗಳ ಮೆರವಣಿಗೆ ಆರಂಭ ಆಗಲಿದೆ. ಅಲ್ಲಿಂದ ಸುಮಾರು 12 ಕಿ.ಮೀ. ಉದ್ದಕ್ಕೆ ಮೆರವಣಿಗೆ ನಡೆಯಲಿದ್ದು ಇಡೀ ರಾತ್ರಿ ಕರಗಧಾರಿಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದ್ದಾರೆ. ಮರುದಿನ ಬೆಳಿಗ್ಗೆ ಮತ್ತೆ ಕರಗವು ದೇವಸ್ಥಾನ ತಲುಪಲಿದೆ. ಭಾನುವಾರದಂದು ಓಕುಳಿ ತಂಬಿಟ್ಟಿನ ಆರತಿಯಂಥ ಆಚರಣೆಗಳೊಂದಿಗೆ ಕರಗ ಸಂಪನ್ನಗೊಳ್ಳಲಿದೆ. ಮೇ 19ರಂದು ಪಶ್ಚಿಮ ವಾಹಿನಿಯಲ್ಲಿ ಕರಗವನ್ನು ವಿಸರ್ಜಿಸಲಾಗುತ್ತದೆ.