ಮೈಸೂರು ಟಾಪ್ 3 ನ್ಯೂಸ್..!
– ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅಪಘಾತ; ಇಬ್ಬರು ಸಾವು!
– ಏಕಾಏಕಿ ಮಗುಚಿ ಬಿದ್ದ ಟ್ರ್ಯಾಕ್ಟರ್: ಯುವಕ ಸ್ಥಳದಲ್ಲೇ ದುರ್ಮರಣ
– ರೈಲ್ವೆ ಹಳಿ ಮೇಲೆ ಬಾಲಕನ ಮೃತದೇಹ ಪತ್ತೆ: ಕೊಲೆ ಶಂಕೆ!
NAMMUR EXPRESS NEWS
ಮಂಡ್ಯ: ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಇಬ್ಬರು ಸಾವಿಗೀಡಾಗಿ, ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿರುವ ದುರ್ಘಟನೆ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇ ನಲ್ಲಿ ಘಟಿಸಿದೆ. ಬೆಂಗಳೂರು- ಮೈಸೂರು ಹೆದ್ದಾರಿಯ ನಡುವಿನ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ರುದ್ರಾಕ್ಷಿಪುರ ಗ್ರಾಮದಲ್ಲಿ ಅಪಘಾತ ನಡೆದಿದೆ. ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಹಾಗೂ ಪುತ್ರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಬಗಲಕುಂಟೆ ನಿವಾಸಿಗಳಾದ ಕಲಾ (40), ಪುತ್ರ ದರ್ಶನ್ (21) ಮೃತಪಟ್ಟವರು. ಕಾರಿನ ಹಿಂಬದಿಯಲ್ಲಿದ್ದ ಪುತ್ರಿ ಮೇಘನ ಹಾಗೂ ಅಳಿಯ ಮಂಜುನಾಥ್ ಅವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಮಿಮ್ಸ್ ಶವಗಾರಕ್ಕೆ ಮೃತ ದೇಹಗಳನ್ನು ರವಾನಿಸಲಾಗಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಕಾಏಕಿ ಮಗುಚಿ ಬಿದ್ದ ಟ್ರ್ಯಾಕ್ಟರ್: ಯುವಕ ಸ್ಥಳದಲ್ಲೇ ದುರ್ಮರಣ!
ಮೈಸೂರು: ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದ ಪರಿಣಾಮ ಯುವ ರೈತನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಹಳೆಮಿರ್ಲೆ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಜಮೀನು ಉಳುಮೆ ಮಾಡಲು ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದಾಗ ಟ್ರ್ಯಾಕ್ಟರ್ ಏಕಾಏಕಿ ಮಗುಚಿ ಬಿದ್ದಿದ್ದು, ಟ್ರ್ಯಾಕರ್ ಅಡಿ ಸಿಲುಕಿದ ಯುವಕ ಮನೊಜ್ (23) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಮನೋಜ್ ಕುಮಾರ್ ಎಂಬುವವರ ಪುತ್ರ. ಸಲಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರೈಲ್ವೆ ಹಳಿ ಮೇಲೆ ಬಾಲಕನ ಮೃತದೇಹ ಪತ್ತೆ: ಕೊಲೆ ಶಂಕೆ
ಹಾಸನ : ನಗರದ ಹೊರ ವಲಯ ಬಸವನಹಳ್ಳಿ ಬಳಿಯ ರೈಲ್ವೆ ಹಳಿ ಮೇಲೆ ಬಾಲಕನ ಮೃತದೇಹ ಪತ್ತೆಯಾಗಿರುವುದು ವರದಿಯಾಗಿದೆ.
ಮೃತ ಬಾಲಕನನ್ನು ಚಿಕ್ಕಹೊನ್ನೇನಹಳ್ಳಿ ಗ್ರಾಮದ ನಿವಾಸಿಗಳಾದ ವೆಂಕಟೇಶ್ ಹಾಗೂ ರೂಪಾ ದಂಪತಿ ಪುತ್ರ ಕುಶಾಲ್ ಗೌಡ(12) ಎಂದು ಗುರುತಿಸಲಾಗಿದೆ. ಮಂಗಳವಾರ ಶಾಲೆ ಮುಗಿಸಿ ಬಂದ ಬಳಿಕ ಕಣ್ಣಮುಚ್ಚಾಲೆ ಆಡುತ್ತಿದ್ದ ವೇಳೆ ಬಚ್ಚಿಟ್ಟುಕೊಳ್ಳಲು ಹೋದ ಬಾಲಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಎನ್ನಲಾಗಿದೆ.
ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಬಾಲಕನ ಪತ್ತೆಗೆ ಹುಡುಕಾಟ ನಡೆಸಿದರೂ ಬಾಲಕನ ಸುಳಿವು ಸಿಕ್ಕಿರಲಿಲ್ಲ. ಬುಧವಾರ ಮಧ್ಯಾಹ್ನ ಬಾಲಕನ ಮೃತದೇಹ ರೈಲ್ವೆ ಹಳಿ ಪತ್ತೆಯಾಗಿದೆ. ವಿಷಯ ತಿಳಿದ ಹಾಸನ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಹಾಗೂ ಎಫ್ಎಸ್ ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಲಕನನ್ನು ಕೊಲೆ ಮಾಡಿ ರೈಲ್ವೆ ಹಳಿ ಬಳಿ ಹಾಕಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.